ವೈದ್ಯಕೀಯ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಪ್ರತಿಭಟನೆ

19rajesh4
Published on

ಚಾಮರಾಜನಗರ: ಕೊಲ್ಕತ್ತಾದ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದಿರುವ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಮುಖ್ಯದ್ವಾರದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆಯಲ್ಲಿ ಜಿಲ್ಲಾಡಳಿತ ಭವನದ ಮುಂಭಾಗಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ವಿವಿಧ ೋಷಣೆಗಳನ್ನು ಆಕ್ರೋಶ ಹೊರಹಾಕಿದರು.

ಹಲವು ತಿಂಗಳಿಂದಲೂ ಪಶ್ಚಿಮ ಬಂಗಾಳದಲ್ಲಿ ನಿರಂತರವಾಗಿ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದೆ. ಅದರಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದ್ದು, ರಕ್ಷಣೆ ಇಲ್ಲದಂತಾಗಿದೆ. ಆದರೆ, ಈ ಸಂಬಂಧ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಡಳಿತ ಸರಕಾರ ಯಾವುದೇ ಕ್ರಮ ವಹಿಸದೇ ನಿರ್ಲಕ್ಷ್ಯ ಮಾಡಿದೆ ಎಂದು ದೂರಿದರು.

ಪಶ್ಚಿಮ ಬಂಗಾಳದ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದಿರುವ ಕೃತ್ಯ ಅತ್ಯಂತ ನೋವಿನ ಸಂಗತಿಯಾಗಿದೆ. ವೈದ್ಯರ ಮೇಲೆ ದೌರ್ಜನ್ಯವಾಗುತ್ತಿರುವುದು ನಾಚಿಕೆಗೇಡಿನ ಕೃತ್ಯವಾಗಿದ್ದು, ನಾವೆಲ್ಲರೂ ತಲೆತಗ್ಗಿಸಬೇಕಿದೆ. ಆದ್ದರಿಂದ ಕೂಡಲೇ ಪಶ್ಚಿಮ ಬಂಗಾಳ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ಸಂಚಾಲಕ ಎಂ.ಎನ್.ವಿಶ್ವಾಸ್‌ಗೌಡ, ನಗರ ಕಾರ್ಯದರ್ಶಿ ರಂಜಿತಾ, ಸಿ.ಪಿ. ಗಗನ್, ಅಂಕಿತ್, ಚಂದನ್, ಪುನೀತ್, ಬಸವರಾಜೇಂದ್ರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net