

ಚಾಮರಾಜನಗರ: ಶ್ರೀಕೃಷ್ಣನ ಬಾಲ್ಯದ ಲೀಲೆಗಳು ಮಕ್ಕಳಿಗೆ ಪ್ರೇರಣಾದಾಯಕವಾಗಲಿದೆ ಎಂದು ವಕೀಲ ಹಾಗೂ ಪ್ರೇರಣಾ ಟ್ರಸ್ಟ್‌ನ ಕಾರ್ಯದರ್ಶಿ ಶಿವಸ್ವಾಮಿ ತಿಳಿಸಿದರು.
ತಾಲೂಕಿನ ಅಂಕನಶೆಟ್ಟಿಪುರದಲ್ಲಿರುವ ಪ್ರೇರಣಾ ವಿದ್ಯಾ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶನಿವಾರ ಆಯೋಜಿಸಿದ್ದ ಮಕ್ಕಳಿಗೆ ಕೃಷ್ಣ, ರಾಧೆ ವೇಷ ಭೂಷಣ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಮಹಾಭಾರತ, ರಾಮಾಯಣ ಹಾಗೂ ಇತಿಹಾಸ ಪುರುಷರ ಜೀವನ ಚರಿತ್ರೆಗಳನ್ನು ತಿಳಿಸುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಕಲಿಕೆಯಲ್ಲಿ ಮಕ್ಕಳಿಗೆ ಉತ್ತಮ ನೀತಿ ಪಾಠಗಳು ಹಾಗೂ ಶ್ರೀಕೃಷ್ಣ ಲೋಕ ಕಲ್ಯಾಣಕ್ಕಾಗಿ ಮಾಡಿದ ಸಾಧನೆಗಳ ಬಗ್ಗೆ ತಿಳಿವಳಿಕೆ ಮೂಡಸಬೇಕು. ಮಕ್ಕಳಿಗೆ ಶ್ರೀಕೃಷ್ಣ ಮತ್ತು ರಾಧೆ ವೇಷಭೂಷಣಗಳನ್ನು ಹಾಕುವ ಮೂಲಕ ಅವರಲ್ಲಿ ಉತ್ತಮ ಆಲೋಚನೆ ಮತ್ತು ಶ್ರೀಕೃಷ್ಣನ ಪ್ರೇರಣೆಯಾಗಲಿ ಎಂಬ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.
ಎಲ್‌ಕೆಜಿ, ಯುಕೆಜಿ ಮತ್ತು ಒಂದನೇ ತರಗತಿ ಮಕ್ಕಳಿಗೆ ಶ್ರೀಕೃಷ್ಣ ಮತ್ತು ರಾಧೆಯ ವೇಷಭೂಷಣ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಶ್ರೀಕೃಷ್ಣ ವೇಷ ಧರಿಸಿದ್ದ ಮಕ್ಕಳಿಗೆ ಬಹುಮಾನ ನೀಡಲಾಯಿತು. ತೀರ್ಪುಗಾರರಾಗಿ ಮಹದೇವಪ್ರಸಾದ್, ರವಿಕುಮಾರ್, ಸಂಧ್ಯಾ ಜವಾಬ್ದಾರಿ ನಿರ್ವಹಿಸಿದರು. ಟ್ರಸ್ಟ್‌ನ ಅಧ್ಯಕ್ಷ ಬಿ.ಪಿ.ಪ್ರಕಾಶ್, ಟ್ರಸ್ಟಿ ನಟರಾಜನ್, ಮುಖ್ಯ ಶಿಕ್ಷಕ ಎಚ್.ಜಿ. ಮಹೇಶ್‌ಕುಮಾರ್, ಶಿಕ್ಷಕರು ಹಾಗೂ ಪಾಲಕರು ಉಪಸ್ಥಿತರಿದ್ದರು.