ಬೆಟ್ಟದಪುರದಲ್ಲಿ ಕೃಷಿ ಕಾರ್ಯಾನುಭವ ಶಿಬಿರ

25rajesh3
Published on

ಚಾಮರಾಜನಗರ: ಹೊಸ ತಂತ್ರಜ್ಞಾನವನ್ನು ವಿಜ್ಞಾನಿಗಳಿಂದ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಕೃಷಿ ವಿದ್ಯಾರ್ಥಿಗಳು ಆಗಮಿಸಿದ್ದು, ಅವರಿಂದ ಬೇಸಾಯ ಕ್ರಮದಲ್ಲಿ ಸುಧಾರಣೆ ಕಾಣುತ್ತದೆ ಎಂದು ಬೆಟ್ಟದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಹೇಳಿದರು.

ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಬೆಟ್ಟದಪುರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ಸಹಯೋಗದಲ್ಲಿ ಅಂತಿಮ ವರ್ಷದ ಬಿಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಮಾತನಾಡಿದರು. ಕೃಷಿ ಕ್ಷೇತ್ರದಲ್ಲಿ ಅಧ್ಯಯನ ಹಾಗೂ ಅನ್ವೇಷಣೆ ನಿಮಿತ್ತ ನಮ್ಮ ಗ್ರಾಮಕ್ಕೆ ಬಂದಿರುವ ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಕಿರು ನಾಟಕದ ಮೂಲಕ ರೈತರಿಗೆ ಹವಾಮಾನ ವೈಪರೀತ್ಯ ಹಾಗೂ ಕೀಟಗಳಿಂದ ಕೃಷಿಯಲ್ಲಿ ಉಂಟಾಗುವ ತೊಂದರೆಗಳನ್ನು ತಿಳಿಸಿಕೊಟ್ಟರು. ಕೃಷಿ ವಿಸ್ತರಣಾ ವಿಭಾಗದ ಡಾ.ಜಿ.ನಾಗೇಶ್ ಮಾತನಾಡಿದರು. ಬೇಸಾಯ ಕೃಷಿ ವಿಭಾಗದ ಡಾ.ಪಿ.ಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಸುಭದ್ರಮ್ಮ, ಕಾಡಪ್ಪ, ಸುಬ್ಬಮ್ಮ, ಮುಖಂಡರಾದ ಪುಟ್ಟಪ್ಪ, ಮಹದೇವಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net