ಸಿಎಂ ರಾಜೀನಾಮೆ ಬಳಿಕ ಕಾಂಗ್ರೆಸ್ ಹೊಡೆದ ಮನೆ

29rajesh6
Published on

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಲಯದ ತೀರ್ಪು ಹೊರಬರುತ್ತಿದ್ದಂತೆ ರಾಜೀನಾಮೆ ನೀಡಲಿದ್ದಾರೆ. ನಂತರ ಕಾಂಗ್ರೆಸ್ ಮನೆಯ ಕತೆ ಮೂರು ಬಾಗಿಲಲ್ಲ, 12 ಬಾಗಿಲು ಆಗಲಿದೆ ಎಂದು ಮಾಜಿ ಸಂಸದ ಹಾಗೂ ಜಿಲ್ಲಾ ಬಿಜೆಪಿ ಉಸ್ತುವಾರಿ ಮುನಿಸ್ವಾಮಿ ವ್ಯಂಗ್ಯವಾಡಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಸದಸ್ಯತಾ ಅಭಿಯಾನ ಜಿಲ್ಲಾ ಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ದಲಿತರ ಪರ, ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಆ ವರ್ಗಗಳಿಗೆ ಮೀಸಲಿಟ್ಟಿದ್ದ ಹಣವನ್ನು ನುಂಗಿ ಹಾಕಿದ್ದಾರೆ. ಎಸ್ಸಿಎಸ್ಪಿ, ಟಿಎಸ್ಪಿ ಯೋಜನೆಗೆ 27 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗೆ ಬಳಸಿ, ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಬಡವರಿಗೆ ದೊರೆಯಬೇಕಾಗಿದ್ದ ಸವಲತ್ತುಗಳಿಗೆ ಕತ್ತರಿ ಹಾಕಿದ್ದಾರೆ. ಇಂಥವರ ಬಗ್ಗೆ ಕಾಂಗ್ರೆಸ್ ದಲಿತ ನಾಯಕರು ಅವರ ಪರವಾಗಿ ನಿಂತು ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್‌ಗೆ ಹೈಕೋರ್ಟ್‌ನಲ್ಲಿ ಅನುಮತಿ ದೊರೆಯಲಿದೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ಖಚಿತ ಎಂದು ಸ್ವತಃ ಕಾಂಗ್ರೆಸ್‌ನಲ್ಲಿರುವ ನಾಯಕರಿಗೆ ಗ್ಯಾರಂಟಿಯಾಗಿದೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಒಂದು ಮನೆ ಮೂರು ಬಾಗಿಲು ಎಂಬ ಗಾದೆಯಂತೆ ಕೇವಲ ಶಿವಕುಮಾರ್, ಖರ್ಗೆ, ಪರಮೇಶ್ವರ್ ಅವರು ಸಿಎಂ ಅಲ್ಲ. ಇದರೊಂದಿಗೆ ಡಜನ್‌ಗಟ್ಟಲೆ ನಾಯಕರು ಹೊಸ ಡ್ರಸ್ ಹೊಲಿಸಿಕೊಂಡು ಕಾಯುತ್ತಿದ್ದಾರೆ. ಈ ಸಾಲಿನಲ್ಲಿ ಪ್ರಿಯಾಂಕ ಖರ್ಗೆ, ಸತೀಶ್ ಚಾರಕಿ ಹೊಳಿ, ಎಂ.ಬಿ. ಪಾಟೀಲ್, ಎಚ್.ಸಿ. ಮಹದೇವಪ್ಪ ಸೇರಿದಂತೆ 12 ಮಂದಿ ಸಿಎಂ ರೇಸ್‌ನಲ್ಲಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್. ನಿರಂಜನ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿಯನ್ನು ಸದೃಢವಾಗಿ ಸಂಘಟಿಸಲು ಸದಸ್ಯತ್ವ ಅಭಿಯಾನ ಉತ್ತಮ ವೇದಿಕೆಯಾಗಿದೆ. ಸೆ. 1 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಸೆ. 2 ರಿಂದ ದೇಶಾದ್ಯಂತ ಅಭಿಯಾನ ಆರಂಭವಾಗಲಿದೆ ಎಂದರು.

ಕಾರ್ಯಾಗಾರದಲ್ಲಿ ಸದಸ್ಯತಾ ಅಭಿಯಾನದ ಸಂಚಾಲಕ ಹೊನ್ನೂರು ಮಹದೇವಸ್ವಾಮಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್, ಮಾಜಿ ಶಾಸಕ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಎಸ್.ಬಾಲರಾಜು, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಓಬಿಸಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ನೂರೊಂದುಶೆಟ್ಟಿ, ಆರ್.ಸುಂದರ್, ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ಡಾ. ಎ.ಆರ್. ಬಾಬು, ಮೂಡ್ನಾಕೂಡು ಪ್ರಕಾಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net