

ಚಾಮರಾಜನಗರ: ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ಜಾಗತಿಕ ತಾಪಮಾನ ನಿರ್ವಹಣೆ ಮಾಡುವ ಉದ್ದೇಶದಿಂದ ಪರಿಸರ ಸ್ನೇಹಿಯಾದ ಚಟುವಟಿಕೆಗಳು ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜು ಸಲಹೆ ನೀಡಿದರು.
ತಾಲೂಕಿನ ಹರದನಹಳ್ಳಿ ಸಮೀಪದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಸಂಪನ್ಮೂಲಗಳನ್ನು ಸಂರಕ್ಷಿಸಿ ವಾಯು, ಜಲವನ್ನು ನೈರ್ಮಲ್ಯದಿಂದ ಇಟ್ಟುಕೊಳ್ಳಲು ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಸ್ತುತ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಬದಲು ಜೈವಿಕ ಇಂಧನ ಬಳಸುವುದು ಸೂಕ್ತವಾಗಿದೆ. ರೈತಾಪಿ ವರ್ಗದವರು ಜೈವಿಕ ಇಂಧನ ಸಸ್ಯಗಳನ್ನು ತಮ್ಮ ಜಮೀನಿನ ಸುತ್ತ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ದೀನಬಂಧು ಶಿಕ್ಷಣ ಸಂಸ್ಥೆಯ ಲೋಕೇಶ್ ರಾಹೆ ಜಾಧವ್ ಮಾತನಾಡಿ, ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ದಿನೇ ದಿನೇ ಹೆಚ್ಚುತ್ತಿದ್ದು, ಎಣ್ಣೆ ಕಾಳಿನ ಬೆಳೆಗಳು ಹಾಗೂ ಮಾನವನ ಅವಿನಾಭವ ಸಂಬಂಧ ಅರಿತು ಪ್ರಕೃತಿ ಸಮತೋಲನ ಕಾಯ್ದುಕೊಳ್ಳವಂತೆ ಗಮನಹರಿಸಬೇಕು. ಪೆಟ್ರೋಲಿಯಂ ಇಂಧನ ನಿಕ್ಷೇಪವು ಕ್ಷೀಣಿಸುತ್ತಿರುವುದರಿಂದ ಪರ್ಯಾಯ ಇಂಧನಗಳ ಬಳಕೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಜಿ.ಎಸ್.ಯೋಗೇಶ್ ಮಾತನಾಡಿ, ಜೈವಿಕ ಇಂಧನ ಸಸ್ಯಗಳನ್ನು ರೈತರು ಅಳವಡಿಸಿಕೊಳ್ಳುವುದರಿಂದ ರೈತರು ತಮ್ಮ ಕೃಷಿ ವ್ಯವಸ್ಥೆಯಲ್ಲಿ ಸಸ್ಯ ವೈವಿಧ್ಯತೆಗಳನ್ನು ಉಳಿಸಿಕೊಳ್ಳಬಹುದು. ಪಶು ಸಂಗೋಪನೆಯಲ್ಲಿ ಮೇವಿನ ಅವಶ್ಯಕತೆಯನ್ನು ಸರಿದೂಗಿಸಿಕೊಂಡು ಬೇಸಾಯದಲ್ಲಿ ಲಾಭ ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಂತ್ರಿಕ ಅಧಿಕಾರಿ ಡಾ.ಬಿ.ಪಂಪನಗೌಡ, ಜೈವಿಕ ಇಂಧನ ಪ್ರಾತ್ಯಕ್ಷಿಕೆ ಘಟಕದ ಯೋಜನಾ ಸಹಾಯಕಿ ಅನನ್ಯಾ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಭ್ಯಶ್ರೀ, ಕೇಂದ್ರದ ಗೃಹ ವಿಜ್ಞಾನಿ ಡಾ.ಜೆ.ದೀಪಾ, ದತ್ತು ಗ್ರಾಮ ಯೋಜನೆಯ ಸಹಾಯಕ ಮಂಜು, ರೈತರು, ರೈತ ಮಹಿಳೆಯರು ಉಪಸ್ಥಿತರಿದ್ದರು.