ನಾರಾಯಣ ಗುರು ಚಿಂತನೆ ಅಭಿವೃದ್ಧಿ ಪೂರಕ

28rajesh4
Published on

ಚಾಮರಾಜನಗರ: ಕೇರಳದಲ್ಲಿ ಜನಿಸಿ ಸಮಾಜ ಸುಧಾರಣೆ ಮಾಡಿದ ಶ್ರೀ ನಾರಾಯಣ ಗುರುಗಳ ಚಿಂತನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮೈಸೂರು ಮುಕ್ತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಕೃಷ್ಣಮೂರ್ತಿ ಚಾಮರಂ ಹೇಳಿದರು.

ನಗರದ ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀ ನಾರಾಯಣಗುರು ಹಿಂದೂ ಧರ್ಮದ ಮಹಾ ಸನ್ಯಾಸಿಯಾಗಿದ್ದರು. ಅದಾಗ್ಯೂ ಹಿಂದೂ ಧರ್ಮದಲ್ಲಿದ್ದ ಜಾತಿ ವ್ಯವಸ್ಥೆ ಕುರಿತು ಹೋರಾಟ ಮಾಡಿದ್ದಾರೆ. ದೇಶದಲ್ಲಿರುವ ಜಾತಿವಾದಿ ಮನಸ್ಥಿತಿ ಅಭಿವೃದ್ಧಿಗೆ ತೊಡಕಾಗಿದೆ. ಆದರೆ ಶ್ರೀನಾರಯಣ ಗುರುಗಳ ತತ್ವ ಸಿದ್ಧಾಂತಗಳು ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ಕೇರಳ ಎಂಬ ದೇವರ ನಾಡಿನಲ್ಲಿ ಮಹಿಳೆಯರು ಎದೆ ಭಾಗವನ್ನು ಮುಚ್ಚಿಕೊಳ್ಳಬೇಕಾದರೆ ತೆರಿಗೆಯನ್ನು ಕಟ್ಟಬೇಕಿರುತ್ತದೆ. ನಾಂದೇಳಿ ಎಂಬ ಈಡಿಗರ ಸಮುದಾಯದ ಮಹಿಳೆ ತನ್ನ ಎದೆಯನ್ನೇ ಕತ್ತರಿಸಿ ಕ್ರಾಂತಿ ಮಾಡಿದ್ದಳು. ಇಂತಹ ನಾಡಿನಲ್ಲಿ ಜನಿಸಿದ ನಾರಾಯಣಗುರು ಜಾತೀಯತೆ, ಮೌಢ್ಯ, ಅಸಮಾನತೆಯ ವಿರುದ್ಧ ಹೋರಾಟಕ್ಕೆ ತಮ್ಮ ಇಡೀ ಜೀವನವನ್ನು ತ್ಯಾಗ ಮಾಡಿದರು. ಪ್ರಸ್ತುತ ಅವರ ಚಿಂತನೆಗಳು ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಹಿಂದೂ ಧರ್ಮವನ್ನು ಸಾಕಷ್ಟು ಸುಧಾರಣೆ ಮಾಡಿದ ಹಾಗೂ ಸಮಾಜವನ್ನು ಉದ್ಧರಿಸಿದ ಕೀರ್ತಿ ನಾರಾಯಣ ಗುರು ಅವರಿಗೆ ಸಲ್ಲುತ್ತದೆ. ನಾರಾಯಣ ಗುರು ಅವರು ಮೌನ ಕ್ರಾಂತಿಯ ಮೂಲಕ ಸಮಾಜದಲ್ಲಿ ಬದಲಾವಣೆ ತಂದರು. ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ಸಿದ್ಧಾಂತವನ್ನು ನಾರಾಯಣಗುರು ಪ್ರಚುರಪಡಿಸಿದರು. ಈ ಮೂಲಕ ಮಾನವ ಕುಲವನ್ನು ಉದ್ಧರಿಸುವ ಮತ್ತು ಅಖಂಡ ಭಾರತವನ್ನು ಮಾನವತ್ವದ ಆಧಾರದ ಮೇಲೆ ಕಟ್ಟುವ ಪ್ರಯತ್ನ ಮಾಡಿದರು ಎಂದು ತಿಳಿಸಿದರು.

ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಮಾತನಾಡಿ, ಶ್ರೀನಾರಾಯಣ ಗುರುಗಳು ರೈತ ಕುಟುಂಬದಿಂದ ಬಂದು ಅಧ್ಯಯನದ ಕಡೆ ಹೆಚ್ಚಿನ ಒಲವು ತೋರಿದರು. ಹಿಂದೂ ಧರ್ಮ ಗ್ರಂಥಗಳಲ್ಲದೇ ಬೈಬಲ್, ಕುರಾನ್ ಹಾಗೂ ಇನ್ನಿತರೆ ಧರ್ಮ ಗ್ರಂಥಗಳನ್ನು ಅಧ್ಯಯನ ಮಾಡಿದ್ದರು. ಈ ನೆಲದ ಶೋಷಿತ ವರ್ಗ ಮುನ್ನೆಲೆಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ಸಮಾಜದಲ್ಲಿ ಮೌನ ಕ್ರಾಂತಿ ಮಾಡಿದರು. ಅವರ ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಸಾಗಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀನಾರಾಯಣಗುರು ಮಹಾ ಸಂಸ್ಥಾನಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ನಗರಸಭಾ ಸದಸ್ಯೆ ಎಚ್.ಎಸ್.ಮಮತಾ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಉದಯ್ ಕುಮಾರ್, ಆರ್ಯ ಈಡಿಗರ ಸಮಾಜದ ಮುಖಂಡರು ಭಾಗವಹಿಸಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿಮಂದಿರದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಆಯೋಜಿಸಲಾಗಿದ್ದ ಶ್ರೀನಾರಾಯಣಗುರು ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಪ್ರವಾಸಿ ಮಂದಿರದಿಂದ ಸಾಗಿದ ಮೆರವಣಿಗೆ ಸುಲ್ತಾನ್ ಷರ್ೀ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾ ರಂಗಮಂದಿರಕ್ಕೆ ತಲುಪಿತು. ಡೊಳ್ಳು ಕುಣಿತ, ಗೊರವರ ಕುಣಿತ, ವೀರಗಾಸೆ ನೃತ್ಯ ಹಾಗೂ ಇನ್ನಿತರೆ ಕಲಾತಂಡಗಳು ಮೆರವಣಿಗೆಗೆ ಮೆರಗು ತುಂಬಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net