ಸಾಗುವಳಿ ಚೀಟಿ ವಿತರಣೆಗೆ ಆಗ್ರಹ

23rajesh7
Published on

ಚಾಮರಾಜನಗರ: ಜಿಲ್ಲೆಯಲ್ಲಿರುವ ಹಲವು ದಲಿತರು ಇಂದಿಗೂ ತಮ್ಮ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದು, ಅವರ ಜಮೀನುಗಳಿಗೆ ಸಾಗುವಳಿ ಚೀಟಿ ವಿತರಿಸಿ ಎಂದು ದಲಿತ ಮುಖಂಡರು ಆಗ್ರಹಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕಡಿಪಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಿತರಕ್ಷಣಾ ಸಮಿತಿ ಸಭೆಯಲ್ಲಿ ದಲಿತ ಮುಖಂಡ ಬಸವನಪುರ ರಾಜಶೇಖರ್ ಮಾತನಾಡಿ, ಬಸವನಪುರ ಗ್ರಾಮದ 1 ಎಕರೆ ಭೂಮಿ ದಲಿತ ಸ್ಮಶಾನಕ್ಕೆ ಮಂಜೂರಾಗಿದೆ. ಆದರೆ ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಸರ್ವೇ ನಂ.128 ರಲ್ಲಿ 120 ಕುಟುಂಬಗಳು ವ್ಯವಸಾಯ ಮಾಡುತ್ತಿದ್ದಾರೆ. ಇಂದಿಗೂ ಸಾಗುವಳಿ ವಿತರಣೆ ಮಾಡಿಲ್ಲ ಎಂದು ಆರೋಪಿಸಿದರು.

ಹರದನಹಳ್ಳಿ ಎಚ್.ಡಿ. ಾರೆಸ್ಟ್ ವ್ಯಾಪ್ತಿಗೆ ಬರುವ ಜಮೀನುಗಳಲ್ಲಿ ಹಲವಾರು ದಲಿತರು ವ್ಯವಸಾಯ ಮಾಡಿಕೊಂಡು ಬರುತ್ತಿದ್ದು ಸಾಗುವಳಿ ಚೀಟಿ ನೀಡಿಲ್ಲ ಎಂದು ಮುಖಂಡರೊಬ್ಬರು ಆಕ್ರೋಶ ಹೊರಹಾಕಿದರು. ಈ ವೇಳೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ ಜಮೀನಿನಲ್ಲಿ ದಲಿತರು ವ್ಯವಸಾಯ ಮಾಡಿಕೊಂಡು ಬರುತ್ತಿದ್ದರೇ ಸಾಗುವಳಿ ಚೀಟಿ ನೀಡಲು ಕ್ರಮವಹಿಸಲಾಗುವುದು. ಸಾಗುವಳಿ ಚೀಟಿ ಇದ್ದವರಿಗೆ ಖಾತೆ ಮಾಡಿಕೊಡಲು ನಿರ್ದೇಶನನೀಡಲಾಗುವುದು. ಇಲ್ಲದಿದ್ದರೇ ತಾಹಸೀಲ್ದಾರ್ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎಸ್ಸಿ/ಎಸ್ಟಿಗಳಿಗೆ ಟೆಂಡರ್ ನೀಡಿ:
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕೆಲಸ ಸಿಕ್ಕಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತ 1 ಕೋಟಿ ರೂ, ಒಳಗಿನ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರಕ್ಕೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ 1 ಕೋಟಿ ರೂ, ಒಳಗಿನ ಕಾಮಗಾರಿಗಳನ್ನು ಎಸ್ಸಿ,ಎಸ್ಟಿಗಳಿಗೆ ನೀಡಬೇಕು. ಎಚ್.ಡಿ.ಫಾರೆಸ್ಟ್ ವ್ಯಾಪ್ತಿಗೆ ಒಬ್ಬರು ವಿಶೇಷ ತಹಸೀಲ್ದಾರ್ ನೇಮಕ ಮಾಡಲು ಸರ್ಕಾರಕ್ಕೆ ಶಿಾರಸ್ಸು ಮಾಡಬೇಕು. ತಹಸೀಲ್ದಾರ್, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಎಸ್ಸಿ, ಎಸ್ಟಿ ಸಮುದಾಯದವರ ಕೆಲಸಮಾಡಲು ನಿರ್ಲಕ್ಷ್ಯ ಧೋರಣೆ ತೋರುತ್ತಾರೆ. ಕರ್ನಾಟಕ ಲ್ಯಾಂಡ್ ಗ್ರ್ಯಾಂಟ್ ನಿಯಮದ ಮೂಲಕ ಜಿಲ್ಲಾಧಿಕಾರಿಗಳು ದಲಿತರಿಗೆ ಜಮೀನು ನೀಡಬೇಕು ಎಂದು ವಕೀಲ ಪ್ರಸನ್ನಕುಮಾರ್ ಒತ್ತಾಯಿಸಿದರು. ಡಿಸಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ ಎಚ್.ಡಿ.ಾರೆಸ್ಟ್ ವ್ಯಾಪ್ತಿಗೆ ವಿಶೇಷ ತಹಸೀಲ್ದಾರ್ ನೇಮಕ ಮಾಡಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ದಲಿತರ ಮೇಲೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದರು.

ದೂರುಗಳ ಸುರಿಮಳೆ:
ಗುಂಡ್ಲುಪೇಟೆ ತಾಲೂಕಿ ಹಂಗಳ ಗ್ರಾಮದ 70 ದಲಿತ ಕುಟುಂಬಗಳಿಗೆ ನಿವೇಶನ ನೀಡಿದ್ದು, ಅದರಲ್ಲಿ 15 ಕುಟುಂಬಳಿಗೆ ಹಕ್ಕುಪತ್ರ ನೀಡಿದ್ದರೂ ಜಾಗ ಗುರುತು ಮಾಡಿಲ್ಲ ಎಂದು ಮಹಿಳೆಯರು ಮನವಿ ಸಲ್ಲಿಸಿದರು. ಅದಲ್ಲದೇ ಸಾಗುವಳಿ ಚೀಟಿ, ಖಾತೆ, ಕಂದಾಯ, ದಲಿತ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ನೂರಾರು ಜನರು ದೂರುಗಳ ಸುರಿಮಳೆ ಸುರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net