ಚಾಮರಾಜನಗರ: ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಆ.20ರಿಂದ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ.
ಈ ಸಮಯದಲ್ಲಿ ಸಾರ್ವಜನಿಕರು ಮತದಾರರ ಪಟ್ಟಿಗೆ ಹೊಸದಾಗಿ ನೋಂದಣಿ, ತಿದ್ದುಪಡಿಗಳು, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲು, 18 ವರ್ಷ ತುಂಬಿದ ಯುವ ಮತದಾರರ ಹೆಸರು ಸೇರ್ಪಡೆ ಕುರಿತಾದ ಅರ್ಜಿಗಳನ್ನು ಸಲ್ಲಿಸಬಹುದು. ಆ.20 ರಿಂದ ಅ.18 ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಬಿ.ಎಲ್.ಒ ಪರಿಶೀಲನೆ ನಡೆಸಲಿದ್ದಾರೆ. ಅ.19 ರಿಂದ 28ರವರೆಗೆ ಸಮಗ್ರ ಕರಡು ಮತದಾರರ ಪಟ್ಟಿಯನ್ನು ಸಿದ್ದಪಡಿಸಲಾಗುವುದು.
ಅ.29ರಂದು ಸಮಗ್ರ ಕರಡು ಮತದಾರರ ಪಟ್ಟಿಯ ಪ್ರಕಟಣೆ ಮಾಡಲಾಗುತ್ತದೆ.ಸಾರ್ವಜನಿಕರು ಲೋಪದೋಷಗಳ ಕುರಿತಾಗಿ ಅ. 29 ರಿಂದ ನ.28ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸುವ ಅವಕಾಶ ಇರುತ್ತದೆ. ಜ.6ರಂದು ಮತದಾರರ ಪಟ್ಟಿಯನ್ನು ಅಂತಿಮವಾಗಿ ಪ್ರಕಟಿಸಲಾಗುತ್ತದೆ. ಆಕ್ಷೇಪಣೆಯ ಅವಧಿಯಲ್ಲಿ ಮುಖ್ಯ ಚುನಾವಣಾಧಿಕಾರಿಗಳು ನಿಗದಿತ ಶನಿವಾರ ಮತ್ತು ಭಾನುವಾರ ನಡೆಸಲಿರುವ ವಿಶೇಷ ಅಭಿಯಾನದ ದಿನಾಂಕಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಿದ್ದಾರೆ ಎಂದು ಗುಂಡ್ಲುಪೇಟೆ ತಾಲೂಕು ತಹಶಿಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.