

ಚಾಮರಾಜನಗರ: ಚಾಮರಾಜನಗರ ವರ್ತಕರ ಸೌಹಾರ್ದ ಸಹಕಾರ ಸಂಘವು ಪ್ರಸ್ತುತ ವರ್ಷದಲ್ಲಿ ಉತ್ತಮ ವಹಿವಾಟು ನಡೆಸಿ 27.54 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಸಿ.ಪಿ. ಪದ್ಮಪ್ರಸಾದ್ ತಿಳಿಸಿದರು.
ನಗರದ ವರ್ತಕರ ಭವನದಲ್ಲಿ ಚಾಮರಾಜನಗರ ವರ್ತಕರ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘದ ಸದಸ್ಯರ ಉಳಿತಾಯ ಖಾತೆಗಳಿಗೆ ಇನ್ನು ಹತ್ತು ದಿನಗಳಲ್ಲಿ ಹಣವನ್ನು ನೀಡಲಾಗುತ್ತದೆ. ಸದಸ್ಯರು ಸಕಾಲದಲ್ಲಿ ಸಾಲ ಪಡೆಯುವುದರ ಜತೆಗೆ ಮರು ಪಾವತಿ ಮಾಡಬೇಕು ಎಂದರು.
ಸಂಘದ ಉಪಾಧ್ಯಕ್ಷ ಬಿ.ವಿ.ವೆಂಕಟನಾಗಪ್ಪಶೆಟ್ಟಿ ಮಾತನಾಡಿ, ವರ್ತಕರ ಸೌಹಾರ್ದ ಸಹಕಾರ ಸಂಘ ಜಿಲ್ಲೆಯಲ್ಲಿಯೇ ಮಾದರಿಯಾಗಿ ಬೆಳೆಯುತ್ತಿದೆ. ಉತ್ಸಾಹಿ ಯುವಕರು, ಅನುಭವಿಗಳು ನೀಡುವ ಸಲಹೆ, ಸೂಚನೆಗಳನ್ನು ಸ್ವೀಕರಿಸಿ, ಸದಸ್ಯರ ಹಿತ ಕಾಯಲು ಬದ್ದವಾಗಿದೆ. ಸದಸ್ಯರು ಇನ್ನು ಹೆಚ್ಚಿನ ರೀತಿಯಲ್ಲಿ ಸಂಘದ ಬೆಳೆವಣಿಗೆಗೆ ಸಹಕಾರ ನೀಡಬೇಕು ಎಂದರು.
ಹಿರಿಯ ಸಹಕಾರಿ ಶ್ರೀನಿವಾಸಶೆಟ್ಟಿ, ಎ.ಜಯಸಿಂಹ, ಎಸ್‌ಆರ್‌ಎಸ್ ಶ್ರೀನಿವಾಸ್ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಬಿ.ಜಿ. ಸಂಕೀರ್ತನ್ ವಾರ್ಷಿಕ ವರದಿ ಮಂಡಿಸಿ ಅನುಮೋದನೆ ಪಡೆದುಕೊಂಡರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು.
ಸಂಘದ ನಿರ್ದೇಶಕ ಸಿ.ಎಸ್. ಮಹೇಶ್‌ಕುಮಾರ್, ಎಸ್.ಬಾಲಸುಬ್ರಮಣ್ಯ, ಕೆ.ಎಸ್. ಚಿದನಂದಗಣೇಶ್, ಸಿ.ಎ.ನಾರಾಯಣ್, ಸಿ.ವಿ.ಶ್ರೀನಿವಾಸ್, ಎಚ್.ಬಿ.ರಾಜಶೇಖರ್, ಶ್ರೀಕಂಠಮೂರ್ತಿ, ಎಂ.ಕಮಲರಾಜ್, ಎಂ.ರಾಜಣ್ಣ, ಮಹೇಶ್‌ಕುಮಾರ್, ರಾಘವೇಂದ್ರ, ರಾಮಚಂದ್ರ, ರೇಖಾ ಶ್ರೀಧರ್, ಪುಷ್ಪ ಶ್ರೀನಿವಾಸ್ ಇತರರು ಭಾಗವಹಿಸಿದ್ದರು.