ಚಾಲಕರಿಗೆ ಸಿಗದ ಭತ್ಯೆ

29rajesh5
Published on

ಚಾಮರಾಜನಗರ: ಲೋಕಸಭೆ ಚುನಾವಣೆ ಮುಗಿದು ನೂತನ ಸಂಸದರ ಆಯ್ಕೆಯೂ ಆಗಿ ಮೂರು ತಿಂಗಳು ಪೂರೈಸುತ್ತಿದ್ದರೂ ಎಲೆಕ್ಷನ್ ಕೆಲಸ ಮಾಡಿರುವ ಖಾಸಗಿ ಕಾರುಗಳ ಚಾಲಕರಿಗೆ ಬಾಡಿಗೆ ಪಾವತಿಯಾಗಿಲ್ಲ.


ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೆಕ್ಟರ್ ಅಧಿಕಾರಿಗಳು ಮತ್ತು ್ಲೈಯಿಂಗ್ ಸ್ಕ್ವಾಡ್ ಮತ್ತು ವಿ.ವಿ.ಟಿ ತಂಡವರು ಚುನಾವಣೆ ಕರ್ತವ್ಯಕ್ಕಾಗಿ ವಾಹನಗಳನ್ನು ನಿಯೋಜಿಸಿಕೊಳ್ಳಲಾಗಿತ್ತು. ಚಾಮರಾಜನಗರ ತಹಸೀಲ್ದಾರ್ ಕಚೇರಿಯ ಚುನಾವಣಾ ಶಾಖೆ ನೀಡಿರುವ ಮಾಹಿತಿ ಪ್ರಕಾರ 11 ಕಾರು ಚಾಲಕರು ಒಂದು ತಿಂಗಳ ಕೆಲಸ ಮಾಡಿದ್ದಾರೆ.


ಇವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಂಡಾಗ ಕಿಲೋ ಮೀಟರ್‌ಗೆ 14.50ರಂತೆ ಗರಿಷ್ಠ 2700 ರೂ. ಇಲ್ಲದಿದ್ದಲ್ಲಿ 1550 ರೂ. ಬಾಡಿಗೆ ಪಾವತಿ, ಇಂಧನ ಮತ್ತು ಚಾಲಕರ ಭತ್ಯೆ ನೀಡಲು ಹಿಂದಿನ ತಹಸೀಲ್ದಾರ್ ಆದೇಶಿಸಿದ್ದರು. ಚುನಾವಣೆ ಕರ್ತವ್ಯದಲ್ಲಿ ಚಾಲಕರು ದುಡಿದರು. ಏ.26ರಂದು ಮತದಾನ ನಡೆಯಿತು. ಜೂ.4ರಂದು ಲಿತಾಂಶ ಹೊರಬಿತ್ತು. ನೂತನ ಸಂಸದರಾಗಿ ಸುನೀಲ್‌ಬೋಸ್ ಆಯ್ಕೆಯಾದರು. ಮೊದಲ ಬಾರಿಗೆ ಸಂಸತ್ತಿಗೆ ಹೋಗಿ ಪ್ರಮಾಣವಚನವನ್ನೂ ಸ್ವೀಕಾರ ಮಾಡಿದರು. ಬಳಿಕ ಕ್ಷೇತ್ರಕ್ಕೆ ಬಂದು ಕೃತಜ್ಞತಾ ಸಭೆಯಲ್ಲೂ ಭಾಗವಹಿಸಿದರು. ಇಷ್ಟೆಲ್ಲಾ ಆಗಿ ಚುನಾವಣೆ ನಡೆದಿರುವುದೇ ಮರೆತುಹೋಗುತ್ತಿರುವಾಗಲೂ ಚಾಲಕರಿಗೆ ಭತ್ಯೆ ಹಣ ನೀಡದೆ ಇರುವುದು ಸರ್ಕಾರಿ ವ್ಯವಸ್ಥೆ ಹೇಗಿದೆ ಎನ್ನುವುದಕ್ಕೆ ಉದಾಹರಣೆಯಾಗಿದೆ.


ಈ ನಡುವೆ ಗೊಂದಲ ಸೃಷ್ಟಿ: ಕಾರು ಚಾಲಕರಿಗೆ ಭತ್ಯೆ ನೀಡುವುದು ವಿಳಂಬವಾಗುವುದರ ಮಧ್ಯೆ ಕಡಿಮೆ ಹಣ ನೀಡುವ ಗೊಂದಲವೂ ಸೃಷ್ಟಿಯಾಗಿತ್ತು. ಚಾಮರಾಜನಗರ ಲೋಕಸಭಾ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದ ಕಾರು ಚಾಲಕರಿಗೆ 2700 ರೂ. ನೀಡಿದ್ದರು. ಆದರೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ಕಾರುಚಾಲಕರಿಗೆ ಕಡಿಮೆ ಹಣ ನೀಡಲು ನಿರ್ಧರಿಸಲಾಗಿತ್ತು. ಈ ವಿಷಯ ತಿಳಿದ ಚಾಲಕರು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಆಗಮಿಸಿದ್ದರು. ತಹಸೀಲ್ದಾರ್ ಬಸವರಾಜು ವರ್ಗಾವಣೆಗೊಂಡಿದ್ದರಿಂದ ಸಮಸ್ಯೆ ಬಗೆಹರಿಯಲು ತಡವೂ ಆಯಿತು. ಅಂತಿಮವಾಗಿ ಬೇರೆ ವಿಧಾನಸಭಾ ಕ್ಷೇತ್ರಗಳಲ್ಲಿ ನೀಡಿರುವಂತೆಯೇ ಇಲ್ಲಿಯವರಿಗೂ 2700 ರೂ.ಗಳನ್ನು ಕೊಡಬೇಕೆಂದು ತೀರ್ಮಾನಿಸಲಾಯಿತು.

ಹಣ ಕೈ ಸೇರುವುದ್ಯಾವಾಗ..?
ಚಾಲಕರಿಗೆ ಹಣ ಕೈಸೇರುವುದು ಇಂದು, ನಾಳೆ ಎಂಬ ಮಾತುಗಳು ಕೇಳಿಬರುತ್ತಲೇ ಇವೆ. ಚುನಾವಣೆ ಶಾಖೆಯ ಅಧಿಕಾರಿಗಳು ಕಡತವನ್ನು ಖಜಾನೆಗೆ ಕಳುಹಿಸಿದ್ದೇವೆ. ಅಲ್ಲಿಂದ ಹಣ ಪಾವತಿಯಾಗುತ್ತದೆ ಎಂದು ಹೇಳಿದ್ದಾರೆ. ಚುನಾವಣೆ ಮುಗಿದು ಇಷ್ಟು ದಿನಗಳೇ ಕಳೆಯುತ್ತಿದ್ದರೂ ಭತ್ಯೆ ನೀಡಲು ತಡಮಾಡಿರುವುದರ ಹಿಂದಿನ ತಾಂತ್ರಿಕ ಸಮಸ್ಯೆಗಳನ್ನು ಬದಿಗೊತ್ತಿ ಚಾಲಕರ ಆರ್ಥಿಕ ಸ್ಥಿತಿಯನ್ನು ಗಮನಿಸಬೇಕಿತ್ತು. ಕಾರು ಚಾಲಕರು ಬ್ಯಾಂಕ್ ಸಾಲ, ಕೈ ಸಾಲ, ಕುಟುಂಬ ನಿರ್ವಹಣೆಯ ಹೊಣೆ ಹೊತ್ತುಕೊಂಡಿರುವ ಸಾರಥಿಗಳು. ಅಲ್ಲದೇ, ಚುನಾವಣೆ ಸಂದರ್ಭದಲ್ಲಿ ಸರ್ಕಾರಿ ಕಾರುಗಳ ಚಾಲಕರಿಗೆ ಸರಿಸಮಾನವಾಗಿ ಕೆಲಸ ಮಾಡಿದ್ದಾರೆ. ಸರ್ಕಾರಿ ಇವರಿಗೆ ನೀಡುವುದಾಗಿ ಹೇಳಿರುವ ದಿನದ ಭತ್ಯೆ ಸಾಕಾಗುವುದಿಲ್ಲ. ಆದರೂ ಇವರು ಬದುಕಿನ ಅನಿವಾರ್ಯತೆಗೆ ಕಟ್ಟುಬಿದ್ದು ಕಾರುಗಳನ್ನು ಚುನಾವಣೆ ಕೆಲಸಕ್ಕೆ ನಿಯೋಜನೆ ಮಾಡಿದ್ದರು. ಅಧಿಕಾರಿಗಳು ಹೇಳಿದ ಕಡೆ ಹೋಗಿ ಹಗಲು-ರಾತ್ರಿ ದುಡಿದರು. ಹೀಗೆ ಮೈ ಬಗ್ಗಿಸಿ ದುಡಿದವರು ಈಗ ಕೂಲಿಗಾಗಿ ಕಾಯುವ ಸ್ಥಿತಿ ಬಂದಿದೆ.


ಆಕ್ಸಿಜನ್ ಸಂತ್ರಸ್ತರಿಗೂ ಹಿಂಗೆ ಮಾಡಿದ್ರು:

ಚುನಾವಣೆಗೆ ಕೆಲಸ ಮಾಡಿದ್ದ ಚಾಲಕರಿಗೆ ಭತ್ಯೆ ನೀಡದೆ ಇರುವಂತೆಯೇ ಕೋವಿಡ್ ಸಂದರ್ಭದಲ್ಲಿ ಸಂಭವಿಸಿದ್ದ ಆಕ್ಸಿಜನ್ ದುರಂತದ ಸಂತ್ರಸ್ತರಿಗೂ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಿ ಸಂಬಳವನ್ನೇ ಕೊಟ್ಟಿರಲಿಲ್ಲ.
ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಸಕಾಲಕ್ಕೆ ಸಂಬಳ ದೊರೆಯದೆ ತಾಪತ್ರಯಕ್ಕೆ ಸಿಲುಕಿದ್ದರು. ಜಿಲ್ಲಾಡಳಿತ ಕಚೇರಿಗೆ ಅಲೆದು ಸುಸ್ತಾಗಿದ್ದರು. ಇದೇ ಸಂದರ್ಭದಲ್ಲಿ ಚಾಮರಾಜನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಇವರನ್ನೂ ಸಹ ಮನವಿ ಮಾಡಿ ಸಂಬಳ ಕೇಳಲು ಸಂತ್ರಸ್ತರು ಕಾದುನಿಂತಿದ್ದರು. ಸರ್ಕಾರಿ ಉದ್ಯೋಗದ ಭರವಸೆ ನೀಡಿ ತಾತ್ಕಾಲಿಕವಾಗಿ ಹೊರಗುತ್ತಿಗೆ ನೌಕರಿ ಕೊಟ್ಟು ಸಂಬಳವನ್ನೂ ಕೊಟ್ಟಿರಲಿಲ್ಲ.

ಚುನಾವಣೆ ಕೆಲಸಕ್ಕೆ ನಿಯೋಜನೆಗೊಂಡಿದ್ದ ಖಾಸಗಿ ಕಾರು ಚಾಲಕರು ಹಗಲು-ರಾತ್ರಿ ಕೆಲಸ ಮಾಡಿದ್ದಾರೆ. ಅವರು ದುಡಿದಿರುವ ಹಣವನ್ನು ಸಕಾಲಕ್ಕೆ ನೀಡದೆ ಇರುವುದು ಸರಿಯಲ್ಲ. ಚಾಲಕರಿಗೂ ಕುಟುಂಬವಿದೆ. ಕುಟುಂಬ ನಿರ್ವಹಣೆಗಾಗಿ ಸಾಲ ಮಾಡಿಕೊಳ್ಳಬೇಕಾಗುತ್ತದೆ. ತಕ್ಷಣ ಅವರಿಗೆ ಭತ್ಯೆ ಹಣವನ್ನು ನೀಡಬೇಕೆಂದು ಒತ್ತಾಯ ಮಾಡುತ್ತೇನೆ.ಹೊಂಡರಬಾಳು ವಾಸು, ಜಿಲ್ಲಾಧ್ಯಕ್ಷ, ಕಾನ್ಸಿರಾಂ ವಿದ್ಯಾರ್ಥಿ ಸಂಘ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net