ನೀರಿಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ

19rajesh1
Published on

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ರೀತಿಯಲ್ಲಿ ಗಮನಹರಿಸದೆ ನಗರ ನಿವಾಸಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾ ಕೇಂದ್ರಕ್ಕೆ ಕುಡಿಯುವ ನೀರು ಪೂರೈಕೆಯಾಗುವ ತಿ.ನರಸೀಪುರದ ನೀರೆತ್ತುವ ಜಾಕ್ವೆಲ್ ಬಳಿ ಇತ್ತೀಚೆಗೆ ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳಿಂದ ಹೆಚ್ಚಿನ ನೀರು ಬಿಡಲಾಗಿ ನೀರು ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಪರಿಣಾಮ ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಿಗೂ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದ್ದು, ಹಲವು ವಾರ್ಡ್‌ಗಳಿಗೆ ವಾರಕ್ಕೊಮ್ಮೆಯೂ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಆದರೂ ನಗರಸಭೆ ಅಧಿಕಾರಿಗಳು ತಿ.ನರಸೀಪುರದಲ್ಲಿ ನೀರು ಪೂರೈಕೆ ಯಂತ್ರ ಕೆಟ್ಟು ಹೋಗಿದೆ, ಮಂಗಲ ಗ್ರಾಮದ ಬಳಿ ಇರುವ ಯಂತ್ರ ದುರಸ್ತಿಯಾಗಬೇಕಿದೆ ಎಂಬ ನೆಪ ಹೇಳಿ ಸೂಕ್ತ ರೀತಿಯಲ್ಲಿ ಎಲ್ಲ ವಾರ್ಡ್‌ಗಳಿಗೂ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ. ಕೆಲವು ವಾರ್ಡ್‌ಗಳಲ್ಲಿ ಪೈಪ್‌ಲೈನ್‌ಗಳು ಒಡೆದು ಹೋಗಿ ಕುಡಿಯುವ ನೀರು ವ್ಯರ್ಥವಾಗಿ ಹರಿಯುತ್ತಿದೆ. ಹಲವೆಡೆ ಬೋರ್‌ವೆಲ್ ಸಂಪರ್ಕ ಕಲ್ಪಿಸಿದ್ದರೂ ನೀರಿನ ಸಮಸ್ಯೆ ಮರುಕಳಿಸುತ್ತಲೇ ಇದೆ. ಈ ನಿಟ್ಟಿನಲ್ಲಿ ಹೆಚ್ಚುವರಿ ಕೊಳವೆಮಾರ್ಗ ಮತ್ತು ಪತ್ಯೇಕ ನೀರು ಸಂಗ್ರಹಾಗಾರ ನಿರ್ಮಾಣಕ್ಕೆ ಕ್ರಮವಹಿಸಿ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳಿಂದ ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಉಳ್ಳವರಿಗೆ ಮಾತ್ರ ನೀರು
ನಗರಸಭೆ ವ್ಯಾಪ್ತಿಯ 18ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಉಳ್ಳವರಿಗೆ, ಹೆಚ್ಚು ಕಂದಾಯ ಕಟ್ಟುವರಿಗೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ನೀರು ಪೂರೈಕೆಯಲ್ಲೂ ನಗರಸಭೆ ತಾರತಮ್ಯ ಮಾಡುತ್ತಿದೆ. 15-25 ದಿನಗಳಿಗೊಮ್ಮೆ ಮಾತ್ರ ಸಾಮಾನ್ಯ ಜನರಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಿದರೂ ಅದು ಕೂಡ ಆಗೊಮ್ಮೆ, ಈಗೊಮ್ಮೆ ಕೆಟ್ಟು ನಿಲ್ಲುತ್ತದೆ. ಪರಿಣಾಮ ಸಾಮಾನ್ಯ ಜನರು ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ.
ಆನಂದ್ ಭಗೀರಥ, 18ನೇ ವಾರ್ಡ್, ಚಾಮರಾಜನಗರ

ಪೈಪ್‌ಲೈನ್ ಒಡೆದು ವ್ಯರ್ಥ
ನಗರಸಭೆ ವತಿಯಿಂದ ಹಲವು ವಾರ್ಡ್‌ಗಳಿಗೆ ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಅಧಿಕಾರಿಗಳನ್ನು ಪ್ರಶ್ನಿಸಿದರೆ ತಿ.ನರಸೀಪುರ ಬಳಿ ಮೋಟಾರ್‌ಗೆ ಹೂಳು ತುಂಬಿಕೊಂಡಿದೆ, ಮಂಗಲದ ಬಳಿ ಮೋಟಾರ್ ರಿಪೇರಿಯಾಗಿಲ್ಲ ಎಂಬ ನೆಪವನ್ನು ಹೇಳುತ್ತಾರೆ. ಕೆಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ನೀರು ವ್ಯರ್ಥವಾಗಿ ಹರಿಯುತ್ತಿದೆ. ನಗರಸಭೆ ಅಧಿಕಾರಿಗಳು ಹಾಗೂ ಶಾಸಕರು ಕಣ್ಮುಚ್ಚಿಕೊಂಡು ಕುಳಿತಿದ್ದಾರೆ.
ಸಿ.ಎಂ.ಕೃಷ್ಣಮೂರ್ತಿ, ಹೋರಾಟಗಾರ, ಚಾಮರಾಜನಗರ

ಶಾಶ್ವತ ಪರಿಹಾರ ಬೇಕು
ನಮ್ಮ ವಾರ್ಡ್‌ನಲ್ಲಿ ಕಳೆದ ಒಂದು ತಿಂಗಳಿಂದ ಸೂಕ್ತ ರೀತಿಯಲ್ಲಿ ಕುಡಿಯುವ ನೀರು ಪೂರೈಕೆ ಆಗುತ್ತಿರಲಿಲ್ಲ. ಕೆಲವು ಕೊಳವೆ ಬಾವಿಗಳು ಕೆಟ್ಟು ನಿಂತಿದ್ದವು. ಈಗ ದುರಸ್ತಿ ಮಾಡಲಾಗಿದ್ದು 2 ದಿನಗಳಿಂದ ನೀರು ಪೂರೈಕೆಯಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರಕ್ಕೆ ಪ್ರತ್ಯೇಕ ಸಂಗ್ರಹಾಗಾರ ಹಾಗೂ ನೀರು ಪೂರೈಕೆ ಮಾಡುವ ಯಂತ್ರಗಳನ್ನು ಹೊಸದಾಗಿ ಅಳವಡಿಸಬೇಕು. ಹಾಗಿದ್ದಾಗ ಮಾತ್ರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
ಕುಮುದಾ ಕೇಶವಮೂರ್ತಿ, ನಗರಸಭೆ ಸದಸ್ಯೆ, ಚಾಮರಾಜನಗರ

ಸಮಸ್ಯೆ ಆಲಿಸುವುದಿಲ್ಲ
ನಮ್ಮ ವಾರ್ಡ್‌ನಲ್ಲಿ ತಿಂಗಳಿಗೆ ಒಂದು ಬಾರಿಯಾದರೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುವುದಿಲ್ಲ. ನೀರು ಪೂರೈಕೆಯಾಗುವ ಸಂದರ್ಭದಲ್ಲಿ ಗಲೀಜು ನೀರು ಬರುತ್ತಿದೆ. ಕುಡಿಯಲು ಯೋಗ್ಯವಲ್ಲದ ನೀರು ಪೂರೈಕೆಯಿಂದ ಬಡಾವಣೆ ನಿವಾಸಿಗಳು ಸಮಸ್ಯೆ ಅನುಭವಿಸುವಂತಾಗಿದೆ. ನಗರಸಭೆ ಅಧಿಕಾರಿಗಳು ಕಾಲ ಕಾಲಕ್ಕೆ ವಾರ್ಡ್‌ಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುವುದಿಲ್ಲ. ನಗರಸಭಾ ಸದಸ್ಯರು ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಾಮಾನ್ಯ ಜನರು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ.
ಜನಶಕ್ತಿ ಸುರೇಶ್, ವಾರ್ಡ್ ನಂ.31, ರಾಮಸಮುದ್ರ

2ನೇ ಹಂತದ ಯೋಜನೆ ಜಾರಿ
ನಗರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಿಗೂ ವಾರಕ್ಕೊಮ್ಮೆ ಮಾತ್ರ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಇದರಿಂದ ವಾರ್ಡಿನ ನಾಗರಿಕರಿಗೆ ಸಮರ್ಪಕ ಕುಡಿಯುವ ನೀರು ದೊರೆಯುತ್ತಿಲ್ಲ. ಹಾಗೆಯೇ ಮಂಗಲ ಮತ್ತು ತಿ.ನರಸೀಪುರದಲ್ಲಿ ಏನಾದರೂ ತಾಂತ್ರಿಕ ಸಮಸ್ಯೆ ಉಂಟಾದರೆ ವಾರಕ್ಕೊಮ್ಮೆಯೂ ನೀರು ಸಿಗುವುದು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಕೊಳವೆ ಬಾವಿಯ ನೀರನ್ನೇ ಅವಲಂಬಿಸಬೇಕಾಗಿದೆ. ಆದ್ದರಿಂದ ಕಬಿನಿ 2ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿಯಾದರೆ ಸಮಸ್ಯೆಗೆ ಮುಕ್ತಿ ಸಿಗಬಹುದು. ಈ ನಿಟ್ಟಿನಲ್ಲಿ 2ನೇ ಹಂತದ ಕಬಿನಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳು ಅನುದಾನ ಘೋಷಿಸಲಿ.
ಮಹೇಶ್, ನಗರಸಭೆ ಸದಸ್ಯ

ಕೊಳವೆಬಾವಿ ಅವಲಂಬನೆ
ನಗರಸಭೆ ವ್ಯಾಪ್ತಿಯ 13 ಮತ್ತು 14ನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಕಾವೇರಿ ನೀರು ಪೂರೈಕೆಯಾಗುವುದೇ ಇಲ್ಲ. ವಾರಕ್ಕೊಮ್ಮೆ ಬಂದರೂ ಕೆಲವು ಬಾರಿ ಕುಡಿಯಲು ಯೋಗ್ಯವಲ್ಲದ ನೀರು ಪೂರೈಕೆಯಾಗುತ್ತಿದೆ. ಸಂಪೂರ್ಣವಾಗಿ ಕೊಳವೆ ಬಾವಿ ನೀರನ್ನು ಅವಲಂಬಿಸಿದ್ದೇವೆ. ಒಂದು ವೇಳೆ ಕೊಳವೆಬಾವಿಯ ಮೋಟಾರ್ ಕೆಟ್ಟು ನಿಂತರೆ ಬಡಾವಣೆಯ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡಲು ಜನಪ್ರತಿನಿಧಿಗಳು, ನಗರಸಭಾ ಅಧಿಕಾರಿಗಳು ಮುಂದಾಗಬೇಕು.
ಗೌತಮ್, 13ನೇ ವಾರ್ಡ್ ನಿವಾಸಿ, ಚಾಮರಾಜನಗರ

ಹೆಚ್ಚಿನ ಅನುದಾನ ನೀಡಬೇಕು
ಸೋಮವಾರಪೇಟೆ ಬಡಾವಣೆ 1ನೇ ವಾರ್ಡ್ ಮುಖ್ಯ ರಸ್ತೆಯಲ್ಲಿದ್ದರೂ ಕಾವೇರಿ ನೀರು ಪೂರೈಕೆ ಮಾಡುತ್ತಿಲ್ಲ. ಪರಿಣಾಮವಾಗಿ ಕೊಳವೆಬಾವಿಗಳ ನೀರನ್ನು ಬಳಕೆ ಮಾಡುತ್ತಿದ್ದೇವೆ. ಬೇಸಿಗೆ ಹಾಗೂ ಮಳೆಗಾಲದಲ್ಲಿ ಕೊಳವೆ ಬಾವಿಗಳ ಯಂತ್ರಗಳು ಕೆಟ್ಟು ನಿಂತರೆ ಬಡಾವಣೆಯ ನಿವಾಸಿಗಳು ನೀರಿಗೆ ಸಮಸ್ಯೆ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು 2ನೇ ಹಂತದ ಕಬಿನಿ ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಅನುದಾನ ನೀಡಬೇಕು. ಸೋಮವಾರಪೇಟೆಯನ್ನು ಒಳಗೊಂಡಂತೆ ಎಲ್ಲ 31 ವಾರ್ಡ್‌ಗಳಿಗೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕು. ಜಿಲ್ಲಾ ಕೇಂದ್ರಕ್ಕೆ ಶಾಶ್ವತ ಪರಿಹಾರವನ್ನು ಕಲ್ಪಿಸಿ.
ನಾಗಮ್ಮ, 1ನೇ ವಾರ್ಡ್ ನಿವಾಸಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net