

ಚಾಮರಾಜನಗರ: ಹವಮಾನ ವೈರಿತ್ಯದಿಂದ ಕಳೆದ ವಾರದಿಂದ ತಾಲೂಕಿನ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕಟಾವಿಗೆ ಬಂದಿರುವ ಬೆಳೆಗೆ ಹಾನಿ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜಿಲ್ಲೆಯ ಚಾಮರಾಜನಗರ ತಾಲೂಕಿನ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣ ಹಾಗೂ ಆಗಾಗ್ಗೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಭಾನುವಾರವು ಜಿಲ್ಲಾ ಕೇಂದ್ರವನ್ನು ಒಳಗೊಂಡಂತೆ ತಾಲೂಕಿನ ಚಂದಕವಾಡಿ, ಹರದನಹಳ್ಳಿ, ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸುಮಾರು ಅರ್ಧತಾಸಿಗೂ ಹೆಚ್ಚು ಸಮಯ ಭರ್ಜರಿ ಮಳೆಯಾಯಿತು. ಪರಿಣಾಮ ಈ ಭಾಗದಲ್ಲಿ ರೈತರು ಬೆಳೆದಿರುವ ಬೆಳೆಗಳು ಕಟಾವಿಗೆ ಬಂದಿದ್ದು, ಸಾಕಷ್ಟು ಹಾನಿಯಾಗುವ ಸಾಧ್ಯತೆಗಳು ಇದೆ ಎಂದು ಹೇಳಲಾಗುತ್ತಿದೆ.
ಜಿಲ್ಲಾ ಕೇಂದ್ರದಲ್ಲಿ ಬೆಳಿಗ್ಗೆಯಿಂದಲೂ ಮೋಡಕವಿದ ವಾತಾವರಣ ಇತ್ತು. ಮಧ್ಯಾಹ್ನದ ಬಳಿಕ ಸುಮಾರು ಅರ್ಧತಾಸು ಜೋರು ಮಳೆ ಪ್ರಾರಂಭವಾಯಿತು. ಪ್ರಮುಖ ರಸ್ತೆಗಳಾದ ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಗುಂಡ್ಲುಪೇಟೆ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಹಾಗೂ ಇನ್ನಿತರೆ ರಸ್ತೆಗಳಲ್ಲಿ ಚರಂಡಿಗಳು ತುಂಬಿ ಹರಿಯಿತು. ಶ್ರೀಚಾಮರಾಜೇಶ್ವರ ದೇವಸ್ಥಾನದ ಹಿಂಭಾಗದ ಚರಂಡಿ ನೀರು ರಸ್ತೆಗೆ ಹರಿದು ಬೀದಿಬದಿ ವ್ಯಾಪಾರಿಗಳಿಗೆ ತೊಂದರೆ ಉಂಟಾಯಿತು. ಸಂತೇಮರಹಳ್ಳಿ ಸಮೀಪದಲ್ಲಿರುವ ಶ್ರೀಆಂಜನೇಯಸ್ವಾಮಿ ದೇವಸ್ಥಾನದ ಹಿಂಭಾಗದ ರಸ್ತೆ ಹಾಗೂ ಖಾಲಿಜಾಗದಲ್ಲಿ ಮತ್ತು ಶ್ರೀಭ್ರಮರಾಂಭ ಚಿತ್ರಮಂದಿರದ ಮುಂಭಾಗ ಮಳೆನೀರು ನಿಂತು ಕೆರೆಯಂತಾಗಿತ್ತು. ಹಲವು ರಸ್ತೆಗಳಲ್ಲಿ ಮಳೆ ನೀರು ನಿಂತು ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರರು ಪರದಾಡುವಂತಾಯಿತು. ಗ್ರಾಮೀಣ ಪ್ರದೇಶದಲ್ಲೂ ನಿರಂತರವಾಗಿ ಮಳೆಯಾಗಿದ್ದು, ಕೆಲವೆಡೆ ಕೆರೆ-ಕಟ್ಟೆಗಳು ತುಂಬಿ ಹರಿದವು. ಹಲವು ಕಡೆಗಳಲ್ಲಿ ಮಳೆ ನೀರಿನಿಂದ ಜಮೀನುಗಳು ಜಲಾವೃತವಾಗಿದ್ದವು.
ಜಿಟಿಜಿಟಿ ಮಳೆ ಕಿರಿಕಿರಿ:
ಕಳೆದ ಎರಡು ದಿನಗಳಿಂದ ಜೋರು ಮಳೆಯ ಜತೆಗೆ ಜಿಟಿಜಿಟಿ ಮಳೆಯಾಗುತ್ತಿದ್ದು, ಸಾರ್ವಜನಿಕರು, ಬೀದಿಬದಿ ವ್ಯಾಪಾರಿಗಳು ಕಿರಿಕಿರಿ ಅನುಭವಿಸಿದರು. ನಗರದಲ್ಲಿ ಮಧ್ಯಾಹ್ನದ ಬಳಿಕ ನಿರಂತರವಾಗಿ ಬಿಟ್ಟು ಬಿಟ್ಟು ಬರುತ್ತಿದ್ದ ಮಳೆಗೆ ಸಾರ್ವಜನಿಕರು, ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ವಿವಿಧ ಅಂಗಡಿ ಮುಂಗಟ್ಟುಗಳು ಹಾಗೂ ಬಸ್‌ನಿಲ್ದಾಣಗಳಲ್ಲಿ ಹೆಚ್ಚಿನ ಜನರು ಮಳೆಯಿಂದ ರಕ್ಷಣೆ ಪಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಹೆಚ್ಚಿನ ಜನರು ಛತ್ರಿಗಳ ಮೊರೆ ಹೋದರೆ, ಸಾಕಷ್ಟುಜನರು ಜಿಟಿಮಳೆಯಲ್ಲಿ ನೆನೆದುಕೊಂಡು ಸಾಗುತ್ತಿದ್ದರು. ಬೀದಿಬದಿಯ ವ್ಯಾಪಾರಿಗಳು ಪ್ಲಾಸ್ಟಿಕ್ ರಕ್ಷಣೆ ಪಡೆದುಕೊಂಡಿದ್ದರು. ಆದರೆ ಜೋರು ಮಳೆಯಾದಾಗ ಕೆಲವರು ತೊಂದರೆ ಅನುಭವಿಸಿದರು. ಇದರಿಂದ ನಿತ್ಯದ ವ್ಯಾಪಾರ ವಹಿವಾಟಿಗೂ ಸಮಸ್ಯೆಯಾಯಿತು. ನಿರಂತರ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಜನರ ಓಡಾಟ ಕಡಿಮೆಯಾಗಿತ್ತು. ಸಂಜೆಯ ಬಳಿಕ ಮಳೆ ಕಡಿಮೆಯಾಯಿತು.
ಕಟಾವಿಗೆ ಬಂದಿರುವ ಬೆಳೆಗಳಿಗೆ ಹಾನಿ:
ಹವಮಾನ ವೈರಿತ್ಯದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಸಂಕಷ್ಟ ಅನುಭವಿಸುವಂತಾಗಿದ್ದು, ರೈತರ ಜಮೀನಿನಲ್ಲಿ ನೀರು ನಿಂತು ಸಲು ನಾಶವಾಗುತ್ತಿದೆ. ತಾಲೂಕಿನ ವ್ಯಾಪ್ತಿಯಲ್ಲಿ ಮುಂಗಾರಿಗೆ ಬಿತ್ತನೆ ಮಾಡಿರುವ ಕಡ್ಲೇಕಾಯಿ, ಜೋಳ, ಸೂರ್ಯಕಾಂತಿ ಹಾಗೂ ಇನ್ನಿತರೆ ಬೆಳೆಗಳು ಕಟಾವಿಗೆ ಬಂದಿದ್ದು, ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಭೂಮಿ ತೇವಾಂಶ ಹೆಚ್ಚಾಗುತ್ತಿದೆ. ಇದರಿಂದ ಕಟಾವಿಗೆ ಮುನ್ನವೇ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗೇಯೇ ಮಳೆ ಮುಂದುವರಿದರೇ ತೋಟಗಾರಿಕೆ ಬೆಳೆಗಳಾದ ಬಾಳೆ, ಟ್ಯೋಮ್ಯಾಟ್ಯೋ ಹಾಗೂ ಇನ್ನಿತರೆ ಬೆಳೆಗಳಿಗೆ ರೋಗ ಹೆಚ್ಚಾಗುತ್ತದೆ. ಮಳೆಯಾಶ್ರಿತ ಬೆಳೆಗಳಿಗೆ ನೀರು ತುಂಬಿಕೊಂಡು ಬೆಳೆಗಳಿಗೆ ಹಾನಿಯಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ನಡುವೆ ರೈರ ಜಾನುವಾರುಗಳ ಮೇವಿಗೂ ಸಮಸ್ಯೆ ಉಂಟಾಗುತ್ತಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆ ಸಲು ಮತ್ತು ಮೇವನ್ನು ನಷ್ಟಮಾಡುತ್ತಿದೆ ಎಂದು ರೈತ ಮುಖಂಡ ವಿಜಯ್‌ಕುಮಾರ್ ವಿಜಯವಾಣಿ ಜತೆಗೆ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.