ಐವನ್ ಡಿಸೋಜಾ ವಿರುದ್ಧ ಬಿಜೆಪಿ ಪ್ರತಿಭಟನೆ

20CHN01- BJRWEW
Published on

ಚಾಮರಾಜನಗರ : ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ನೀಡಿರುವ ಹೇಳಿಕೆ ಖಂಡಿಸಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಹೊರಟು ಶ್ರೀ ಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಯುವಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯಕುಮಾರ್ ಮಾತನಾಡಿ, ಪ್ರಪಂಚದ ಯಾವ ಭಾಗದಲ್ಲೇ ಆದರೂ ಮಾನವ ಹತ್ಯೆ ನಡೆದಾಗ ಭಾರತೀಯರಾಗಿ ನಾವೆಲ್ಲರೂ ಖಂಡಿಸುತ್ತೇವೆ. ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಮಾನವ ವಿರೋಧಿ ದೌರ್ಜನ್ಯ ಅತ್ಯಂತ ಖಂಡನೀಯವಾಗಿದೆ. ಅದನ್ನು ಕರ್ನಾಟಕದಲ್ಲಿ ನಡೆಯುವಂತೆ ಮಾಡುತ್ತೇವೆ ಎನ್ನುವ ಐವನ್ ಡಿಸೋಜಾ ಅವರ ಹುನ್ನಾರ ಏನು ಎಂಬುದನ್ನು ಬಹಿರಂಗಗೊಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ, ಇಂದು ದಲಿತ ರಾಜ್ಯಪಾಲರನ್ನು ಬಹಳ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ. ಐವನ್ ಡಿಸೋಜಾ ಅಂತವರು ನಮ್ಮ ದೇಶವನ್ನು ಮುಸ್ಲಿಂ ರಾಷ್ಟ್ರ ಅಥವಾ ಕ್ರೈಸ್ತ ರಾಷಟ್ರೆವಾಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ಕೂಡಲೇ ಅವರನ್ನು ಬಂಧಿಸಬೇಕು. ರಾಷ್ಟ್ರ ವಿರೋಧಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಿಂದ ತೊಲಗಿಸಬೇಕಾಗಿದೆ ಎಂದರು.
ಪ್ರತಿಭಟನೆಯಲ್ಲಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ, ಬಿಜೆಪಿ ಮುಖಂಡ ಪಿ.ವೃಷಭೇಂದ್ರಪ್ಪ, ನಿಜಗುಣರಾಜು, ಬುಲೆಟ್ ಚಂದ್ರು, ಪ್ರವೀಣ್, ಮನೋಜ್ ಪಟೇಲ್, ಕುಮಾರ್, ಮಹದೇವಸ್ವಾಮಿ, ಮಂಜುನಾಥ್, ವಿರಾಟ್ ಶಿವು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net