

ಚಾಮರಾಜನಗರ: ಸುಳ್ವಾಡಿ ವಿಷಪ್ರಾಶನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಆದಷ್ಟು ಬೇಗ ನಿವೇಶನ ಹಾಗೂ ಜಮೀನು ಮಂಜೂರು ಮಾಡಬೇಕು ಹಾಗೂ ಎಸ್ಸಿ, ಎಸ್ಟಿ ಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕಡಿಪಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಿತರಕ್ಷಣಾ ಸಮಿತಿ ಸಭೆಯಲ್ಲಿ ದಲಿತ ಮುಖಂಡ ಅರಕಲವಾಡಿ ನಾಗೇಂದ್ರ ಮಾತನಾಡಿ, ಸುಳ್ವಾಡಿ ಕಿಚ್ಚಗುತ್ತಿ ಮಾರಮ್ಮ ದೇವಾಲಯದ ವಿಷಪ್ರಾಶನ ಪ್ರಕರಣ ನಡೆದು ಸುಮಾರು 6-7 ವರ್ಷಗಳು ಕಳೆದಿದ್ದರೂ ಇಂದಿಗೂ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿಲ್ಲ. ಅವರಿಗೆ ನಿವೇಶನ ಮತ್ತು ಜಮೀನು ನೀಡುವ ಭರವಸೆ ಹಾಗೆಯೇ ಉಳಿದಿದೆ ಎಂದು ಹೇಳಿದರು.
ಹನೂರು ತಾಲೂಕಿನ ಹೂಗ್ಯಂ ಹಾಗೂ ಇನ್ನಿತರ ಗ್ರಾಮಗಳಲ್ಲಿ ಇಂದಿಗೂ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. 2013-14ರಲ್ಲಿ ಭೀಮನವೀಡು ಗ್ರಾಮದಲ್ಲಿ ನಡೆದಿದ್ದ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಜಿಲ್ಲಾಡಳಿತ ಸೌಲಭ್ಯ ಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದೆ. ಆದರೆ, ಯಾವ ಸೌಲಭ್ಯಗಳನ್ನು ನೀಡಿಲ್ಲ. ಜಿಲ್ಲಾಡಳಿತವನ್ನೆ ವಂಚಿಸುವ ತಳಮಟ್ಟದ ಅಧಿಕಾರಿಗಳಿಂದ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ಜೋಡಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಾಧಾರ ಒದಗಿಸಬೇಕಾಗಿದ್ದ ಅಧಿಕಾರಿಗಳ ಉದಾಸೀನತೆಯಿಂದ ಪ್ರಕರಣ ಖುಲಾಸೆಯಾಗಿದೆ ಎಂದು ದೂರಿದರು.
ದಲಿತ ಮುಖಂಡ ದೊಡ್ಡಿಂದವಾಡಿ ಸಿದ್ದರಾಜು ಮಾತನಾಡಿ, ಎಂ.ಜಿ.ದೊಡ್ಡಿ ಗ್ರಾಮದಲ್ಲಿ ಸುಮಾರು 25-30 ಜನರು ಸುಳ್ವಾಡಿ ಸಂತ್ರಸ್ತರಿದ್ದಾರೆ. ಹಿಂದಿನ ಜಿಲ್ಲಾಧಿಕಾರಿಗಳು ಸರ್ವೇ ನಂ.934 ರಲ್ಲಿ ನಿವೇಶನಕ್ಕಾಗಿ ಸ್ಥಳ ಗುರುತು ಮಾಡಿದ್ದರು. ಗ್ರಾಪಂ ಅಧಿಕಾರಿಗಳು 10 ವರ್ಷಗಳ ಹಿಂದೆಯೇ ನಿವೇಶನ ಕೊಟ್ಟಿದ್ದೇವೆ ಎಂದು ಅಧಿಕಾರಿಗಳನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಂತ್ರಸ್ತರಿಗೆ ಆದಷ್ಟು ಬೇಗ ನಿವೇಶನ ಮತ್ತು ಜಮೀನು ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ, ಸುಳ್ವಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಸಂತ್ರಸ್ತರಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ. ಜಮೀನು ನೀಡುವ ವಿಚಾರದಲ್ಲಿ ಶೀಘ್ರ ಕ್ರಮವಹಿಸಲಾಗುವುದು. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ವಹಿಸುತ್ತೇವೆ ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿಂದ್ಯಾ ಹಾಜರಿದ್ದರು.
ಸಾಗುವಳಿ ಚೀಟಿ ವಿತರಣೆಗೆ ಆಗ್ರಹ
ತಾಲೂಕಿನ ಬಸವನಪುರ ಗ್ರಾಮದ 1 ಎಕರೆ ಭೂಮಿ ದಲಿತ ಸಮುದಾಯದ ಸ್ಮಶಾನಕ್ಕೆ ಮಂಜೂರಾಗಿದೆ. ಆದರೆ ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಸರ್ವೇ ನಂ.128ರಲ್ಲಿ 120 ಕುಟುಂಬಗಳು ವ್ಯವಸಾಯ ಮಾಡುತ್ತಿವೆ. ಇಂದಿಗೂ ಸಾಗುವಳಿ ಪತ್ರ ವಿತರಣೆ ಮಾಡಿಲ್ಲ ಎಂದು ದಲಿತ ಮುಖಂಡ ರಾಜಶೇಖರ್ ಆರೋಪಿಸಿದರು.
ಹರದನಹಳ್ಳಿ ಎಚ್.ಡಿ. ಾರೆಸ್ಟ್ ವ್ಯಾಪ್ತಿಗೆ ಬರುವ ಜಮೀನುಗಳಲ್ಲಿ ಹಲವು ದಲಿತರು ವ್ಯವಸಾಯ ಮಾಡಿಕೊಂಡು ಬರುತ್ತಿದ್ದು ಸಾಗುವಳಿ ಚೀಟಿ ನೀಡಿಲ್ಲ ಎಂದು ಮುಖಂಡರೊಬ್ಬರು ಆಕ್ರೋಶ ಹೊರಹಾಕಿದರು. ಈ ವೇಳೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ ಜಮೀನಿನಲ್ಲಿ ದಲಿತರು ವ್ಯವಸಾಯ ಮಾಡಿಕೊಂಡು ಬರುತ್ತಿದ್ದರೆ ಸಾಗುವಳಿ ಚೀಟಿ ನೀಡಲು ಕ್ರಮವಹಿಸಲಾಗುವುದು. ಸಾಗುವಳಿ ಚೀಟಿ ಇದ್ದವರಿಗೆ ಖಾತೆ ಮಾಡಿಕೊಡಲು ನಿರ್ದೇಶನ ನೀಡಲಾಗುವುದು. ಇಲ್ಲದಿದ್ದರೆ ತಹಸೀಲ್ದಾರ್ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಸ್ಸಿ, ಎಸ್ಟಿಗಳಿಗೆ ಟೆಂಡರ್ ನೀಡಿ
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕೆಲಸ ಸಿಗಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತ 1 ಕೋಟಿ ರೂ., ಒಳಗಿನ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರಕ್ಕೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ 1 ಕೋಟಿ ರೂ. ಒಳಗಿನ ಕಾಮಗಾರಿಗಳನ್ನು ಎಸ್ಸಿ, ಎಸ್ಟಿಗಳಿಗೆ ನೀಡಬೇಕು. ಎಚ್.ಡಿ.ಫಾರೆಸ್ಟ್ ವ್ಯಾಪ್ತಿಗೆ ಒಬ್ಬರು ವಿಶೇಷ ತಹಸೀಲ್ದಾರ್ ನೇಮಕ ಮಾಡಲು ಸರ್ಕಾರಕ್ಕೆ ಶಿಾರಸು ಮಾಡಬೇಕು. ತಹಸೀಲ್ದಾರ್, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಎಸ್ಸಿ, ಎಸ್ಟಿ ಸಮುದಾಯದವರ ಕೆಲಸ ಮಾಡಲು ನಿರ್ಲಕ್ಷ್ಯ ತೋರುತ್ತಾರೆ. ಕರ್ನಾಟಕ ಲ್ಯಾಂಡ್ ಗ್ರ್ಯಾಂಟ್ ನಿಯಮದ ಮೂಲಕ ಜಿಲ್ಲಾಧಿಕಾರಿ ದಲಿತರಿಗೆ ಜಮೀನು ನೀಡಬೇಕು ಎಂದು ವಕೀಲ ಪ್ರಸನ್ನಕುಮಾರ್ ಒತ್ತಾಯಿಸಿದರು.
ಡಿಸಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ ಎಚ್.ಡಿ.ಾರೆಸ್ಟ್ ವ್ಯಾಪ್ತಿಗೆ ವಿಶೇಷ ತಹಸೀಲ್ದಾರ್ ನೇಮಕ ಮಾಡಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ದಲಿತರ ಮೇಲೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದರು.
ಜಾಗ ಗುರುತು ಮಾಡಿಲ್ಲ
ಗುಂಡ್ಲುಪೇಟೆ ತಾಲೂಕಿ ಹಂಗಳ ಗ್ರಾಮದ 70 ದಲಿತ ಕುಟುಂಬಗಳಿಗೆ ನಿವೇಶನ ನೀಡಿದ್ದು, ಅದರಲ್ಲಿ 15 ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದರೂ ಜಾಗ ಗುರುತು ಮಾಡಿಲ್ಲ ಎಂದು ಮಹಿಳೆಯರು ಮನವಿ ಸಲ್ಲಿಸಿದರು. ಸಾಗುವಳಿ ಚೀಟಿ, ಖಾತೆ, ಕಂದಾಯ, ದಲಿತ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ನೂರಾರು ಜನರು ದೂರುಗಳ ಸುರಿಮಳೆ ಸುರಿಸಿದರು.