ಸಾಮಾಜಿಕ ಕ್ರಾಂತಿಯ ಹರಿಕಾರ ಹಡಪದ ಅಪ್ಪಣ್ಣ

IMG-20230718-WA0053
Published on

ಚಾಮರಾಜನಗರ: ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಹಿಡಿತ ಸಾಧಿಸಿದ್ದ ವಚನಕಾರ ಹಡಪದ ಅಪ್ಪಣ್ಣ ದ್ವಿಭಾಷಾ ಪಂಡಿತರಾಗಿದ್ದರು ಎಂದು ನಿವೃತ್ತ ಶಿಕ್ಷಕ ಶಿವಣ್ಣ ಇಂದ್ವಾಡಿ ತಿಳಿಸಿದರು.

ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

12ನೇ ಶತಮಾನದ ವಚನ ಚಳವಳಿ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರ ಹಡಪದ ಅಪ್ಪಣ್ಣ, ಬಸವಣ್ಣ ಅವರ ಆಪ್ತರಾಗಿದ್ದರು. ವಚನ ಚಳವಳಿಯ ಕಾಲವನ್ನು ಸುವರ್ಣಯುಗ ಎಂದು ಕರೆಯುತ್ತಾರೆ. ಆಡುನುಡಿಯನ್ನು ಬಳಸಿಕೊಂಡು ವಚನಗಳನ್ನು ರಚಿಸುವ ಮೂಲಕ ಜಾಗತಿಕ ಸಾಹಿತ್ಯಕ್ಕೆ ಹೊಸತೊಂದು ಆಯಾಮ ಕಟ್ಟಿಕೊಡಲಾಯಿತು. ಮಾನವೀಯ ಮೌಲ್ಯ ಹಾಗೂ ಸಮಸಮಾಜದ ತತ್ವ ಆಧರಿಸಿ ರೂಪುಗೊಂಡ ವಚನ ಸಾಹಿತ್ಯದಲ್ಲಿ ಶರಣ ಹಡಪದ ಅಪ್ಪಣ್ಣನವರ ಕೊಡುಗೆ ಅಪಾರ ಎಂದರು.

ಬಸವಣ್ಣ ದೂರದೃಷ್ಟಿಯಿಂದ ಅನುಭವ ಮಂಟಪವನ್ನು ಸ್ಥಾಪನೆ ಮಾಡುತ್ತಾರೆ. ಅನುಭವ ಮಂಟಪದಲ್ಲಿ ಅನ್ನ ದಾಸೋಹದ ಜತೆಗೆ ನಿತ್ಯವೂ ಜ್ಞಾನ ದಾಸೋಹವನ್ನು ನೀಡಲಾಗುತ್ತಿತ್ತು. ಹಡಪದ ಅಪ್ಪಣ್ಣನವರ ವಚನ ವೈಶಿಷ್ಟೃಗಳನ್ನು ಅರ್ಥ ಮಾಡಿಕೊಳ್ಳಬೇಕು. ಕೆಲವು ಐತಿಹಾಸಿಕ ಹಾಗೂ ಸಾಹಿತ್ಯ ಆಧಾರಗಳಿಂದ ಹಡಪದ ಅಪ್ಪಣ್ಣನ ಬಗ್ಗೆ ತಿಳಿದುಕೊಳ್ಳಬಹುದು. ಶೂನ್ಯ ಸಂಪಾದನೆಯ 21ನೇ ಅಧ್ಯಾಯದಲ್ಲಿ ಹಡಪದ ಅಪ್ಪಣ್ಣನ ಬಗ್ಗೆ ಮಾಹಿತಿ ಇದೆ. ಬೆಡಗಿನ ವಚನಗಳಿಗೆ ಹೆಸರುವಾಸಿಯಾಗಿದ್ದರು. ಅವರ ವಚನಗಳ ಚಿಂತನೆಯ ಸಾರವನ್ನು ಅರಿತು ನಾವೆಲ್ಲರೂ ಸಾಗಬೇಕಿದೆ ಎಂದರು.

ಅಪರ ಜಿಲ್ಲಾಧಿಕಾರಿ ಗೀತಾ ಹುಡೇದಾ ಮಾತನಾಡಿ, ಹಿಂದಿನ ಕಾಲದಲ್ಲಿ ವೃತ್ತಿ ಆಧಾರದ ಮೇಲೆ ಸಮುದಾಯವನ್ನು ಗುರುತು ಮಾಡುತ್ತಿದ್ದರು. ಯಾರು ಕ್ಷೌರಿಕ ವೃತ್ತಿಯನ್ನು ಮಾಡುತ್ತಿದ್ದರೋ ಅವರನ್ನು ಹಡಪದವರು ಎಂದು ಕರೆಯುತ್ತಿದ್ದರು. ಅಂತಹ ಸಮುದಾಯದ ಹಡಪದ ಅಪ್ಪಣ್ಣನವರನ್ನು ಬಸವಣ್ಣ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿ, ಯಾರೇ ಆದರೂ ನನ್ನನ್ನು ಭೇಟಿ ಮಾಡುವ ಮುನ್ನ ಹಡಪದ ಅಪ್ಪಣ್ಣನವರನ್ನು ಭೇಟಿ ಮಾಡಿ ಬರಬೇಕು ಎಂದು ಸೂಚನೆ ನೀಡಿದ್ದರು. ಯಾರು ಕೂಡ ವೃತ್ತಿಯಿಂದ ಮೇಲು-ಕೀಳಲ್ಲ ಎಂಬುದನ್ನು ವಚನಕಾರರು ಸಾರಿದ್ದರು. ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು, ಸಮಾಜದ ಏಳಿಗೆಗೆ ತೊಡಗಿಕೊಳ್ಳುವಂತೆ ಕರೆ ನೀಡಿದರು ಎಂದರು.

ಸವಿತಾ ಸಮಾಜದ ಜಿಲ್ಲಾಧ್ಯಕ್ಷ ವೆಂಕಟರಾಜು, ತಾಲೂಕು ಅಧ್ಯಕ್ಷ ಬಸವಣ್ಣ, ಮುಖಂಡರಾದ ಗುಂಡ್ಲುಪೇಟೆ ವಿಠಲ್, ಕೊಳ್ಳೇಗಾಲ ತಮ್ಮಯ್ಯ, ಹನೂರು ಮಹಾದೇವ್, ಶ್ರೀಕಂಠಸ್ವಾಮಿ, ದೊಡ್ಡ ತಾಯಮ್ಮ, ಮಹದೇವಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಲಿಂಗಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net