

ಚಾಮರಾಜನಗರ: ಕೊಳ್ಳೇಗಾಲ-ಊಟಿ ಅಂತರರಾಜ್ಯ ಸಾರಿಗೆ ಬಸ್‌ಸೇವೆ ಸ್ಥಗಿತಗೊಂಡಿದ್ದು, ಪ್ರಯಾಣಿಕರು ನಿತ್ಯವೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಕೆಎಸ್‌ಆರ್‌ಟಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕೊಳ್ಳೇಗಾಲ ಡಿಪೋದಿಂದ ಪ್ರತಿದಿನ ಬೆಳಿಗ್ಗೆ 8.15 ಗಂಟೆಗೆ ಕೊಳ್ಳೇಗಾಲ ಬಸ್ ನಿಲ್ದಾಣದಿಂದ ಯಳಂದೂರು, ಸಂತೇಮರಹಳ್ಳಿ, ಚಾಮರಾಜನಗರ, ತೆರಕಣಾಂಬಿ, ಗುಂಡ್ಲುಪೇಟೆ, ಮೇಲುಕಾಮನಹಳ್ಳಿ, ಬಂಡೀಪುರ, ಗೂಡ್ಲೂರು ಮಾರ್ಗವಾಗಿ ಊಟಿಗೆ ಸಾರಿಗೆ ಬಸ್ ತೆರಳುತ್ತಿತ್ತು. ಅದೇ ಮಾರ್ಗವಾಗಿ ಸಂಜೆ 7.30 ಕ್ಕೆ ಕೊಳ್ಳೇಗಾಲಕ್ಕೆ ಬರುತ್ತಿದ್ದ ಅಂತರರಾಜ್ಯ ಬಸ್ ಕಳೆದ ತಿಂಗಳಿಂದಲೂ ಸ್ಥಗಿತಗೊಳಿಸಲಾಗಿದೆ. ಪರಿಣಾಮವಾಗಿ ಈ ಸಾರಿಗೆ ಬಸ್‌ಅನ್ನೇ ಅವಲಂಬಿಸಿದ್ದ ಕೊಳ್ಳೇಗಾಲ, ಹನೂರು, ಯಳಂದೂರು, ಚಾಮರಾಜನಗರ ಭಾಗದ ಕೂಲಿ ಕಾರ್ಮಿಕರು, ವ್ಯಾಪಾರ ವ್ಯವಹಾರ ಮಾಡುವವರು ಹಾಗೂ ಇನ್ನಿತರೆ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ತಮಿಳುನಾಡಿನ ಜನರು ವ್ಯಾಪಾರ ಮತ್ತು ಇನ್ನಿತರೆ ಕೆಲಸ ಕಾರ್ಯಗಳಿಗಾಗಿ ಚಾಮರಾಜನಗರ ಭಾಗಕ್ಕೆ ಬರಲು ಈ ಅಂತರರಾಜ್ಯ ಸಾರಿಗೆ ಬಸ್‌ನ್ನೇ ಅವಲಂಭಿಸಿದ್ದರು. ಅವರಿಗೂ ಕೂಡ ನಿತ್ಯವೂ ಸಮಸ್ಯೆ ಎದುರಾಗಿದೆ.
ಪ್ರಯಾಣಿಕರಿಗೆ ತೊಂದರೆ:
ಜಿಲ್ಲೆಯ ಕೂಲಿ ಕಾರ್ಮಿಕರು ತಮಿಳನಾಡಿನ ಊಟಿ ಹಾಗೂ ಇನ್ನಿತರೆ ಭಾಗದ ಕಾಫಿ ಎಸ್ಟೇಟ್‌ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದಲ್ಲದೇ ಗಡಿಭಾಗದಲ್ಲಿರುವ ಶಾಲೆಗಳು, ಸರ್ಕಾರಿ ಕಚೇರಿಗಳು ಹಾಗೂ ಇನ್ನಿತರೆ ಕಡೆಗಳಲ್ಲಿ ಯಳಂದೂರು, ಕೊಳ್ಳೇಗಾಲ, ಹನೂರು ಮತ್ತು ಚಾಮರಾಜನಗರ ಭಾಗದ ಸುಮಾರು 45 ಕ್ಕಿಂತಲೂ ಹೆಚ್ಚು ಸರ್ಕಾರಿ ಅಥವಾ ಹೊರಗುತ್ತಿಗೆ ನೌಕರರು ಕೆಲಸಮಾಡುತ್ತಿದ್ದಾರೆ. ಅವರೆಲ್ಲರೂ ಈ ಅಂತರರಾಜ್ಯ ಬಸ್‌ಅನ್ನೇ ಅವಲಂಬಿಸಿದ್ದರು. ಕೊಳ್ಳೇಗಾಲ-ಊಟಿ ಬಸ್ ಸೇವೆ ಸ್ಥಗಿತಮಾಡಿರುವುದರಿಂದ ಈ ಪ್ರಯಾಣಿಕರು ಪರದಾಡುವಂತಾಗಿದೆ. ಗುಂಡ್ಲುಪೇಟೆಯಲ್ಲಿ ಮತ್ತೊಂದು ಬಸ್ ಬದಲಾವಣೆ ಮಾಡಬೇಕಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಮೊದಲಿನಂತೆ ಕೊಳ್ಳೇಗಾಲ-ಊಟಿ ಮಾರ್ಗವಾಗಿ ಅಂತರರಾಜ್ಯ ಬಸ್‌ಸೇವೆಯನ್ನು ಮುಂದುವರಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಸಚಿವರ ಮಾತಿಗೂ ಕಿಮ್ಮತ್ತಿಲ್ಲ:
ಕೊಳ್ಳೇಗಾಲ-ಊಟಿ ಅಂತರರಾಜ್ಯ ಬಸ್ ಪ್ರಯಾಣವನ್ನು ಪುನರ್ ಆರಂಭಿಸಬೇಕು ಎಂದು ಈ ಭಾಗದ ಪ್ರಯಾಣಿಕರು ಸಾಕಷ್ಟು ಬಾರಿ ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಮುಂದುವರಿದು ಹಲವಾರು ಪ್ರಯಾಣಿಕರು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಮನವಿ ಮಾಡಿದ್ದರು. ಈ ವೇಳೆ ಸಚಿವರು ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ಕುಮಾರ್ ಅವರಿಗೆ ಕರೆಮಾಡಿ ಬಸ್ ಸೌಕರ್ಯ ಕಲ್ಪಿಸುವಂತೆ ಸೂಚನೆ ನೀಡಿದ್ದರು. ಸಚಿವರ ಮಾತಿಗೂ ಕಿಮ್ಮತ್ತು ತೋರದ ಅಧಿಕಾರಿಗಳು ಈ ವರೆಗೂ ಬಸ್ ವ್ಯವಸ್ಥೆ ಮಾಡಿಲ್ಲ ಎಂದು ಪ್ರಯಾಣಿಕರೊಬ್ಬರು ಆರೋಪ ಮಾಡಿದರು. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕೊಳ್ಳೇಗಾಲ-ಊಟಿ ಅಂತರರಾಜ್ಯ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.
ಕೊಳ್ಳೇಗಾಲ-ಊಟಿ ಅಂತರರಾಜ್ಯ ಸಂಚಾರ ಸ್ಥಗಿತವಾಗಿರುವುದರಿಂದ ತುಂಬಾ ಅನಾನುಕೂಲವಾಗಿದೆ. ಇದರಿಂದ ಊಟಿಯಿಂದ ವಾರಕ್ಕೆ ಎರಡು ಮೂರು ಬಾರಿ ಚಾಮರಾಜನಗರಕ್ಕೆ ಬರಲು ಸಮಸ್ಯೆಯಾಗುತ್ತಿದೆ. ಈ ಕುರಿತು ಹಲವು ಬಾರಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಪ್ರಯೋಜನವಾಗಿಲ್ಲ.-ನಾಗರಾಜು, ಪ್ರಯಾಣಿಕ, ಊಟಿ