

ಚಾಮರಾಜನಗರ: ಬದುಕಿನುದ್ದಕ್ಕೂ ನಿರಂತರವಾಗಿ ಕಲಾಸೇವೆ ಮಾಡಿಕೊಂಡು ಬಂದ ತಂದೆಯ ಹಾದಿಯಲ್ಲೇ ಸಾಗುತ್ತಿರುವ ಮಗನೊಬ್ಬ, ಕಲಾರಾಧನೆ ಸಂಸ್ಥೆಯ ಮೂಲಕ ಕಲಾಸೇವೆಯಲ್ಲಿ ತೊಡಗಿದ್ದಾನೆ.
ಯಳಂದೂರು ತಾಲೂಕಿನ ಯರಗಂಬಳ್ಳಿ ಗ್ರಾಮದ ಆರ್.ಶಿವಣ್ಣ ಮತ್ತು ಗೌರಮ್ಮ ದಂಪತಿಗಳ ಮಗನಾದ ಎಸ್.ಆದರ್ಶ ಕುಮಾರ್ ಅವರು ಸುಮಾರು 10 ವರ್ಷಗಳಿಂದ ಸುಗಮ ಸಂಗೀತ, ಜಾನಪದ ಗಾಯನದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರ್ಶಕುಮಾರ್ ಅವರ ತಂದೆ ಆರ್.ಶಿವಣ್ಣ ಸುಗಮ ಸಂಗೀತ, ಜಾನಪದ ಗಾಯನ ಹಾಗೂ ಭಜನೆಯಲ್ಲಿ ತನ್ನದೇ ಆದ ಛಾಪುಮೂಡಿಸಿದ್ದರು. ಈ ಭಾಗದಲ್ಲಿ ಸಾಕಷ್ಟು ಚಿರಪರಿಚಿತರೂ ಆಗಿದ್ದರೂ. ಸುಮಾರು 20 ವರ್ಷಗಳ ಹಿಂದೆ ಇಂಚರ ಕಲಾ ಬಳಗ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಕಲಾಸೇವೆಯಲ್ಲಿ ತೊಡಗಿದ್ದರು. ಈ ಸಂಸ್ಥೆಯ ಕಲಾಸೇವೆಯನ್ನು ನೋಡುತ್ತಾ ಬೆಳೆದ ಆದರ್ಶಕುಮಾರ್ ತಮ್ಮ ತಂದೆಯ ಸ್ಪೂರ್ತಿಯೊಂದಿಗೆ 2022 ರ ಅಕ್ಟೋಬರ್ ತಿಂಗಳಲ್ಲಿ ಕಲಾರಾಧನೆ ಸಾಂಸ್ಕೃತಿಕ ವೇದಿಕೆಯನ್ನು ಕಟ್ಟಿಕೊಂಡು, ಈ ಸಂಸ್ಥೆಯ ಮೂಲಕ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದಲ್ಲದೇ, ಹಲವಾರು ಸಮಾಜ ಸೇವಾ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದಾರೆ.
ಆದರ್ಶಕುಮಾರ್ ಅವರು ಜಿಲ್ಲಾ ದಸರಾ ಸಾಂಸ್ಕೃತಿಕ ಕಾರ್ಯಕ್ರಮ, ನೂರಾರು ಮದುವೆ ಹಾಗೂ ವಿವಿಧ ಶುಭ ಸಮಾರಂಭಗಳಲ್ಲಿ ಸುಗಮ ಸಂಗೀತ ಮತ್ತು ಜಾನಪದ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ಕಲಾರಾಧನೆ ಸಂಸ್ಥೆಯಲ್ಲಿ ಬಳೆಪೇಟೆ ಪ್ರಕಾಶ್ ಉಪಾಧ್ಯಕ್ಷರಾಗಿ, ಚಂಗಚಹಳ್ಳಿ ಕೃಷ್ಣಮೂರ್ತಿ ಕಾರ್ಯದರ್ಶಿಯಾಗಿ, ಗಾಯಕರಾದ ಪ್ರಸಾದ್, ಸತೀಶ್‌ಕುಮಾರ್, ರಶ್ಮಿ, ಗಾಯತ್ರಿ ಅವರು ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆದರ್ಶ ಯರಗಂಬಳ್ಳಿ ಕಲಾಸೇವೆಯನ್ನು ಗುರುತಿಸಿ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಕಲಾ ವೇದಿಕೆ ವತಿಯಿಂದ ಸನ್ಮಾನಿಸಲಾಗಿದೆ. ಯಳಂದೂರು ತಾಲೂಕು ಜಾನಪದ ಪರಿಷತ್ ವತಿಯಿಂದ ಉದಯೋನ್ಮುಖ ಗಾಯಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅದಲ್ಲದೇ ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಜತೆಗೆ ಯುವ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಕಲ್ಪಿಸುವ ಯೋಜನೆ ಹಾಕಿಕೊಂಡಿದ್ದಾರೆ.
ತಂದೆಯ ಕಲೆಯ ಬಳುವಳಿ:
ಯರಗಂಬಳ್ಳಿ ಆರ್.ಶಿವಣ್ಣ ಅವರು ಮೂಲತಃ ಭಜನೆ ಕಲಾವಿದರಾಗಿದ್ದರು, ಅವರ ಕಲೆ ಪುತ್ರ ಆದರ್ಶಕುಮಾರ್ ಅವರಿಗೆ ಬಳುವಳಿಯಾಗಿ ಬಂದಿದೆ. ಆರ್.ಶಿವಣ್ಣ ಕಟ್ಟಿದ ಇಂಚರ ಕಲಾಬಳಗ ಸಂಸ್ಥೆಯಲ್ಲಿ ಸುಗಮ ಸಂಗೀತ ಗಾಯಕರಾದ ಆರ್.ಮಹೇಂದ್ರ, ಆರ್.ರವಿಕುಮಾರ್, ತಬಲ ರಘುನಾಥ್, ಯರಿಯೂರು ಚಿನ್ನಸ್ವಾಮಿ, ಪಾಳ್ಯ ರಾಮದಾಸ್ ಅವರು ಸೇವೆಸಲ್ಲಿಸಿದ್ದರು ಎಂಬುದು ಗಮನಾರ್ಹವಾಗಿದೆ. ಆರ್.ಶಿವಣ್ಣ ಅವರು ನಿರಂತರವಾಗಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರುವ ಜತೆಗೆ ಹಲವಾರು ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದರು. ಖ್ಯಾತ ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಅವರ ಸತ್ಯವಂತೆ ಶಿವಶರಣೆ ಶಂಕಮ್ಮ ಎಂಬ ಭಕ್ತ ಚಲನಚಿತ್ರದಲ್ಲಿ ಅಭಿನಯಿಸಿ ಗಮನಸೆಳೆದಿದ್ದರು. ಚಿಕ್ಕವಯಸ್ಸಿನಲ್ಲೇ ತಂದೆಯ ಕಾರ್ಯಕ್ರಮಗಳಿಗೆ ಹೋಗುತ್ತಿದ್ದ ಆದರ್ಶ ಯರಗಂಬಳ್ಳಿ ಕಲೆಯನ್ನು ಕರಗತ ಮಾಡಿಕೊಂಡು ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ.
ಪುನೀತ್ ಸ್ಮರಣೆ, ಅವರೇ ಪ್ರೇರಣೆ:
ಕಲಾರಾಧನೆ ಸಾಂಸ್ಕೃತಿಕ ವೇದಿಕೆಯನ್ನು ಸ್ಥಾಪನೆ ಮಾಡಲು ಡಾ.ಪುನೀತ್ ರಾಜ್ ಕುಮಾರ್ ಅವರೇ ಪ್ರೇರಣೆಯಾಗಿದ್ದರು. ಅದರಂತೆ ಅವರ ಮೊದಲನೇ ವರ್ಷದ ಪುಣ್ಯಸ್ಮರಣಾ ಕಾರ್ಯಕ್ರಮದಲ್ಲೇ ಸಂಸ್ಥೆಯನ್ನು ಉದ್ಘಾಟನೆ ಮಾಡಲಾಯಿತು. ಆ ಕಾರ್ಯಕ್ರಮದಲ್ಲಿ ಹಲವಾರು ಹಿರಿಯ ಕಲಾವಿದರನ್ನು ಸನ್ಮಾನಿಸಿದ್ದರು. ಪ್ರತಿವರ್ಷವೂ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡು ಹೋಗುತ್ತಿದ್ದಾರೆ. ಹೊಸ ಪ್ರತಿಭೆಗಳಿಗೆ ಈ ಸಂಸ್ಥೆಯ ಮೂಲಕ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಹಿರಿಯ ಕಲಾವಿದ ಆರ್.ಶಿವಣ್ಣ ಅವರ ಸ್ಮರಣಾರ್ಥ ಕಲಾರಾಧನೆ ಸಾಂಸ್ಕೃತಿಕ ವೇದಿಕೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿದ್ದರು. ಶಿವರಾತ್ರಿ ಉತ್ಸವ ಎಂಬ ಬೃಹತ್ ಜಾನಪದ ಕಾರ್ಯಕ್ರವನ್ನು ಆಯೋಜನೆ ಮಾಡಿದ್ದರು. ಅದಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಸುಗಮ ಸಂಗೀತ ಹಾಗೂ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದರ್ಶ ಕುಮಾರ್ ಮೊ.9916026224 ಅನ್ನು ಸಂಪರ್ಕಿಸಬಹುದಾಗಿದೆ.
ಸಮಾಜಸೇವೆಯಲ್ಲೂ ಮುಂದು:
ವೃತ್ತಿಯಲ್ಲಿ ಪ್ರಯೋಗಶಾಲಾ ತಂತ್ರಜ್ಞನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆದರ್ಶಕುಮಾರ್ ಅವರು ಕಲಾಸೇವೆಯ ಜತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ತಂದೆಯ ಸ್ಮರಣಾರ್ಥ ಬೃಹತ್ ಉಚಿತ ಆರೋಗ್ಯ ಯಪಾಸಣಾ ಶಿಬಿರವನ್ನು ಆಯೋನೆ ಮಾಡಿದ್ದರು. ಈ ಶಿಬಿರದಲ್ಲಿ ಯರಗಂಬಳ್ಳಿ ಅಲ್ಲದೇ ಸಮೀಪದ ಗ್ರಾಮಗಳಿಂದಲೂ ನೂರಾರು ಜನರು ಭೇಟಿ ನೀಡಿ ತಪಾಸಣೆಗೆ ಒಳಪಟ್ಟಿದ್ದರು. ಅದಲ್ಲದೇ ಸುಮಾರು 120 ಜನರಿಗೆ ಸಂಸ್ಥೆಯ ವತಿಯಿಂದ ಕಣ್ಣಿನ ಶಸಚಿಕಿತ್ಸೆಯನ್ನು ಉಚಿತವಾಗಿ ಮಾಡಿಸಿದ್ದಾರೆ. ಪ್ರತಿವರ್ಷ ಪುನೀತ್ ರಾಜ್‌ಕುಮಾರ್ ಸ್ಮರಣಾ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ. ಯಳಂದೂರು ಗ್ರಾಮೀಣ ಭಾಗದಲ್ಲಿ ಇರುವ ಜಾನಪದ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಸಾಶನ ಮಾಡಿಸಿಕೊಟ್ಟಿದ್ದಾರೆ. ಕೆಲವು ಕಲಾವಿದರನ್ನು ಗುರುತಿಸಿ ಅವರಿಗೆ ಕಲಾರಾಧನೆ ಸಂಸ್ಥೆಯ ಮೂಲಕ ವೇದಿಕೆಯನ್ನು ಕಲ್ಪಿಸುತ್ತಿದ್ದಾರೆ.
ಇದು ನನ್ನ ತಂದೆ ಆರ್.ಶಿವಣ್ಣ ಅವರ ಪ್ರೇರಣೆಯಿಂದ ಮೊಳಕೆಯೊಡೆದು ಕಲಾರಾಧನೆ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ವೇದಿಕೆ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತೇವೆ. ಡಾ.ಪುನೀತ್‌ರಾಜ್ ಕುಮಾರ್ ಸ್ಮರಣಾರ್ಥ ರಾಜ್ಯಮಟ್ಟದ ಕಾರ್ಯಕ್ರವನ್ನು ಆಯೋಜಿಸುವ ಯೋಜನೆ ಹಾಕಿಕೊಂಡಿದ್ದೇವೆ.-ಆದರ್ಶಕುಮಾರ್, ಕಲಾವಿದ, ಯಳಂದೂರು