ಪುತ್ಥಳಿ ನಿರ್ಮಾಣದಲ್ಲಿ ಗೊಂದಲ ಸೃಷ್ಟಿಸಬೇಡಿ

29CHN 01- NAGENDRA PRESS MET
Published on

ಚಾಮರಾಜನಗರ: ಜಿಲ್ಲಾಡಳಿತ ಭವನದ ಮುಂಭಾಗ ನಿರ್ಮಾಣವಾಗುತ್ತಿರುವ ಬಸವಣ್ಣನ ಅಶ್ವರೂಢ ಪುತ್ಥಳಿ ನಿರ್ಮಾಣಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಈ ವಿಚಾರದಲ್ಲಿ ಯಾವುದೇ ಗೊಂದಲ ಸೃಷ್ಟಿಸುವುದು ಬೇಡ ಎಂದು ಸಂವಿಧಾನಾತ್ಮಕ ಹಕ್ಕುಗಳ ಸಂರಕ್ಷಣಾ ವೇದಿಕೆ ಅಧ್ಯಕ್ಷ ಅರಕಲವಾಡಿ ನಾಗೇಂದ್ರ ಮನವಿ ಮಾಡಿದರು.

ಕಳೆದ ವಾರದಿಂದ ಬಸವಣ್ಣನವರ ಪುತ್ಥಳಿ ನಿರ್ಮಾಣದ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ದಲಿತ ಮುಖಂಡ ಸಿ.ಎಂ.ಕೃಷ್ಣ ಎಂಬುವವರು ಜಿಲ್ಲಾಡಳಿತದ ಮುಂಭಾಗ ಬಸವೇಶ್ವರರ ಪುತ್ಥಳಿ ನಿರ್ಮಾಣ ಮಾಡಬಾರದು. ಇದಕ್ಕೆ ಕಾನೂನು ತೊಡಕುಗಳು ಇದೆ ಎಂದು ಒತ್ತಾಯ ಮಾಡಿದ್ದರು. ಅವರ ಹೇಳಿಕೆ ಎರಡು ಸಮುದಾಯಗಳ ನಡುವೆ ಗೊಂದಲ ಮೂಡಿಸುವಂತಿದ್ದು, ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುವುದುಬೇಡ ಎಂದು ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕೋರಿದರು.

ಈಗಾಗಲೇ ಮಹಾರಾಷ್ಟ್ರದ ಮೀರಜ್ ಎಂಬಳ್ಳಿ ಬಸವಣ್ಣನವರ ಪುತ್ಥಳಿ ನಿರ್ಮಾಣವಾಗುತ್ತಿದೆ. ಬಸವೇಶ್ವರರು ಅಶ್ವರೂಢರಾಗಿ ಖಡ್ಗವನ್ನು ಹಿಡಿಯದೇ, ಆಶೀರ್ವಾದ ಮಾಡುವ ಭಂಗಿಯಲ್ಲಿ ಇದೆ. 2011 ರಲ್ಲೇ ಬಸವಣ್ಣನವರ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆಯಲ್ಲೇ ಪ್ರತಿಮೆ ನಿರ್ಮಾಣದ ಕುರಿತು ಚರ್ಚೆಯಾಗಿತ್ತು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂಭಾಗ ಬಸವಣ್ಣನವರ ಪುತ್ಥಳಿ ನಿರ್ಮಾಣಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಬಸವಣ್ಣನವರು 12ನೇ ಶತಮಾನದಲ್ಲೇ ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಮೊದಲ ಪ್ರಜಾಪ್ರಭುತ್ವ ಮಾದರಿಯನ್ನು ಜಾರಿಗೆ ತಂದರು. ಅವರು ಕರ್ನಾಟಕದಲ್ಲಿ ಜನಿಸಿದ್ದರೂ, ಮನುಕುಲದ ಒಳಿತಿಗಾಗಿ ಅವರು ಕೈಗೊಂಡ ಕೆಲಸಗಳು ವಿಶ್ವದಲ್ಲಿ ಮಾದರಿಯಾಗಿವೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಸಮಾನತೆಯ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಸಾಗಬೇಕಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ವಕೀಲ ಬೂದಿತಿಟ್ಟು ರಾಜೇಂದ್ರ, ಮೂಡಹಳ್ಳಿ ಮೂರ್ತಿ, ಮಾಜಿ ಪುರಸಭಾ ಸದಸ್ಯ ಸಿದ್ದಯ್ಯ ಹಸಗೂಲಿ, ಮಾದಯ್ಯ, ಅಮಚವಾಡಿ ಪುಟ್ಟಸ್ವಾಮಿ, ರಾಮಸಮುದ್ರ ಶಿವಣ್ಣ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net