

ಚಾಮರಾಜನಗರ: ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದ ಅರಿಶಿಣ ಬೆಳೆಗಾರರಿಗಾಗಿ ತೆರೆದ ಖರೀದಿ ಕೇಂದ್ರಗಳು ಬೆಳೆ ಖರೀದಿ ಮಾಡಿವೆ. ಆದರೆ ರೈತರಿಗೆ ಹಣವನ್ನು ಪಾವತಿ ಮಾಡಿಲ್ಲ.
ಜಿಲ್ಲೆಯಲ್ಲಿ ಅರಿಶಿಣ ಖರೀದಿ ಕೇಂದ್ರ ತೆರೆಸುವುದಕ್ಕಾಗಿ ಕೇಂದ್ರ ಸರ್ಕಾರದ ಹಂತಕ್ಕೂ ಹೋಗಿ ಹೋರಾಟ ನಡೆಸಿರುವ ರೈತರು ಈಗ ಖರೀದಿ ಹಣಕ್ಕಾಗಿ ಪ್ರತಿಭಟನೆಗಿಳಿಯಬೇಕಾಗಿದೆ.ಜೂ.19 ರಿಂದ ಖರೀದಿ ಕೇಂದ್ರದ ಮೂಲಕ ಸುಮಾರು 58 ರೈತರಿಂದ 1400 ಟನ್ ಅರಿಶಿಣವನ್ನು 6694 ರೂ. ಬೆಂಬಲ ಬೆಲೆ ನೀಡಿ ತೋಟಗಾರಿಕೆ ಇಲಾಖೆ ಖರೀದಿ ಮಾಡಿದೆ. ಅರಿಶಿಣ ಖರೀದಿ ಮಾಡಿ ಸುಮಾರು ಒಂದು ತಿಂಗಳು ಕಳೆದರೂ ಖರೀದಿಯ ಹಣವನ್ನು ರೈತರಿಗೆ ನೀಡಿಲ್ಲ.
ಪೂರ್ವ ಮುಂಗಾರು ಹಂಗಾಮಿನಲ್ಲಿ ಅರಿಶಿಣ ಬೆಲೆ 4000-5500 ರೂ. ಗೆ ಕುಸಿತ ಕಂಡಿತ್ತು, ಖರೀದಿ ನೀತಿ, ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (ಎಂಐಎಸ್) ಅಡಿಯಲ್ಲಿ ಸರ್ಕಾರವು ಕ್ವಿಂಟಾಲ್‌ಗೆ 6694 ರೂ. ಬೆಂಬಲ ಬೆಲೆ ನೀಡಿ ಖರೀದಿಸಿತ್ತು. ಆದರೆ ಈಗ ಮಾರುಕಟ್ಟೆಯಲ್ಲಿ ಅರಿಶಿಣದ ಬೆಲೆ 8300 ರೂ.ಗೆ ಬಂದಿದೆ. ಇದರಿಂದ ಬೆಳೆಗಾರರು ಇಕ್ಕಟ್ಟಿಗೆ ಸಿಲುಕಿದ್ದು, ಇತ್ತ ಮಾರಾಟ ಮಾಡಿದ ಅರಿಶಿಣದ ಹಣವೂ ಸಿಕ್ಕಿಲ್ಲ. ಈ ಸಮಸ್ಯೆ ಕುರಿತು ‘ಲೌಡ್ ಸ್ಪೀಕರ್’ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.
ವಿಳಂಬ ಧೋರಣೆ ಸರಿಯಲ್ಲ
ಮಾರುಕಟ್ಟೆಯಲ್ಲಿ ಆಗುವ ಬದಲಾವಣೆಗಳಿಗೆ ರೈತರು ಯಾರನ್ನು ಹೊಣೆ ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಸರ್ಕಾರವೇ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸೂಕ್ತ ಬೆಲೆ ನಿಗದಿ ಮಾಡಿದರೆ ಪ್ರತಿಯೊಬ್ಬ ರೈತನಿಗೂ ಅನುಕೂಲವಾಗುತ್ತದೆ. ಬೇರೆ ಬೆಳೆಗಿಂತಲೂ ಅರಿಶಿಣ ಬೆಳೆಯುವಲ್ಲಿ ರೈತ ತುಂಬಾ ಶ್ರಮವಹಿಸಬೇಕಾಗುತ್ತದೆ. 1 ಎಕರೆ ಅರಿಶಿಣ ಬೆಳೆಯುವಲ್ಲಿ ಸಾಕಾಗಿ ಹೋಗುತ್ತದೆ. ಸಾಲ ಮಾಡಿ ಅರಿಶಿಣ ಬೆಳೆದ ರೈತರ ಹಣವನ್ನು ಬಿಡುಗಡೆ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ.
-ಪಿ.ಸುದೀಪ್, ಯುವರೈತ, ಆಲೂರು, ಚಾಮರಾಜನಗರ.
ಬೀಗ ಒಡೆಯುವ ಚಳವಳಿ ಮಾಡಬೇಕಾಗುತ್ತದೆ
ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು, ರೈತರಿಂದ ಅರಿಶಿಣ ಖರೀದಿ ಮಾಡಿರುವ ಹಣವನ್ನು ಜಮಾ ಮಾಡಲು 1 ವಾರ ಕಾಲಾವಕಾಶ ಕೋರಿದ್ದಾರೆ. ಹಣ ಕೊಡದಿದ್ದರೆ ನಮ್ಮ ಅರಿಶಿಣವನ್ನು ನಮಗೆ ಕೊಡಿ ಎಂದು ಕೇಳಿದ್ದೇವೆ. ಇಲ್ಲದಿದ್ದರೆ ಎಲ್ಲ ಅರಿಶಿಣ ಬೆಳೆಗಾರರು ಸೇರಿ ಮಾರುಕಟ್ಟೆಯ ಬೀಗ ಒಡೆದು ನಮ್ಮ ಅರಿಶಿಣ ಪಡೆದುಕೊಳ್ಳಬೇಕಾಗುತ್ತದೆ. ಬೀಗ ಒಡೆಯುವ ಚಳವಳಿಗೆ ಅವಕಾಶ ಮಾಡಿಕೊಡದೆ ರೈತರಿಂದ ಅರಿಶಿಣ ಖರೀದಿ ಮಾಡಿರುವ ಹಣವನ್ನು ಆದಷ್ಟು ಬೇಗ ಸಂದಾಯ ಮಾಡಬೇಕು.
-ಹೊನ್ನೂರು ಪ್ರಕಾಶ್, ಜಿಲ್ಲಾಧ್ಯಕ್ಷ, ರಾಜ್ಯ ರೈತಸಂಘ, ಚಾಮರಾಜನಗರ
ಒಂದು ತಿಂಗಳಾದರೂ ಹಣ ನೀಡಿಲ್ಲ
ರೈತರಿಗೆ ಅನುಕೂಲ ಮಾಡಲು ಎಂಐಎಸ್ ಯೋಜನೆಯಡಿ ಅರಿಶಿಣ ಖರೀದಿ ಮಾಡಿ ಒಂದು ತಿಂಗಳಾಗುತ್ತಿದೆ. ಆದರೂ ಹಣ ಪಾವತಿ ಮಾಡದೇ ಇರುವುದರಿಂದ ರೈತರಿಗೆ ಪ್ರಸ್ತುತ ಮಾರುಕಟ್ಟೆ ದರದಲ್ಲಿ ಹಣ ಸಂದಾಯ ಮಾಡಿದರೆ, ಬೆಲೆ ಕುಸಿತದಿಂದ ಕಂಗಾಲಾದ ರೈತರಿಗೆ ಸ್ವಲ್ಪ ಮಟ್ಟಿನ ಆರ್ಥಿಕ ಪ್ರಯೋಜನವಾಗುತ್ತದೆ ಅಥವಾ ಮೂಲ ಹಣಕ್ಕೆ ಬಡ್ಡಿ ಸೇರಿಸಿ ರೈತರಿಗೆ ಆಗಿರುವ ನಷ್ಟವನ್ನು ಭರಿಸಬೇಕು. ಇಲಾಖೆಯ ಅಧಿಕಾರಿಗಳು ಒಂದು ವಾರದಲ್ಲಿ ಹಣ ಸಂದಾಯವಾಗುತ್ತದೆ ಎನ್ನುತ್ತಾರೆ. ಒಂದು ತಿಂಗಳಾದರೂ ಹಣ ನೀಡಿಲ್ಲ.
-ನಾಗಾರ್ಜುನ್ ಕುಮಾರ್, ಅರಿಶಿಣ ಬೆಳೆಗಾರರ ಪ್ರತಿನಿಧಿ, ಚಾಮರಾಜನಗರ
ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ
ಅರಿಶಿಣ ಬೆಳೆಗಾರರಿಗೆ ಹಣ ಬಿಡುಗಡೆ ಮಾಡುವಂತೆ ಅಧಿಕಾರಿಗಳು ಕಾಲಾವಕಾಶ ಕೇಳಿದ್ದಾರೆ. ಅರಿಶಿಣದ ಹಣ ಬರಲು ವಿಳಂಬವಾಗಿರುವುದರಿಂದ ಮುಂದಿನ ಬಿತ್ತನೆ ಕಾರ್ಯ ಕೈಗೊಳ್ಳಲು ರೈತರಿಗೆ ಸಂಕಷ್ಟ ಎದುರಾಗಿದೆ. ಸಾಲ ಮಾಡಿ ಅರಿಶಿಣ ಬೆಳೆದವರ ಗತಿ ಅಧೋಗತಿಯಾಗಿದೆ. ಆದಷ್ಟು ಬೇಗ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರೈತರಿಂದ ಖರೀದಿ ಮಾಡಿರುವ ಅರಿಶಿಣದ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ.
-ಹೊನ್ನೂರು ಬಸವಣ್ಣ, ರೈತ ಮುಖಂಡ, ಸಂತೇಮರಹಳ್ಳಿ.
ಮುಂದಿನ ವ್ಯವಸಾಯಕ್ಕೆ ಸಮಸ್ಯೆ
ಅರಿಶಿಣ ಖರೀದಿಸಿರುವ ಹಣ ಕೊಡದೆ ಮುಂದಿನ ವ್ಯವಸಾಯ ಮಾಡಲು ತುಂಬಾ ಸಮಸ್ಯೆಯಾಗಿದೆ. ಒಂದು ವಾರದ ಒಳಗಾಗಿ ರೈತರು ಖಾತೆಗೆ ಹಣ ಸಂದಾಯ ಮಾಡದಿದ್ದರೆ, ದನ, ಕರು, ಮಹಿಳೆ, ಮಕ್ಕಳ ಸಹಿತವಾಗಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ. ಮಳೆಯ ಕೊರತೆಯಿಂದ ದನಗಳಿಗೆ ಮೇವು ಇಲ್ಲದಂತಾಗಿದೆ. ಇದರ ನಡುವೆ ಅರಿಶಿಣದ ಹಣವನ್ನು ಕೊಡದಿದ್ದರೆ ಹೇಗೆ? ಸರ್ಕಾರದ ಆದೇಶವನ್ನು ಪಾಲಿಸದ ಅಧಿಕಾರಿಗಳ ಕಚೇರಿ ಮುಂಭಾಗ ಕುಟುಂಬ ಸಮೇತ ಬಂದು ಕೂರುತ್ತೇವೆ.
-ವಿಜಯಕುಮಾರ್, ರೈತ ಮುಖಂಡ, ಹೆಗ್ಗೋಠಾರ, ಚಾಮರಾಜನಗರ
ನಮ್ಮ ಅರಿಶಿಣ ನಮಗೆ ಕೊಡಿ
ಅರಿಶಿಣ ಖರೀದಿ ಹಣ ಕೊಡಲು 1 ವಾರದ ಗಡುವು ಪಡೆದುಕೊಂಡಿದ್ದಾರೆ. ಕೊಡದಿದ್ದರೆ ನಮ್ಮ ಅರಿಶಿಣ ನಮಗೆ ಕೊಡಲಿ, ನಾವೇ ಹೆಚ್ಚುವರಿಯಾಗಿ 500 ರೂ. ಕಟ್ಟಿಕೊಡುತ್ತೇವೆ. ಈಗಲೂ ಅಧಿಕಾರಿಗಳಿಗೆ ವಾರದ ಅವಕಾಶ ಕೊಡುತ್ತೇವೆ. ಅಷ್ಟರಲ್ಲಿ ಹಣ ಕೊಡದಿದ್ದರೆ ಅರಿಶಿಣ ಬೆಳೆಗಾರರು ಒಟ್ಟಾಗಿ ಗೋದಾಮು ಬೀಗ ಒಡೆಯುವ ಚಳವಳಿ ಮಾಡುತ್ತೇವೆ. ಅರಿಶಿಣ ಬೆಲೆ ಹೆಚ್ಚಾಗಿದ್ದರೂ ಹಣ ಕೊಡಲು ಅಧಿಕಾರಿಗೆ ಏನು ತೊಂದರೆಯಾಗಿದೆ.
-ಮಹೇಶ್, ಅರಿಶಿಣ ಬೆಳೆಗಾರ, ದಡದಹಳ್ಳಿ, ಚಾಮರಾಜನಗರ
ಹಣ ನೀಡಲು ಅಧಿಕಾರಿಗಳಿಗೆ ಸಮಸ್ಯೆ ಏನು?
ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು ವಾರದಲ್ಲಿ ಹಣ ಸಂದಾಯ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಹಣ ಕೊಡದಿದ್ದರೆ ಖರೀದಿ ಕೇಂದ್ರದ ಗೋದಾಮಿನ ಬೀಗ ಒಡೆದು ನಮ್ಮ ಅರಿಶಿಣವನ್ನು ಪಡೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದೇವೆ. ನಮ್ಮ ಅರಿಶಿಣವನ್ನು ನಮಗೆ ಕೊಟ್ಟರೆ ಅಧಿಕಾರಿಗಳಿಗೆ ಹೆಚ್ಚುವರಿ ಹಣವನ್ನು ನೀಡುತ್ತೇವೆ. ಬೆಲೆ ಹೆಚ್ಚಾಗಿದ್ದರೂ ಅರಿಶಿಣ ಖರೀದಿ ಮಾಡಿರುವ ಹಣ ನೀಡಲು ಅಧಿಕಾರಿಗಳಿಗೆ ಏನು ಸಮಸ್ಯೆಯಾಗಿದೆ.
-ಸಂಪತ್ತು, ರೈತ ಮುಖಂಡ, ಕುಂದಕೆರೆ, ಗುಂಡ್ಲುಪೇಟೆ
ಅತ್ಯಂತ ಖಂಡನೀಯ
ಅರಿಶಿಣ ಮಾರುಕಟ್ಟೆ ಧಾರಣೆ ಹೆಚ್ಚಾಗಿದ್ದು, ಕ್ವಿಂಟಾಲ್‌ಗೆ 10,000 ರೂ. ಆಗಿದೆ. ಇನ್ನೂ ಹೆಚ್ಚಾದರೂ ಆಶ್ಚರ್ಯಪಡಬೇಕಿಲ್ಲ. ಪ್ರಸ್ತುತ ಮಾರುಕಟ್ಟೆ ಧಾರಣೆಯಲ್ಲೇ ರೈತರಿಗೆ ಹಣ ನೀಡಬೇಕು. ಮಾರುಕಟ್ಟೆಯಲ್ಲಿ ಮಾರಾಟ ಮಾಡಿಯೇ ರೈತರಿಗೆ ಹಣ ನೀಡಬಹುದು. ಆದರೂ ಸರ್ಕಾರ ಯಾಕೆ ಹಣ ನೀಡುತ್ತಿಲ್ಲ ಎಂಬುದೇ ಪ್ರಶ್ನೆಯಾಗಿದೆ. ಇದು ಅತ್ಯಂತ ಖಂಡನೀಯವಾಗಿದೆ. ಆದಷ್ಟು ಬೇಗ ರೈತರಿಂದ ಖರೀದಿ ಮಾಡಿರುವ ಹಣವನ್ನು ನೀಡಬೇಕು.
-ಚಿದಾನಂದ, ವೀರನಪುರ, ಗುಂಡ್ಲುಪೇಟೆ
ರೈತರ ಅಸಹಾಯಕತೆ ದುರುಪಯೋಗ
ರೈತರಿಗೆ ಆಗಿರುವ ಬೆಳೆ ನಷ್ಟ, ಹೋರಾಟದ ನಡುವೆ ಅರಿಶಿಣ ಬೆಳೆಗಾರರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಸರ್ಕಾರಕ್ಕೆ ಅರಿಶಿಣ ಮಾರಾಟ ಮಾಡಿ ರೈತರು ಕೈ ಸುಟ್ಟುಕೊಂಡಂತಾಗಿದೆ. ಹೋರಾಟ ಮಾಡಿದ ಸಮಯದಲ್ಲಿ ಕೊಟ್ಟಿದ್ದರೆ ಅನುಕೂಲವಾಗುತ್ತಿತ್ತು, ಆದರೆ ಈಗ ಬೆಲೆಯೂ ದುಪ್ಪಟ್ಟಾಗಿದೆ. ಇದರಿಂದ ಸರ್ಕಾರ ರೈತರ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಗೊತ್ತಾಗುತ್ತಿದೆ. ಈಗಲಾದರೂ ಎಚ್ಚೆತ್ತುಕೊಂಡು ಅಧಿಕಾರಿಗಳು ಅರಿಶಿಣ ಬೆಳೆಗಾರರಿಗೆ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ.
-ಶಶಿಕುಮಾರ್, ದೊಡ್ಡತುಪ್ಪೂರು, ಗುಂಡ್ಲುಪೇಟೆ
ಅನುದಾನ ಬಂದ ತಕ್ಷಣ ಪಾವತಿ
ಈಗಾಗಲೇ ಅರಿಶಿಣ ಖರೀದಿ ಮಾಡಿರುವ ಹಣ ಬಿಡುಗಡೆ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ತಕ್ಷಣ ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತದೆ. ಒಂದು ವಾರದಲ್ಲಿ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ. ಎಂಐಎಸ್ ಯೋಜನೆಯಡಿ ಅರಿಶಿಣ ಖರೀದಿ ಮಾಡಿದ ನಂತರ ಯಾವುದೇ ಕಾರಣಕ್ಕೂ ಅರಿಶಿಣ ವಾಪಸ್ ಕೊಡಲು ಸಾಧ್ಯವಿಲ್ಲ.
-ರವೀಂದ್ರ, ಜಿಲ್ಲಾ ವ್ಯವಸ್ಥಾಪಕ, ಎಪಿಎಂಸಿ, ಚಾಮರಾಜನಗರ