ಚಾಮರಾಜನಗರ: ಜಿಲ್ಲಾಡಳಿತ ಭವನದ ಮುಂಭಾಗ ನಿರ್ಮಾಣ ಮಾಡಲು ಉದ್ದೇಶಿಸಿರುವ ಶ್ರೀ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಯಾವುದೇ ವಿರೋಧವಿಲ್ಲ, ಅಶ್ವರೂಢ ಬಸವೇಶ್ವರ ಪುತ್ಥಳಿಯನ್ನೇ ನಿರ್ಮಾಣ ಮಾಡಲಾಗುತ್ತದೆ ಎಂದು ದಲಿತ ಮುಖಂಡ ಸಿದ್ದಯ್ಯನಪುರ ಶಿವರಾಜು ತಿಳಿಸಿದರು.
ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡುವ ಮೂಲಕ ಅಂತರ್ಜಾತಿ ವಿವಾಹಗಳಿಗೆ ಅಡಿಗಲ್ಲು ಹಾಕಿದ್ದರು. ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೂಢನಂಬಿಕೆಗಳ ವಿರುದ್ಧ ಹೋರಾಟ ಮಾಡಿದವರು. ಆದರೆ ಬಸವಣ್ಣನ ಪ್ರತಿಮೆ ನಿರ್ಮಾಣವಾದರೆ ಸಂಘರ್ಷ ಏರ್ಪಡುತ್ತದೆ ಎಂದು ಕೆಲವರು ಹೇಳಿಕೆ ನೀಡಿರುವುದು ಸೂಕ್ತವಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ ಎಲ್ಲ ಜನಾಂಗದವರು ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಭವನದ ಮುಂಭಾಗ ಬಸವೇಶ್ವರರ ಪುತ್ಥಳಿ ನಿರ್ಮಾಣ ಮಾಡಲು ಬಸವ ಅನುಯಾಯಿಗಳು ವಿರೋಧ ಮಾಡುವುದಿಲ್ಲ. 2011ರಲ್ಲಿಯೇ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದ್ದು, ಅನುದಾನ ವಿಳಂಬದಿಂದ ಕಾಮಗಾರಿ ನಿಧಾನವಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹೋರಾಟಗಾರ ನಮ್ಮನೆ ಪ್ರಶಾಂತ್, ರಾಮಸಮುದ್ರ ಬಂಗಾರು, ಮಹೇಶ್, ಮೋಹನ್ ಹಾಜರಿದ್ದರು.