ಅಭಿವೃದ್ಧಿ ಕಾಣದ ಸಂಪರ್ಕ ರಸ್ತೆಗಳು

22rajesh3
Published on

ಚಾಮರಾಜನಗರ: ನಗರದ ಪ್ರಮುಖ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಸ್ಥಗಿತಗೊಂಡು ಹಲವು ವರ್ಷಗಳೇ ಕಳೆದಿದ್ದು, ಬಡಾವಣೆಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ನಗರಸಭೆ ವ್ಯಾಪ್ತಿಗೆ ಒಳಪಡುವ ಪ್ರಮುಖ ಬಡಾವಣೆಗಳಾದ ಸೋಮವಾರಪೇಟೆ, ಕರಿನಂಜನಪುರ ಹಾಗೂ ರಾಮಸಮುದ್ರ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ 2019 ರಲ್ಲಿ ಪ್ರಾರಂಭವಾಗಿತ್ತು. ಆದರೇ ಈವರೆಗೂ ರಸ್ತೆ ಕಾಮಗಾರಿ ಪೂರ್ಣವಾಗದೇ ಅಪೂರ್ಣವಾಗಿ ಉಳಿದಿದ್ದು, ಈ ಭಾಗದಲ್ಲಿ ಸಂಚರಿಸಲು ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕರಿನಂಜನಪುರದ ಹೃದಯ ಭಾಗದಿಂದ ಸಾಗುವ ರಸ್ತೆ ಕಂರಿನಂಜನಪುರದ ಹೊಸ ಬಡಾವಣೆಮೂಲಕ ಹಾದುಹೋಗಿ ರಾಮಸಮುದ್ರ ತಬ್ಬಳ್ಳಿ ಕಟ್ಟೆವರೆಗೆ ಮುಕ್ತಾಯವಾಗಬೇಕಿತ್ತು. ಇದೇ ರೀತಿಯಾಗಿ ಎರಡನೇ ಹಂತದಲ್ಲಿ ಕರಿನಂಜನಪುರದಿಂದ ಸೋಮವಾರಪೇಟೆ ಬಡಾವಣೆವರೆಗೆ ರಸ್ತೆ ನಿರ್ಮಾಣವಾಗಬೇಕಿತ್ತು. ಕಾಮಗಾರಿ ಆರಂಭಗೊಂಡು ಅರ್ಧಕ್ಕೆ ನಿಂತಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ನಿತ್ಯವೂ ಸಮಸ್ಯೆ ಅನುಭವಿಸುವಂತಾಗಿದೆ. ಈ ಬಡಾವಣೆಗಳಲ್ಲಿ ಇತ್ತೀಚೆಗೆ ಖಾಸಗಿ ಲೇಔಟ್‌ಗಳ ನಿರ್ಮಾಣದಿಂದ ಸಾಕಷ್ಟು ಮನೆಗಳು ನಿರ್ಮಾಣವಾಗಿದ್ದು, ಜನವಸತಿ ಹೆಚ್ಚಾಗುತ್ತಲೇ ಇದೆ. ಶಾಲಾ-ಕಾಲೇಜು, ಉದ್ಯೋಗ ಹಾಗೂ ಇನ್ನಿತರೆ ಕೆಲಸಗಳಿಗೆ ಹೋಗುವ ನೂರಾರು ಜನರು ಈ ಭಾಗದಲ್ಲಿ ಸಂಚಾರ ಮಾಡುವುದರಿಂದ ಈ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಬಡಾವಣೆಯ ನಿವಾಸಿಗಳು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅರ್ಧಂಬರ್ಧ ಕಾಮಗಾರಿ:
ಕರಿನಂಜನಪುರದಿಂದ ರಾಮಸಮುದ್ರ ಬಡಾವಣೆಗೆ ಹೋಗುವ ರಸ್ತೆ ಕಾಮಗಾರಿ ದೀನಬಂಧು ಶಾಲೆಯವರೆಗೆ ಮಾತ್ರ ಆಗಿದ್ದು, ಮುಂದಕ್ಕೆ ರಸ್ತೆ ನಿರ್ಮಾಣ ಮಾಡಿಲ್ಲ. ಕರಿನಂಜನಪುರದಿಂದ ಸೋಮವಾರಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗಾಗಿ ಕಲ್ಲುಗಳನ್ನು ಕಿತ್ತು ಹಾಗೆಯೇ ಬಿಡಲಾಗಿದೆ. ಇದರಿಂದಾಗಿ ಖಾಸಗಿ ಲೇಔಟ್ ಗಳಲ್ಲಿ ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ತಮ್ಮ ನಿವೇಶಗಳನ್ನು ಮುಚ್ಚಿದರೇ, ರಸ್ತೆಯೇ ಇಲ್ಲದಂತಾಗುತ್ತದೆ. ಮಣ್ಣಿನ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸಬೇಕಾಗಿರುವುದರಿಂದ, ನಿತ್ಯವೂ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ. ಇತ್ತೀಚೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಭಾರಿ ಗುಂಡಿ ಬಿದ್ದು, ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಕೆಲವೆಡೆ ಗಿಡಗೆಂಟಿಗಳು ಬೆಳೆದುಕೊಂಡು ರಸ್ತೆ ಮುಚ್ಚಿ ಹೋಗಿದೆ. ಈ ಸಂಪರ್ಕ ರಸ್ತೆಗಳ ಕಾಮಗಾರಿ ಯಾವಾಗ ಪ್ರಾರಂಭವಾಯಿತೋ, ಅಂದಿನಿಂದಲೂ ಹಾಗೆಯೇ ನಿಂತಿದೆ ಎಂದು ಈ ಭಾಗದ ನಿವಾಸಿಗಳು ಬೇಸರ ಹೊರಹಾಕಿದ್ದಾರೆ.

ಬೇರೆ ಗ್ರಾಮಗಳ ಜನರಿಗೂ ಅನುಕೂಲ:
ರಾಮಸಮುದ್ರ, ಕರಿನಂಜನಪುರ ಹಾಗೂ ಸೋಮವಾರಪೇಟೆ ಸಂಪರ್ಕ ರಸ್ತೆಗಳು ನಿರ್ಮಾಣವಾದರೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಹಲವಾರು ಗ್ರಾಮಗಳ ಜನರಿಗೆ ಅನುಕೂಲವಾಗುತ್ತದೆ. ಸೋಮವಾರಪೇಟೆ, ಹರದನಹಳ್ಳಿ, ವೆಂಕಟಯ್ಯನಛತ್ರ, ಛತ್ರ ಹೊಸೂರು, ಬಸವಾಪುರ, ಸಿದ್ದಯ್ಯನಪುರ ಹಾಗೂ ಇನ್ನಿತರೆ ಗ್ರಾಮಗಳಿಂದ ಬರುವವರಿಗೆ ಜೆಎಸ್‌ಎಸ್ ಕಾಲೇಜು, ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ ಹಾಗೂ ಇನ್ನಿತರೆ ಕಡೆಗೆ ಹೋಗಲು ಅನುಕೂಲವಾಗುತ್ತದೆ. ಚಂದಕವಾಡಿ, ರಾಮಸಮುದ್ರ ಹಾಗೂ ಇನ್ನಿತರೆ ಕಡೆಗಳಿಂದ ಹರದನಹಳ್ಳಿ ಕಡೆಗೆ ಹೋಗುವವರಿಗೆ ಈ ರಸ್ತೆಗಳು ಅನುಕೂಲವಾಗುತ್ತದೆ. ಇದರಿಂದ ಜಿಲ್ಲಾ ಕೇಂದ್ರದಲ್ಲಿ ವಾಹನ ದಟ್ಟಣೆಯೂ ಕಡಿಮೆಯಾದಂತೆ ಆಗುತ್ತದೆ. ಈಗ ರಸ್ತೆಗಳು ನಿರ್ಮಾಣವಾಗದ ಪರಿಣಾಮ ಈ ಗ್ರಾಮಗಳಿಂದ ಬರುವವರು ಡಾ.ಬಿ.ಆರ್.ಅಂಬೇಡ್ಕರ್ ಭವನದ ರಸ್ತೆಯಲ್ಲಿ ಬಳಸಿಕೊಂಡು ಸಂಚರಿಸಬೇಕಾಗಿದೆ. ನಿತ್ಯವೂ ಈ ಬಡಾವಣೆಗಳಲ್ಲಿ ಮನೆಗಳ ನಿರ್ಮಾಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸೋಮವಾರಪೇಟೆ, ಕರಿನಂಜನಪುರ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಈ ರಸ್ತೆ ಪೂರ್ಣವಾದರೇ ಹರದನಹಳ್ಳಿ ಹಾಗೂ ಇನ್ನಿತರೆ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಹಕಾರಿಯಾಗುತ್ತದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮಣ್ಣಿನ ರಸ್ತೆಗಳು ಹಾಳಾಗಿದೆ. ಗುಂಡಿ ಬಿದ್ದರುವ ರಸ್ತೆಗಳಲ್ಲಿ ಜನರು ಸಂಚರಿಸಲು ಸಮಸ್ಯೆಯಾಗುತ್ತಿದೆ. ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಸಂಪರ್ಕ ರಸ್ತೆಗಳನ್ನು ಸೂಕ್ತ ರೀತಿಯಲ್ಲಿ ನಿರ್ಮಾಣ ಮಾಡಬೇಕು.-ನಾಗರಾಜು, ಬುದ್ಧನಗರ ನಿವಾಸಿ, ಚಾಮರಾಜನಗರ ಕರಿನಂಜನಪುರದಿಂದ ರಾಮಸಮುದ್ರ ಸಂಪರ್ಕ ರಸ್ತೆ ಕಾಮಗಾರಿ ಅರ್ಧದಷ್ಟು ಆಗಿದೆ. ಸೋಮವಾರಪೇಟೆಯಿಂದ ಕರಿನಂಜನಪುರಕ್ಕೆ ಹೋಗುವ ಸಂಪರ್ಕ ರಸ್ತೆ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಸಂಬಂಧ ಸೂಕ್ತ ಕ್ರಮವಹಿಸಲಾಗುವುದು. ಶೀಘ್ರದಲ್ಲೇ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು.-ಎಸ್.ವಿ.ರಾಮದಾಸ್, ಪೌರಾಯುಕ್ತ, ನಗರಸಭೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net