

ಚಾಮರಾಜನಗರ: ಮೆಂದಾರೆ ಗ್ರಾಮಸ್ಥರು ಕಲ್ಲೇಟಿನಿಂದ ಆಗಿರುವ ನೋವು, ಮನಸ್ಸಿಗೆ ಆಗಿರುವ ಘಾಸಿಯನ್ನು ಮರೆತು ಬದುಕುವುದರೊಳಗೆ ಕೊಳಚೆ ನೀರು ಕುಡಿಯುವ ಶಿಕ್ಷೆ ಅನುಭವಿಸುತ್ತಿದ್ದಾರೆ..!
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿ ಮೆಂದಾರೆ. ಈ ಗ್ರಾಮಸ್ಥರು ಲೋಕಸಭೆ ಚುನಾವಣೆ ಮತದಾನದ ದಿನ ಇಂಡಿಗನತ್ತ ಮತಗಟ್ಟೆಯಲ್ಲಿ ಮತದಾನ ಮಾಡಲು ಬಂದು ಕಲ್ಲೇಟು ತಿಂದಿದ್ದರು. ಇದರಿಂದಾದ ಗಾಯ ಮತ್ತು ಜೀವನದ ಮೇಲೆ ಆಗಿರುವ ಪರಿಣಾಮವನ್ನು ಸುಧಾರಿಸಿಕೊಳ್ಳುವಷ್ಟರಲ್ಲೇ ಈಗ ಗ್ರಾಮಕ್ಕೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಹಾಕಿರುವ ಪೈಪ್‌ಲೈನ್ ಅನ್ನು ಹಲವೆಡೆ ಯಾರೋ ಕಿತ್ತು ಹಾಕಿದ್ದಾರೆ. ಹೀಗಾಗಿ ಮೆಂದಾರೆಗೆ ಸಿಗುತ್ತಿದ್ದ ನೀರಿನ ಸೌಲಭ್ಯ ಬಂದ್ ಆಗಿದೆ.
ಕೊಳಚೆ ನೀರು ಸೇವನೆ: ನಲ್ಲಿ, ಬೋರ್‌ವೆಲ್ ಇದ್ದರೂ ಆರ್‌ಒ ಪ್ಲಾಂಟ್‌ಗೆ ಹೋಗಿ ಶುದ್ಧ ಕುಡಿಯುವ ನೀರನ್ನೇ ತಂದು ಬಳಸುವ ಈ ಕಾಲದಲ್ಲೂ, ಕೊಳಚೆ ನೀರು ಕುಡಿಯಬೇಕಾದ ದೌರ್ಭಾಗ್ಯ ಮೆಂದಾರೆ ಜನರದ್ದು. ಗ್ರಾಮಕ್ಕೆ ನೀರಿನ ಸಂಪರ್ಕ ಕಲ್ಪಿಸಿದ್ದ ಕುಡಿಯುವ ನೀರಿನ ಪೈಪ್‌ಲೈನ್ ಅನ್ನು ಸ್ಥಳೀಯರಲ್ಲೇ ಯಾರೋ ಹಲವು ಕಡೆಗಳಲ್ಲಿ ಕಿತ್ತು ಹಾಕಿದ ಪರಿಣಾಮ ಊರಿನ ಮುಂಭಾಗದಲ್ಲಿರುವ ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಊರಿನ ಗುಡ್ಡದ ಕೆಳಗೆ ಇರುವ ಬಾವಿಯ ನೀರು ಕುಡಿಯುತ್ತಿದ್ದಾರೆ. ಈ ಬಾವಿಯ ನೀರು ಕಲುಷಿತಗೊಂಡಿದೆ. ಹುಳುಗಳು ಮುತ್ತಿ ಮೊರೆಯುತ್ತಿವೆ. ಪಾಚಿ ಮತ್ತು ಕಸ ತೇಲುತ್ತಿದೆ. ಈ ನೀರಿಗಾಗಿ ಮೆಂದಾರೆ ಗ್ರಾಮಸ್ಥರು ಎರಡು ಗುಡ್ಡ ಇಳಿದು, ಕಲ್ಲು-ಬಂಡೆಗಳ ಮಧ್ಯೆ ನಡೆದು ಬರಬೇಕು. ಬಳಿಕ ಬಿಂದಿಗೆಯನ್ನು ಹೊತ್ತುಕೊಂಡು ಮತ್ತೆ ಗುಡ್ಡ ಏರುವುದರೊಳಗೆ ಬಿಂದಿಗೆಯಲ್ಲಿ ತುಂಬಿರುವಷ್ಟೇ ಬೆವರು ಹರಿಯುತ್ತದೆ. ಮಹಿಳೆಯರೇನಾದರೂ ನೀರು ತರಲು ಬಂದರೆ ಒಂದು ಕಡೆಯಾದರೂ ಕುಳಿತು ಸುಧಾರಿಸಿಕೊಳ್ಳಲೇಬೇಕು. ಇಷ್ಟೆಲ್ಲ ಕಷ್ಟಪಟ್ಟು ತರುವ ಕೊಳಚೆ ನೀರನ್ನು ಮನೆ ಮಂದಿಯೆಲ್ಲ ಅಮೃತವೆಂಬಂತೆ ಕುಡಿಯಬೇಕಾದ ಪರಿಸ್ಥಿತಿ ಬಂದಿದೆ. ಈ ಕುರಿತು ಗ್ರಾಮ ಪಂಚಾಯಿತಿಗೆ ಮೆಂದಾರೆ ಗ್ರಾಮಸ್ಥರು ದೂರು ಕೊಟ್ಟಿದ್ದಾರೆ. ಆದರೂ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ರೋಗ ಬಂದ್ರೆ ಯಾರು ನೋಡ್ತಾರೆ?:
ನಾವು ಈ ಕೊಳಚೆ ನೀರನ್ನೇ ಕುಡಿದು ಬದುಕುತ್ತಿದ್ದೇವೆ. ನಮಗೇನಾದರೂ ತೊಂದರೆಯಾದರೆ ಯಾರು ನೋಡ್ತಾರೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಮನೆಯಲ್ಲಿ ರಾತ್ರಿ ವೇಳೆ ನೀರು ಖಾಲಿಯಾಗಿ ಹೋದರೆ, ಗುಡ್ಡ ಇಳಿದು ನೀರು ತರಲು ಆಗುವುದಿಲ್ಲ. ಅಕ್ಕಪಕ್ಕದ ಮನೆಯವರು ಸಂಗ್ರಹಿಸಿ ಇಟ್ಟಿರುವ ನೀರನ್ನು ಕೇಳಬೇಕು. ಅವರ ಬಳಿಯೂ ನೀರಿಲ್ಲ ಎಂದಾದರೆ ನಾವೇ ಬಾವಿ ಬಳಿಗೆ ಹೋಗಿ ನೀರು ತರಬೇಕು. ಕಾಡುಪ್ರಾಣಿಗಳೇನಾದರೂ ನಮ್ಮ ಮೇಲೆ ದಾಳಿ ಮಾಡಿದರೆ ನಮ್ಮ ಕುಟುಂಬಕ್ಕೆ ಯಾರು ದಿಕ್ಕು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.
ಇದೇ ಮೊದಲಲ್ಲ:
ಮೆಂದಾರೆ ಗ್ರಾಮಕ್ಕೆ ಕುಡಿಯುವ ನೀರಿನ ಪೈಪ್‌ಲೈನ್ ಹಲವೆಡೆ ಕತ್ತರಿಸಿ ಸೌಲಭ್ಯ ಸಿಗದಂತಾಗಿರುವುದು ಇದು ಎರಡನೇ ಸಲ. ಮತಗಟ್ಟೆ ಧ್ವಂಸ ಪ್ರಕರಣ ಸಂಭವಿಸಿದ ಕೆಲವೇ ದಿನಗಳಲ್ಲಿ ಯಾರೋ ಪೈಪ್‌ಲೈನ್ ಕತ್ತರಿಸಿದ್ದರು. ಇದನ್ನು ಪೊಲೀಸರ ಸಮ್ಮುಖದಲ್ಲಿ ರಿಪೇರಿ ಮಾಡಿ ಸರಿಪಡಿಸಿಕೊಡಲಾಗಿತ್ತು. ಇದೀಗ 15 ದಿನಗಳ ಹಿಂದೆ ಮತ್ತೆ ಪೈಪ್ ಅನ್ನು ಹಲವು ಕಡೆಗಳಲ್ಲಿ ಕಿತ್ತು ಹಾಕಿದ್ದಾರೆ. ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ದೂರು ನೀಡಿ ಪೈಪ್ ಸರಿಪಡಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ. ಇನ್ನೂ ಸರಿಪಡಿಸ್ಲಿ ಎಂದು ಗ್ರಾಮಸ್ಥರೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.
ಕಪ್ಪುಚುಕ್ಕೆಯಾದ ಗಲಭೆ ಪ್ರಕರಣ
ಇಂಡಿಗನತ್ತ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಿಕೊಡಬೇಕೆಂದು ಒತ್ತಾಯಿಸಿ ಲೋಕಸಭೆ ಚುನಾವಣೆ ಮತದಾನವನ್ನು ಬಹಿಷ್ಕಾರ ಮಾಡಲಾಗಿತ್ತು. ಇದೇ ಮತಗಟ್ಟೆ ವ್ಯಾಪ್ತಿಗೆ ಮೆಂದಾರೆ ಗ್ರಾಮವೂ ಬರುತ್ತದೆ. ಇಲ್ಲಿರುವ ಜನರನ್ನು ಅಧಿಕಾರಿಗಳು ಮನವೊಲಿಸಿ ಮತ ಹಾಕಲು ಮತಗಟ್ಟೆಗೆ ಕರೆದುಕೊಂಡು ಬಂದಾಗ ಗಲಭೆ ನಡೆದಿತ್ತು. ಈ ಮೆಂದಾರೆ ಗ್ರಾಮಸ್ಥರು ಕಲ್ಲೇಟು ತಿಂದಿದ್ದರು. ಇಂಡಿಗನತ್ತ ಗ್ರಾಮಸ್ಥರ ಮೇಲೆ ಪ್ರಕರಣ ದಾಖಲಾಗಿ ಜೈಲಿಗೆ ಹೋಗಿಬರಬೇಕಾಯಿತು.
ಅಣ್ಣ-ತಮ್ಮಂದಿರಂತೆ ಇದ್ದ ಇಂಡಿಗನತ್ತ-ಮೆಂದಾರೆ ಗ್ರಾಮಸ್ಥರ ನಡುವೆ ಕಂದಕವೇರ್ಪಟ್ಟಿತು. ಮೆಂದಾರೆ ಗ್ರಾಮಸ್ಥರು ಊರು ತೊರೆಯಲು ನಿರ್ಧರಿಸಿದರು. ತಮ್ಮನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ ಎಂದು ಕೋರಿಕೊಂಡರು. ಎರಡು ಗ್ರಾಮಗಳ ನಡುವಿನ ಸೂಕ್ಷ್ಮತೆ ಅರಿತ ಜಿಲ್ಲಾಡಳಿತ ಮೆಂದಾರೆ ಗ್ರಾಮಸ್ಥರ ಮನವಿಯಂತೆ ಸ್ಥಳಾಂತರ ಮಾಡಲು ಸಮೀಕ್ಷೆಯನ್ನು ಮಾಡಿತು. ಬಳಿಕ ಈ ಕಾರ್ಯ ಮುಂದಿನ ಯಾವ ಹಂತಕ್ಕೆ ತಲುಪಿದೆ ಎನ್ನುವುದೇ ಗೊತ್ತಿಲ್ಲ.
ಹಲವೆಡೆ ಪೈಪ್ ಕಿತ್ತು ಹಾಕಿರುವುದರಿಂದ ಕುಡಿಯುವ ನೀರಿಗಾಗಿ ಗುಡ್ಡ ಇಳಿದು ನೀರು ತರಬೇಕು. ಗುಡ್ಡ ಹತ್ತಿ ಇಳಿದು ನೀರನ್ನು ಹೊತ್ತು ತರುವುದು ತುಂಬಾ ಕಷ್ಟ. ಬಾವಿಯಲ್ಲಿರುವ ಕೊಳಚೆ ನೀರನ್ನು ಶುದ್ಧವಾಗುವಷ್ಟು ಬಸಿದು ಕುಡಿಯುತ್ತಿದ್ದೇವೆ. ನಮಗೆ ಕುಡಿಯುವ ನೀರಿನ ಸೌಲಭ್ಯವನ್ನು ತಕ್ಷಣ ಒದಗಿಸಿಕೊಡಬೇಕು.ರಾಜಮ್ಮ, ಮೆಂದಾರೆ ಗ್ರಾಮಸ್ಥೆ, ಹನೂರು
ನಮಗೆ ಮೆಂದಾರೆಯಲ್ಲಿ ಜೀವನ ಮಾಡಲು ಸಾಧ್ಯವಾಗುತ್ತಿಲ್ಲ. ಒಂದರ ಮೇಲೊಂದು ತೊಂದರೆ. ಭಯವಾಗುತ್ತಿದೆ. ಜತೆಗೆ ಇಲ್ಲಿ ಇರಲು ಮನಸ್ಸೂ ಒಪ್ಪುತ್ತಿಲ್ಲ. ನಮ್ಮನ್ನು ಬೇಗ ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು.ರಾಜು, ಮೆಂದಾರೆ ಗ್ರಾಮಸ್ಥ, ಹನೂರು
ಸ್ಥಳೀಯನೊಬ್ಬ ತನ್ನ ಜಮೀನು ಸಮತಟ್ಟು ಮಾಡಲು ಹೋಗಿ ಮೆಂದಾರೆಗೆ ನೀರಿನ ಸಂಪರ್ಕ ನೀಡಿರುವ ಪೈಪ್‌ಲೈನ್ ಅನ್ನು ಹಲವೆಡೆ ಕಿತ್ತು ಹಾಕಿದ್ದಾನೆ. ಇದನ್ನು ರಿಪೇರಿ ಮಾಡಿಸಲು ಸಾಮಗ್ರಿಗಳನ್ನು ಕಳುಹಿಸಿಕೊಡಲಾಗುತ್ತಿದೆ. ಶೀಘ್ರದಲ್ಲೇ ಮೆಂದಾರೆ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡಲಾಗುವುದು.ಕಿರಣ್, ಪಿಡಿಒ, ಮಲೆ ಮಹದೇಶ್ವರ ಗ್ರಾಪಂ, ಹನೂರು