‘ಅಕ್ಕ’ ಸಮ್ಮೇಳನಕ್ಕೆ ಗುಡ್ಡಗಾಡಿನ ಕೋಗಿಲೆ

25rajesh1
Published on

ಕಿರಣ್ ಮಾದರಹಳ್ಳಿ ಚಾಮರಾಜನಗರ
ಸಪ್ತಸಾಗರದಾಚೆ ನಡೆಯುವ ನುಡಿ ಹಬ್ಬದಲ್ಲಿ ಕನ್ನಡದ ಕಂಪನ್ನು ಪಸರಿಸಲು ಗಡಿಜಿಲ್ಲೆಯ ಗುಡ್ಡಗಾಡಿನ ಕೋಗಿಲೆಯೊಂದು ಆಯ್ಕೆಯಾಗಿದೆ. ಈ ಹಕ್ಕಿ ವಿಶ್ವದ ಸಂಪದ್ಭರಿತ ರಾಷ್ಟ್ರ ಅಮೆರಿಕಾದಲ್ಲಿ ಜಗತ್ತಿನ ಜಾನಪದ ಸಾಹಿತ್ಯಕ್ಕೆ ಮಹಾಕಾವ್ಯವನ್ನೇ ಕೊಟ್ಟಿರುವ ಚಾಮರಾಜನಗರದ ನೆಲಮೂಲದ ಗಾಯನ ಸುಧೆ ಹರಿಸಲಿದೆ.

ಅಮೆರಿಕಾದ ವರ್ಜಿನಿಯಾ ರಾಜ್ಯದ ರಿಚ್‌ಮಂಡ್ ನಗರದಲ್ಲಿ ಅಮೆರಿಕಾ ಕನ್ನಡ ಕೂಟಗಳ ಒಕ್ಕೂಟ(ಅಕ್ಕ) ಆ.30, 31 ಮತ್ತು ಸೆ.1ರಂದು 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ-2024 ಹಮ್ಮಿಕೊಂಡಿದೆ. ಈ ಸಮ್ಮೇಳನಕ್ಕೆ ರಾಜ್ಯ ಸರ್ಕಾರ ಹಲವು ಕಲಾವಿದರನ್ನು ಆಯ್ಕೆ ಮಾಡಿದ್ದು, ಚಾಮರಾಜನಗರದ ಖ್ಯಾತ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಅವರು ಕೂಡ ಅವಕಾಶ ಪಡೆದುಕೊಂಡಿದ್ದಾರೆ.

ಸಮ್ಮೇಳನದಲ್ಲಿ ಚಾಮರಾಜನಗರ ಜಿಲ್ಲೆಯ ಪವಾಡ ಪುರುಷರಾದ ಮಲೆ ಮಹದೇಶ್ವರ, ಮಂಟೇಸ್ವಾಮಿ, ಬಿಳಿಗಿರಿರಂಗನಾಥ ಸ್ವಾಮಿಯ ಜಾನಪದ ಗೀತೆಗಳನ್ನು ಹಾಡಿ ಅಮೆರಿಕಾ ಕನ್ನಡಿಗರನ್ನು ರಂಜಿಸಲಿದ್ದಾರೆ. ಈ ಮಣ್ಣಿನ ಅಸ್ಮಿತೆಯಾಗಿರುವ ಜಾನಪದ ಸಂಸ್ಕೃತಿಯನ್ನು ಅನಾವರಣಗೊಳಿಸಲಿದ್ದಾರೆ. ಇದಕ್ಕಾಗಿ ‘ಜಯವೆನನ್ನಿರೋ ಜನಪದಕ್ಕೆ ಶರಣೆನ್ನಿರೋ’, ಧರೆಗಿಳಿದ ದೊಡ್ಡವರ ವೈಭವ, ಜಾನಪದವೇ ಸತ್ಯ-ಜಾನಪದವೇ ನಿತ್ಯ ಎಂಬ ಶೀರ್ಷಿಕೆಯಡಿ ಮೂರು ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.

ನರಸಿಂಹಮೂರ್ತಿ ಅಂದ್ರೆ ‘ಜಾನಪದ’:
ಅಕ್ಕ ಸಮ್ಮೇಳನಕ್ಕೆ ಆಯ್ಕೆಯಾಗಿರುವ ಗಾಯಕ ಸಿ.ಎಂ.ನರಸಿಂಹಮೂರ್ತಿಗೆ ಜಾನಪದ ಗಾಯನ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ತಂದುಕೊಟ್ಟಿದೆ. ನಗರದ ನಿವಾಸಿ ದಿ.ಎಂ.ಮಾದಯ್ಯ ಮತ್ತು ತಾಯಿ ತಾಯಮ್ಮಣ್ಣಿ ಪುತ್ರ ಸಿ.ಎಂ.ನರಸಿಂಹಮೂರ್ತಿ ಸಿವಿಲ್ ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಇನ್ ಫಿಲ್ಮಂ ಡೈರಕ್ಷನ್‌ನಲ್ಲಿ ಪದವಿ ಪಡೆದಿದ್ದಾರೆ. ಬಾಲ್ಯದಲ್ಲೇ ರಂಗಭೂಮಿಯ ಕಡೆ ಆಕರ್ಷಿತರಾದ ನರಸಿಂಹಮೂರ್ತಿ 6ನೇ ತರಗತಿ ಓದುವಾಗ ಸಂಪೂರ್ಣ ರಾಮಾಯಣ ನಾಟಕದಲ್ಲಿ ಅಭಿನಯಿಸಿದರು. ಭಾರತ ಯಾತ್ರಾ ಕೇಂದ್ರ ನಡೆಸುತ್ತಿದ್ದ ರಂಗ ತರಬೇತಿ ಶಿಬಿರದಲ್ಲಿ ಕಲಿಕೆ ನಡೆಸಿದರು. ಅನಂತ್‌ನಾಗ್, ಶ್ರೀನಿವಾಸಪ್ರಭು, ಮಾಸ್ಟರ್ ಹಿರಣ್ಣಯ್ಯ ಮತ್ತು ಇತರ ಹಿರಿಯ ರಂಗಕರ್ಮಿಗಳ ಮಾರ್ಗದರ್ಶನ ಪಡೆದುಕೊಂಡರು.
ಮಂಟೇಸ್ವಾಮಿ ಕಥಾಪ್ರಸಂಗ ನಾಟಕಕ್ಕೆ ನೀಲಗಾರರ ಪದ ಹಾಡಲು ನರಸಿಂಹಮೂರ್ತಿ ಆಯ್ಕೆಯಾದರು. ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಜಾನಪದ ಗಾಯಕನಾಗಿ ಪ್ರಸಿದ್ಧಿ ಪಡೆದುಕೊಂಡರು. ರಂಗ ವಾಹಿನಿ ಸಂಸ್ಥೆ ಸ್ಥಾಪಿಸಿ ರಂಗ ಚಟುವಟಿಕೆಗಳ ಸಂಘಟಕರಾಗಿ ಪ್ರಸಿದ್ಧಿ ಪಡೆದುಕೊಂಡರು. ಬೀದಿ ನಾಟಕಗಳಿಂದ ಹಿಡಿದು ದೊಡ್ಡ ವೇದಿಕೆಗಳವರೆಗೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಈ ಸೇವೆಗೆ ರಾಜ್ಯ ಸರ್ಕಾರ ಮತ್ತು ಸಂಘ-ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ನಾಟಕ ಅಕಾಡೆಮಿ, ಜಾನಪದ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಮೂರನೇ ಬಾರಿಗೆ
ಸಿ.ಎಂ.ನರಸಿಂಹಮೂರ್ತಿ ಅವರು ಅಕ್ಕ ಸಮ್ಮೇಳನದಲ್ಲಿ ಮೂರನೇ ಬಾರಿಗೆ ಭಾಗವಹಿಸುತ್ತಿರುವ ಜಿಲ್ಲೆಯ ಗಾಯಕ. 2010ರಲ್ಲಿ ನ್ಯೂಜೆರ್ಸಿಯಲ್ಲಿ, 2014ರಲ್ಲಿ ಕ್ಯಾಲಿೆರ್ನಿಯಾದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಅಕ್ಕ ಸಮ್ಮೇಳನಕ್ಕೆ ನನ್ನನ್ನು ಆಯ್ಕೆ ಮಾಡಿದ ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಧನ್ಯವಾದ ತಿಳಿಸುತ್ತೇನೆ. ನನ್ನನ್ನು ಸದಾ ಪ್ರೋತ್ಸಾಹಿಸುವ ಶ್ರೀನಿವಾಸ ಜಿ.ಕಪ್ಪಣ್ಣ ಅವರಿಗೆ ಕೃತಜ್ಞತೆ ತಿಳಿಸುತ್ತೇನೆ. ಸಮ್ಮೇಳನದಲ್ಲಿ ಮಲೆ ಮಹದೇಶ್ವರ, ಮಂಟೇಸ್ವಾಮಿ, ಬಿಳಿಗಿರಿರಂಗನಾಥ ಸ್ವಾಮಿ, ನಂಜುಂಡೇಶ್ವರರ ಕಾವ್ಯಗಳ ಜತೆಗೆ ಇತರ ಜಾನಪದ ಹಾಡುಗಳನ್ನು ಹಾಡುತ್ತೇವೆ.ಸಿ.ಎಂ.ನರಸಿಂಹಮೂರ್ತಿ, ಜಾನಪದ ಗಾಯಕ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net