

ಚಾಮರಾಜನಗರ: ಅಂದು ಲೋಕಸಭೆ ಚುನಾವಣೆಗೆ ಮತದಾನ ಮಾಡಲು ಬಂದು ಕಲ್ಲೇಟು ತಿಂದು ಇಂದು ಕಿಡಿಗೇಡಿಗಳು ಪೈಪ್‌ಲೈನ್ ಕಿತ್ತು ಹಾಕಿರುವುದರಿಂದ ಕಲುಷಿತ ನೀರು ಸೇವಿಸುವ ಶಿಕ್ಷೆ ಅನುಭವಿಸುತ್ತಿರುವ ಮೆಂದಾರೆ ಗ್ರಾಮಕ್ಕೆ ಗುರುವಾರ ಹೊಸ ಪೈಪ್‌ಲೈನ್ ಅಳವಡಿಕೆ ಮಾಡಲಾಗಿದೆ.
ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಆ.28ರಂದು ‘ನಿತ್ಯ ಕೊಳಚೆ ನೀರು ಕುಡಿಯುವ ಶಿಕ್ಷೆ’ ಶೀರ್ಷಿಕೆಯಡಿ ಪ್ರಕಟಿಸಿರುವ ವರದಿ ಪರಿಣಾಮ ಬೀರಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ-ಮೆಂದಾರೆ ಗ್ರಾಮಗಳು ಎಂಪಿ ಎಲೆಕ್ಷನ್‌ನಲ್ಲಿ ಸದ್ದು ಮಾಡಿದ್ದವು. ಇಂಡಿಗನತ್ತ ಗ್ರಾಮಸ್ಥರು ಮೂಲಸೌಕರ್ಯಗಳಿಗಾಗಿ ಒತ್ತಾಯಿಸಿ ಮತದಾನ ಬಹಿಷ್ಕಾರ ಮಾಡಿದ್ದರು. ಇದೇ ಮತಗಟ್ಟೆ ವ್ಯಾಪ್ತಿಯ ಮೆಂದಾರೆ ಗ್ರಾಮಸ್ಥರು ಮತದಾನ ಮಾಡಲು ಬಂದಾಗ ಗಲಭೆ ನಡೆದು ಕಲ್ಲೇಟು ತಿಂದಿದ್ದರು.
ಅಕ್ಕ-ಪಕ್ಕದ ಗ್ರಾಮಗಳಲ್ಲಿ ಪ್ರಕ್ಷ್ಯಬ್ಧ ವಾತಾವರಣ ನಿರ್ಮಾಣವಾಗಿತ್ತು. ಇತ್ತೀಚೆಗೆ ಇಂಡಿಗನತ್ತ ಮಾರ್ಗದಲ್ಲಿ ಮೆಂದಾರೆಗೆ ಅಳವಡಿಸಿರುವ ಕುಡಿಯುವ ನೀರಿನ ಪೈಪ್‌ಲೈನ್ ಅನ್ನು ಯಾರೋ ಕಿಡಿಗೇಡಿಗಳು ಅಲ್ಲಲ್ಲಿ ತುಂಡು ಮಾಡಿದ್ದರು. ಇದರಿಂದಾಗಿ ಮೆಂದಾರೆ ಗ್ರಾಮಸ್ಥರಿಗೆ ಕುಡಿಯಲು ನೀರಿಲ್ಲದೆ ಗುಡ್ಡದ ಕೆಳಗೆ ಇರುವ ಕಲುಷಿತ ಬಾವಿ ನೀರನ್ನೇ ಬಳಕೆ ಮಾಡಬೇಕಿತ್ತು. ಕಳೆದ 15 ದಿನಗಳಿಂದ ಮೆಂದಾರೆ ಗ್ರಾಮಸ್ಥರು ಇದೇ ನೀರನ್ನು ಕುಡಿಯುತ್ತಿದ್ದರು.
ಈ ಕುರಿತು ವಿಜಯವಾಣಿ ಪ್ರಕಟಿಸಿದ ವಿಸ್ತೃತ ವರದಿಯನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿತು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಕೂಡ ತಕ್ಷಣ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು. ಗ್ರಾಮ ಪಂಚಾಯಿತಿ ಪಿಡಿಒ ಕಿರಣ್ ಎಚ್ಚೆತ್ತುಕೊಂಡು ಹೊಸ ಪೈಪ್‌ಲೈನ್ ಅಳವಡಿಸುವ ಕಾರ್ಯವನ್ನು ಗುರುವಾರ ಮಾಡಿಸಿದರು. ಮೆಂದಾರೆ ಗ್ರಾಮಕ್ಕೆ ಇಂಡಿಗನತ್ತ ಬಳಿ ಇರುವ ಬೋರ್‌ವೆಲ್ ಮೂಲಕ ಕುಡಿಯುವ ನೀರು ಸರಬರಾಜು ಆಗುತ್ತದೆ. ಇದಕ್ಕಾಗಿ ಅಳವಡಿಸಿದ್ದ ಪೈಪ್‌ಗಳನ್ನು ಯಾರೋ ಕಿಡಿಗೇಡಿಗಳು ಅಲ್ಲಲ್ಲಿ ಕತ್ತರಿಸಿದ್ದರು. ಇದೀಗ ಈ ಜಾಗದಲ್ಲಿ ಹೊಸ ಪೈಪ್ ಅನ್ನು ಹಾಕುವ ಕಾರ್ಯ ಒಂದೇ ದಿನದಲ್ಲಿ ಸಂಪೂರ್ಣ ಪೂರ್ಣಗೊಂಡಿದೆ.
ಇಂದು ನೀರಿನ ಸೌಲಭ್ಯ:
ಬೋರ್‌ವೆಲ್‌ನಿಂದ ಬರುವ ನೀರು ಮೆಂದಾರೆಗೆ ಸರಬರಾಜು ಮಾಡಲು ಸೋಲಾರ್ ವ್ಯವಸ್ಥೆ ಕಲ್ಪಿಸಲಾಗಿದೆ. ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತ ಗುರುವಾರ ಮೋಡಕವಿದ ವಾತಾವರಣ ಮತ್ತು ಮಳೆ ಇದ್ದ ಕಾರಣ ಸೋಲಾರ್‌ನಿಂದ ನೀರೆತ್ತಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಶುಕ್ರವಾರ ನೀರಿನ ಸೌಲಭ್ಯ ಒದಗಿಸಲಾಗುವುದು ಎಂದು ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಪಿಡಿಒ ಕಿರಣ್ ವಿಜಯವಾಣಿಗೆ ತಿಳಿಸಿದ್ದಾರೆ.
ಮತ್ತೆ ವಹಿಸಬೇಕಿದೆ ಎಚ್ಚರ:
ಹೊಸದಾಗಿ ಅಳವಡಿಸಿರುವ ನೀರಿನ ಪೈಪ್‌ಲೈನ್ ಅನ್ನು ಮತ್ತೆ ಯಾರೂ ಕೂಡ ಕತ್ತರಿಸದಂತೆ ನೋಡಿಕೊಳ್ಳಲು ಎಚ್ಚರಿಕೆ ವಹಿಸಬೇಕಾಗಿದೆ. ಇಲ್ಲದಿದ್ದರೆ ಮೆಂದಾರೆ ಗ್ರಾಮಸ್ಥರಿಗೆ ಮತ್ತೆ ಕುಡಿಯುವ ನೀರಿನ ಸೌಲಭ್ಯ ದೊರೆಯುವುದಿಲ್ಲ.
ಮೆಂದಾರೆ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಪೈಪ್‌ಲೈನ್ ಕೆಲಸ ಪೂರ್ಣಗೊಂಡಿದೆ. ಮೋಡ ಕವಿದ ವಾತಾವರಣವಿರುವುದರಿಂದ ಸೋಲಾರ್ ಮೋಟರ್ ಕೆಲಸ ಮಾಡುತ್ತಿಲ್ಲ. ಶುಕ್ರವಾರ ಬಿಸಿಲು ಬಂದ ಮೇಲೆ ಸೋಲಾರ್ ಮೋಟರ್ ಶುರು ಮಾಡಿ ನೀರು ಸರಬರಾಜು ಮಾಡಲಾಗುವುದು.ಕಿರಣ್, ಪಿಡಿಒ, ಗ್ರಾಮ ಪಂಚಾಯಿತಿ, ಮಹದೇಶ್ವರ ಬೆಟ್ಟ