ಮಧ್ಯವರ್ತಿಗಳ ಹಾವಳಿ ಖಂಡಿಸಿ ಪ್ರತಿಭಟನೆ

20rajesh5
Published on

ಚಾಮರಾಜನಗರ: ಚಾ.ನಗರ ನಗರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಪಿಸಿ ಸುವರ್ಣ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ನಗರಸಭೆ ಮುಂಭಾಗಕ್ಕೆ ಸಾಗಿ, ಕೆಲಕಾಲ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಟಿ.ವಿ.ಸಿದ್ದರಾಜು ಮಾತನಾಡಿ, ನಗರಸಭೆಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಸಾರ್ವಜನಿಕರು ಈ-ಸ್ವತ್ತು ಮಾಡಿಸಲು ಅಧಿಕಾರಿಗಳು ಕೇಳಿದ ದಾಖಲೆಗಳನ್ನು ಒದಗಿಸಿದರೂ ಕೂಡ, ಯಾವುದೇ ಕೆಲಸ ಆಗುತ್ತಿಲ್ಲ. ನಿಯಮದ ಪ್ರಕಾರ ನಾವು ದಾಖಲಾತಿಗಳನ್ನು ಕೊಟ್ಟ 45 ದಿನಗಳಲ್ಲಿ ಇ-ಸ್ವತ್ತು ಮಾಡಿಕೊಡಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೂ ಕೂಡ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆಯಲ್ಲಿ ಸಾರ್ವಜನಿಕರ ಬದಲು ಬರೀ ದಲ್ಲಾಳಿಗಳೆ ಅಡ್ಡಾಡುತ್ತಿದ್ದಾರೆ. ಈ ಸ್ವತ್ತು ಮಾಡಿಕೊಡಲು ಸಾರ್ವಜನಿಕರಿಂದ 20-25 ಸಾವಿರ ರೂ. ಗಳನ್ನು ವಸೂಲಿ ಮಾಡುತ್ತಿದ್ದಾರೆ. ದಲ್ಲಾಳಿಗಳಿಗೆ ಹಣ ಕೊಟ್ಟರೆ, ಇ-ಸ್ವತ್ತು ಒಂದು ತಿಂಗಳಲ್ಲೇ ಆಗುತ್ತದೆ. ಆದರೆ
ಸಾರ್ವಜನಿಕರು ಕೊಟ್ಟಿರುವ ಇ-ಸ್ವತ್ತಿನ ಅರ್ಜಿಗಳೇ ಕಣ್ಮರೆ ಆಗುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನಾರಾಯಣ್, ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಮಸಣಶೆಟ್ಟಿ, ಉಪಾಧ್ಯಕ್ಷ ಕೆ.ಟಿ.ಆನಂದ್, ಟೌನ್ ಉಪಾಧ್ಯಕ್ಷ ಯೋಗೇಶ್, ತಾಲೂಕು ಅಧ್ಯಕ್ಷ ಶಿವಣ್ಣ, ಆಟೋ ಸಂಘದ ಉಪಾಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಗೋವಿಂದ ನಾಯಕ, ಮಂಜು, ರಾಜೇಂದ್ರ, ಚೆನ್ನುಗಶೆಟ್ಟಿ, ಅನಿಲ್ ನಾಯಕ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net