ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ

19rajesh3
Published on

ಚಾಮರಾಜನಗರ: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಶ್ರೀಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ಸಾಗಿ ಪ್ರತಿಭಟನೆ ನಡೆಸಿದರು. ರಾಜ್ಯಪಾಲರು ಹಾಗೂ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಶುಸಂಗೋಪನೆ, ರೇಷ್ಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಕರ್ನಾಟಕದ ರಾಜ್ಯಪಾಲರು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಭಾರತದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ಆಜ್ಞೆಯಂತೆ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಬೇಕು ಎಂಬ ಷಡ್ಯಂತ್ರವನ್ನು ಬಿಜೆಪಿ, ಜೆಡಿಎಸ್ ಮಾಡುತ್ತಿದೆ. ಹಿಂದುಳಿದ ಸಮುದಾಯದ ನಾಯಕರೊಬ್ಬರು ಎರಡನೇ ಅವಧಿಗೆ ಸಿಎಂ ಆಗಿರುವುದನ್ನು ಸಹಿಸದ ವಿರೋಧ ಪಕ್ಷಗಳು ಈ ಪ್ರಕರಣವನ್ನು ಮುನ್ನೆಲೆಗೆ ತಂದಿದೆ ಎಂದು ಆರೋಪಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಪಡೆದುಕೊಂಡಿತ್ತು. ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಕಳಂಕವನ್ನು ಮಾಡದೇ ಜನಸೇವೆ ಮಾಡುತ್ತಿರುವ ಮುಖಮಂತ್ರಿಗಳಿಗೆ ಯಾವುದೇ ತನಿಖೆಯಾಗದೇ ನೋಟಿಸ್ ನೀಡಿರುವುದು ಖಂಡನೀಯ. ಸುಪ್ರೀಂ ಕೋರ್ಟ್ ಛೀಮಾರಿಯಾಕಿರುವ ವ್ಯಕ್ತಿಯ ದೂರನ್ನು ಪರಿಗಣಿಸಿರುವುದು ರಾಜಕೀಯ ಪ್ರೇರಿತವಾಗಿದೆ ಎಂದರು.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಕೇಳಿದ್ದಾರೆ. ಆದರೆ, ಇಲ್ಲಿಯ ತನಕ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿಲ್ಲ. ಆದರೆ ರಾಜ್ಯಪಾಲರು ಈ ಪ್ರಕರಣದಲ್ಲಿ ಅರ್ಜಿ ಸ್ವೀಕರಿಸಿದ 24 ಗಂಟೆಯೊಳಗೆ ತರಾತುರಿಯಲ್ಲಿ ಸಿಎಂಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪಿತೂರಿ ನಡೆಸುತ್ತಿರುವ ಕೇಂದ್ರ ಸರ್ಕಾರ ಮತ್ತು ಬಿಜೆಪಿ-ಜೆಡಿಎಸ್ ವಿರುದ್ಧ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ. ಆಗಾಗಿ ರಾಜ್ಯಪಾಲರು ಸಿಎಂ ವಿರುದ್ಧದ ತನಿಖಾ ಅನುಮತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಎಂಎಸ್‌ಐಎಲ್ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ರಾಜ್ಯಪಾಲರು ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಖಂಡನೀಯ. ಕೂಡಲೇ ರಾಜ್ಯಪಾಲರು ರಾಜ್ಯದಿಂದ ತೊಲಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ನಾವೆಲ್ಲರೂ ಇದ್ದೇವೆ. ಇದೊಂದು ಬಿಜೆಪಿ, ಜೆಡಿಎಸ್ ಷಡ್ಯಂತ್ರವಾಗಿದೆ. ಇದಕ್ಕೆ ಯಾರು ಹೆದರುವ ಅಗತ್ಯವಿಲ್ಲ ಎಂದು ಹೇಳಿದರು.

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಯಾವುದೇ ದೂರು ಸಂಬಂಧ ಮೊದಲು ತನಿಖೆ ಮಾಡಿ, ಆ ನಂತರ ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಬೇಕು. ಆದರೆ, ಈ ಪ್ರಕರಣದಲ್ಲಿ ಯಾವುದೇ ತನಿಖೆಗೆ ಒಳಪಡಿಸದೇ ಏಕಾಏಕಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಕಾನೂನುಬಾಹಿರವಾಗಿದೆ. ಪ್ರಾಸಿಕ್ಯೂಷನ್‌ಗೆ ಒಳಪಡಿಸಿದರೆ ಕಾಂಗ್ರೆಸ್ ಇಬ್ಭಾಗವಾಗುತ್ತದೆ ಎಂಬ ಭಾವನೆ ಸುಳ್ಳು. ನಾವೆಲ್ಲ ಸಿದ್ದರಾಮಯ್ಯ ಪರ ನಿಲ್ಲುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಸಂಸದ ಸುನೀಲ್ ಬೋಸ್, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶಪ್ರಸಾದ್, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಮಾಜಿ ಸಂಸದ ಎಂ.ಶಿವಣ್ಣ, ಮಾಜಿ ಶಾಸಕ ಆರ್. ನರೇಂದ್ರ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಕನಿಷ್ಠ ವೇತನಾ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಎಸ್‌ಪಿಕೆ ಉಮೇಶ್, ಮುಖಂಡರಾದ ಪು.ಶ್ರೀನಿವಾಸ್ ನಾಯಕ, ಬಸವನಪುರ ರಾಜಶೇಖರ್, ಕೆರೆಹಳ್ಳಿ ನವೀನ್, ಮಹದೇವಶೆಟ್ಟಿ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net