ಸಮಾಜದ ಸಮಸ್ಯೆಗಳಿಗೆ ವಚನಗಳು ದಾರಿದೀಪ

20rajesh4
Published on

ಚಾಮರಾಜನಗರ: ಶರಣರ ಚಿಂತನೆ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೇ, ಸಮಾಜದ ಜಲವು ಸಮಸ್ಯೆಗಳಿಗೆ ಅದು ಮದ್ದಾಗಬಲ್ಲದು ಎಂದು ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಎನ್‌ರಿಚ್ ಮಹಾದೇವಸ್ವಾಮಿ ಅಭಿಪ್ರಾಯಪಟ್ಟರು.

ತಾಲೂಕಿನ ವೆಂಕಟಯ್ಯನಛತ್ರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಶರಣರ ಜೀವನ ಚರಿತ್ರೆ, ಅವರು ನಡೆದು ಬಂದ ದಾರಿ ಮತ್ತು ವಚನ ಸಾಹಿತ್ಯ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹನ್ನೆರಡನೇಯ ಶತಮಾನದಲ್ಲಿ ನಡೆದ ಸಮಾಜೋ-ಧಾರ್ಮಿಕ ಚಳವಳಿಯ ನೇತೃತ್ವ ವಹಿಸಿದ್ದ ಬಸವಣ್ಣ, ಅಲ್ಲಮ ಪ್ರಭು, ಚನ್ನಬಸವಣ್ಣ ಮತ್ತು ಅಕ್ಕಮಹಾದೇವಿ ಜಗತ್ತಿನ ಆರಂಭಿಕ ಪ್ರಜಾಪ್ರಭುತ್ವವಾದಿಗಳಾಗಿದ್ದಾರೆ. ಜಾತಿ, ಧರ್ಮ, ಲಿಂಗ ಭೇದರಹಿತ ಸಮಸಮಾಜ ನಿರ್ಮಾಣಕ್ಕಾಗಿ ಅವರು ಶ್ರಮಿಸಿದರು. ಅವರ ಜೀವನವೇ ಅತ್ಯುತ್ತಮ ಮಾದರಿಯಾಗಿತ್ತು. ಅವರು ನುಡಿದಂತೆ ನಡೆದರು. ಆದರೆ ಪ್ರಸ್ತುತ ಸಮಾಜದಲ್ಲಿ ನಡೆ-ನುಡಿ ಒಂದಾಗಿರುವ ವ್ಯಕ್ತಿಗಳು ಸಿಗುವುದು ಅತ್ಯಂತ ಕಡಿಮೆಯಾಗಿದೆ ಎಂದು ಹೇಳಿದರು.

ಶರಣರು ತಮ್ಮ ವಚನಗಳಲ್ಲಿ ತಿಳಿಸಿರುವ ವಿಚಾರಗಳನ್ನು ಮತ್ತು ತತ್ವಗಳನ್ನು ಅಳವಡಿಸಿಕೊಂಡಿದ್ದೆ ಆದಲ್ಲಿ ನಮ್ಮ ಸಮಾಜ ಪ್ರಸ್ತುತ ಎದುರಿಸುತ್ತಿರುವ ಹಲವಾರು ಸಮಸ್ಯೆಗಳು ಪರಿಹಾರವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಂತರಾತ್ಮಕ್ಕೆ ನಿಷ್ಠನಾಗಿ ನಡೆದುಕೊಂಡರೆ ಅದೇ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಎಂದರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮಲ್ಲೇಶ್ ಮಾತನಾಡಿ, ವಿದ್ಯಾರ್ಥಿಗಳು ಶರಣರ ವಿಚಾರಗಳನ್ನು ಮೈಗೂಡಿಸಿಕೊಂಡು ಸಾಗಬೇಕು. ಋಣಾತ್ಮಕ ಚಿಂತನೆಗಳನ್ನು ತ್ಯಜಿಸಿ, ಧನಾತ್ಮಕ ಚಿಂತನೆಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಸ್.ಪ್ರಶಾಂತ್,ಆರ್.ಮಹೇಶ್, ಪೂರ್ಣಿಮಾ, ಜೆ.ಅನಿತಾ, ಎಸ್.ಲೀಲಾವತಿ, ಬಸವಣ್ಣ, ಮಹಾಂತೇಶ್, ಅತಿಥಿ ಉಪನ್ಯಾಸಕಿ ದೊಡ್ಡಮ್ಮ, ಶೃತಿ, ರಾಜು ಹೊಸೂರು ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net