

ಚಾಮರಾಜನಗರ: ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಹೆಚ್ಚಿನ ಓದಿಗೆ ಪೂರಕವಾಗಿದ್ದು, ಹೊಸ ವಿದ್ಯಾರ್ಥಿಗಳ ಸಾಧನೆಗೂ ಉತ್ತೇಜನವಾಗಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಮಂಜುನಾಥಪ್ರಸನ್ನ ಹೇಳಿದರು.
ನಗರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಭೌತಶಾಸ್ತ್ರ ಉಪನ್ಯಾಸಕರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
2023-24ನೇ ಸಾಲಿನ ಭೌತಶಾಸ್ತ್ರ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ನೂರರಷ್ಟು ಫಲಿತಾಂಶ ಬರಲು ಕಾರಣಕರ್ತರಾದ ಉಪನ್ಯಾಸಕರಿಗೆ ಸನ್ಮಾನಿಸುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ. ವಿಷಯವಾರು ಕಾರ್ಯಾಗಾರಗಳ ಅಯೋಜನೆಯ ಫಲಶೃತಿಯಾಗಿ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ವಿಷಯಗಳಲ್ಲೂ ಕೂಡ ಕಾರ್ಯಾಗಾರ ನಡೆಸಲು ಇಲಾಖೆ ವತಿಯಿಂದ ಕ್ರಮಕೈಗೊಳ್ಳಲಾಗುವುದು ಎಂದರು.
ವಿಶೇಷವಾಗಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ನಿಗಾವಹಿಸಬೇಕು. ಗುಣಮಟ್ಟಮಟ್ಟದ ಫಲಿತಾಂಶ ತರಲು ಸಹಕರಿಸುವಂತೆ ಎಲ್ಲಾ ಕಾಲೇಜುಗಳಿಗೆ ಭೇಟಿ ನೀಡಿ ಪ್ರಾಂಶುಪಾಲರು, ಉಪನ್ಯಾಸಕರುಗಳಿಗೆ ಸೂಚಿಸಲಾಗುವುದು ಎಂದರು. ಈ ವೇಳೆ ಪಿಯುಸಿ ಪರೀಕ್ಷೆಯಲ್ಲಿ ಭೌತಶಾಸ್ತ್ರದಲ್ಲಿ ಹೆಚ್ಚು ಅಂಕಪಡೆದ 25 ವಿದ್ಯಾರ್ಥಿಗಳಿಗೆ ಹಾಗೂ 8 ಮಂದಿ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಮಾನಸ ಗಂಗೋತಿಯ ಭೌತಶಾಸ್ತ್ರ ವಿಭಾಗದ ನಿವೃತ ಪ್ರಾಧ್ಯಾಪಕ ಡಾ. ಕೆ.ಎಸ್.ಮಲ್ಲೇಶ್, ತಾಂಡವಪುರ ಎಂಐಟಿ ಇಂಜಿನಿಯರಿಂಗ್ ಕಾಲೇಜಿನ ಸಂಸ್ಥಾಪಕ, ಪ್ರಾಂಶುಪಾಲ ಡಾ.ವೈ.ಪಿ.ಕೃಷ್ಣಗೌಡ, ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಸೋಮಣ್ಣ, ಸಂಘದ ಅಧ್ಯಕ್ಷ ಟಿ. ಮಧು, ಕಾರ್ಯದರ್ಶಿ ಷಡಕ್ಷರಿಸ್ವಾಮಿ, ಗೋವಿಂದ, ಜಯಶ್ರೀ, ರೇಖಾ, ಸವಿತಾ ಹಾಜರಿದ್ದರು.