

ಚಾಮರಾಜನಗರ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸಾಮಾಜಿಕ ಸುಧಾರಣೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಾರೆ ಎಂದು ಎಂಎಸ್‌ಐಎಲ್ ಅಧ್ಯಕ್ಷರೂ ಆದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 109ನೇ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಾಕಷ್ಟು ಜನಪರ ಹೋರಾಟಗಳಲ್ಲಿ ಭಾಗವಹಿಸಿದ್ದ ದೇವರಾಜ ಅರಸು ಅವರು ಪ್ರಜಾಪ್ರಭುತ್ವದ ಆಶಯದಂತೆ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರು. ಬಡವರ, ಶೋಷಿತರ, ಹಿಂದುಳಿದ ವರ್ಗಗಳ, ದೀನದಲಿತರಿಗೆ ಸಾಮಾಜಿಕ ನ್ಯಾಯ ದೊರಕಿಸಲು ಮುನ್ನುಡಿ ಬರೆದರು. 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದು ಎಲ್ಲ ಸಮುದಾಯಗಳಿಗೂ ಶಿಕ್ಷಣ, ಉದ್ಯೋಗ ಕಲ್ಪಿಸಿದರು. ಭೂ ಸುಧಾರಣೆ, ಜೀತಪದ್ಧತಿ ನಿಷೇಧ, ಆಶ್ರಯ ಯೋಜನೆ ಮನೆಗಳು ಅರಸು ಅವರ ಪ್ರಮುಖ ಕೊಡುಗೆಗಳಾಗಿವೆ ಎಂದರು.
ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಭಾರತ ಕಂಡ ಅಪ್ರತಿಮ ರಾಜಕಾರಣಿ ದೇವರಾಜ ಅರಸು. ಕೃಷಿಕ ಕುಟುಂಬದಿಂದ ಬಂದ ಅರಸು ಅವರು ರೈತಾಪಿ ವರ್ಗಗಳ ಕಷ್ಟ-ಕಾರ್ಪಣ್ಯಗಳನ್ನು ಹತ್ತಿರದಿಂದ ಅರಿತಿದ್ದರು. ಸಮಾಜದಲ್ಲಿ ಬಡವರ, ಶೋಷಿತರ ಧ್ವನಿಯಾಗಿದ್ದ ಅರಸು ಅವರು ಇಡೀ ದೇಶಕ್ಕೆ ಮಾದರಿ ರಾಜಕಾರಣಿಯಾಗಿದ್ದರು ಎಂದು ಸ್ಮರಿಸಿದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಬಡವರು, ಹಿಂದುಳಿದವರ ನೇತಾರರಾಗಿದ್ದ ಅರಸು ಅವರು ತಮ್ಮ ರಾಜಕೀಯ ಬದುಕಿನುದ್ದಕ್ಕೂ ರಾಜ್ಯದ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದರು. ಶಿಕ್ಷಣ ಸುಧಾರಣೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳನ್ನು ಆರಂಭಿಸಿದರು. ಅರಸು ಅವರನ್ನು ಚಿರಸ್ಥಾಯಿಯಾಗಿಸುವ ಉದ್ದೇಶದಿಂದ ಪ್ರತಿವರ್ಷ ದೇವರಾಜ ಅರಸು ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕುಮಾರ್ ಉಪಸ್ಥಿತರಿದ್ದರು.
ನವ ಕರ್ನಾಟಕದ ಉದಯ
ಲೇಖಕ ಪ್ರೊ.ಸಿ.ನಾಗಣ್ಣ ಮಾತನಾಡಿ, ಆಧುನಿಕ ಭಾರತದ ಚರಿತ್ರೆಯಲ್ಲಿ ಅರಸು ಅವರ ಸಮಾಜ ಸುಧಾರಣೆ, ರಾಜಕೀಯ ಜೀವನ, ಆಡಳಿತ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. ಅವರ ಜನಪರ ಯೋಜನೆಗಳ ಜಾರಿ ನವ ಕರ್ನಾಟಕದ ಉದಯಕ್ಕೆ ಕಾರಣವಾಯಿತು. ಯಾವುದೇ ಪ್ರಭಾವವಿಲ್ಲದೆ ಸ್ವಂತ ಬಲದಿಂದ ಮೇಲೆ ಬಂದ ಅವರು ನೇರ ಹಾಗೂ ನಿಷ್ಠುರವಾದಿಯಾಗಿದ್ದರು. ಕುವೆಂಪು ಅವರ ಅಭಿಯಾನಿಯಾಗಿದ್ದ ಅವರು ಸಂಗೀತ, ಸಾಹಿತ್ಯ ಹಾಗೂ ಲಲಿತಕಲೆಗಳ ಆರಾಧಕರೂ ಆಗಿದ್ದರು ಎಂದರು.
ಸಾಮಾಜಿಕ ಅಸಮಾನತೆ ತೊಡೆಯಲು ಎಲ್.ಜಿ. ಹಾವನೂರು ಆಯೋಗ ರಚಿಸಿ ಹಿಂದುಳಿದವರ ಏಳಿಗೆಗೆ ಶ್ರಮಿಸಿದ ಅವರು ಭೂ ಸುಧಾರಣೆ ಕಾಯ್ದೆ, ಜೀತಪದ್ಧತಿ ನಿರ್ಮೂಲನೆ, ಋಣಮುಕ್ತ ಕಾಯ್ದೆಗಳನ್ನು ಜಾರಿಗೊಳಿಸಿದರು. ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮರುನಾಮಕರಣ ಮಾಡಿದರು. 1975-76ರಲ್ಲಿ 50 ಸಾವಿರ ನಿರುದ್ಯೋಗಿಗಳಿಗೆ ಶಿಷ್ಯವೇತನ ಒದಗಿಸಿ ಅರ್ಥಿಕ ಸಬಲೀಕರಣಕ್ಕೆ ನೆರವಾದರು. ಅರಸು ಅವರ ಕಾಲದಲ್ಲಿ ದಲಿತ ಹಾಗೂ ಬಂಡಾಯ ಸಾಹಿತ್ಯಗಳು ಹೊರಹೊಮ್ಮಿದವು ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಡಳಿತ ಭವನದವರೆಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ ಭಾವಚಿತ್ರ ಮೆರವಣಿಗೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ವೇದಿಕೆ ಕಾರ್ಯಕ್ರಮದಲ್ಲಿ ಕಳೆದ ಬಾರಿ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜನಪದ ಗಾಯಕರಾದ ಸಿ.ಎಂ.ನರಸಿಂಹಮೂರ್ತಿ ಡಿ.ದೇವರಾಜ ಅರಸು ಕುರಿತ ಗಾಯನ ಪ್ರಸ್ತುತಪಡಿಸಿದರು.