ಮೈಕ್ರೋ ೈನಾನ್ಸ್‌ಗಳಿಂದ ಕಿರುಕುಳ ಆರೋಪ

Published on

ಚಾಮರಾಜನಗರ: ನಗರದ ಹಲವಾರು ಖಾಸಗಿ ಮೈಕ್ರೋಫೈನಾನ್ಸ್‌ನವರು ಸಾಲ ಕಟ್ಟುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಮುತ್ತಿಗೆ ಗ್ರಾಮದ ಲಕ್ಷ್ಮೀ ಆರೋಪಿಸಿದರು.

ತಾಲೂಕಿನ ಮುತ್ತಿಗೆ ಗ್ರಾಮದಲ್ಲಿ ಖಾಸಗಿ ಸಂಘ ಸಂಸ್ಥೆಗಳಲ್ಲಿ ಸಾಲ ಪಡೆದುಕೊಂಡು, ಅದನ್ನು ಮರು ಪಾವತಿ ಮಾಡುತ್ತಾ ಬರುತ್ತಿದ್ದೇವೆ. ಈ ನಡುವೆ ಕೆಲ ದಿನಗಳ ಹಿಂದೆ ನಿರಂತರವಾಗಿ ಮಳೆ ಬಂದ ಪರಿಣಾಮ ಕೆಲಸ ಸಿಗದೇ ಸಾಲವನ್ನು ಕಟ್ಟಲು ಆಗಲಿಲ್ಲ. ಆದರೆ, ಈಗ ಫೈನಾನ್ಸ್‌ನವರು ಸಾಲ ಮರು ಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ದೂರಿದರು.

ನಾವು ಜೀತಮುಕ್ತ ಕುಟುಂಬದವರಾಗಿದ್ದು, ನಮಗೆ ಯಾರಿಗೂ ಜಮೀನು ಸಹ ಇರುವುದಿಲ್ಲ. ಅವರಿವರ ಜಮೀನುಗಳಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ಆದರೆ ೈನಾನ್ಸ್‌ನವರು ಸಾಲ ವಸೂಲಿ ಮಾಡುವ ನೆಪದಲ್ಲಿ ಕೆಲಸಕ್ಕೆ ಹೋಗಲು ಸಹ ಬಿಡುತ್ತಿಲ್ಲ. ನಮ್ಮ ಮನೆಗಳ ಮುಂದೆ ಬಂದು ಸಾಲ ಕಟ್ಟಿ ಎಂದು ಪೀಡಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ಜತೆ ಸಾಲ ತೆಗೆದುಕೊಂಡಿದ್ದ ನಾಲ್ಕು ಮಂದಿ ಊರನ್ನು ತೊರೆದು ಬೆಂಗಳೂರಿಗೆ ಹೊರಟು ಹೋಗಿದ್ದು, ಅವರ ಸಾಲವನ್ನು ಸಹ ನೀವೆ ಕಟ್ಟಬೇಕು ಎಂದು ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಫೈನಾನ್ಸ್ ನವರ ಕಿರುಕುಳದಿಂದಾಗಿ ನಾವು ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನಮಗೆ ಹಾಗೂ ನಮ್ಮ ಕುಟುಂಬಗಳಿಗೆ ಪೊಲೀಸರು ಸೂಕ್ತ ರಕ್ಷಣೆ ಕೊಡಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಗ್ರಾಮಸ್ಥರಾದ ಪುಟ್ಟಸ್ವಾಮಿ, ಸಿದ್ದರಾಮಯ್ಯ, ರೇವಮ್ಮ, ಸುಶೀಲಾ, ಬಸವಯ್ಯ, ರೇವಣ್ಣ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net