

ಚಾಮರಾಜನಗರ: ಕೋಲ್ಕತಾ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕನ್ನಡ ಧ್ವಜ ಹಿಡಿದು ಅಲ್ಲಿಂದ ಶ್ರೀ ಭುವನೇಶ್ವರಿ ವೃತ್ತಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ, ಪಶ್ಚಿಮಬಂಗಾಳ ಸರ್ಕಾರದ ವಿರುದ್ಧ ೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಪಶ್ಚಿಮಬಂಗಾಳದಲ್ಲಿ ಒಬ್ಬ ಕಿಡಿಗೇಡಿ, ಆಸ್ಪತ್ರೆಗೆ ನುಗ್ಗಿ ವ್ಯದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿರುವುದು ಇಡೀ ಮನುಷ್ಯಕುಲಕ್ಕೆ ಮಾಡಿರುವ ಅಪಮಾನವಾಗಿದೆ. ಇಂತಹ ಪ್ರಕರಣವನ್ನು ತಡೆಗಟ್ಟುವಲ್ಲಿ ಪಶ್ಚಿಮಬಂಗಾಳ ಸರ್ಕಾರ ವಿಫಲವಾಗಿದೆ. ಅಲ್ಲಿ ಯಾರಿಗೂ ರಕ್ಷಣೆ ಇಲ್ಲ. ಆದ್ದರಿಂದ ರಾಷ್ಟ್ರಪತಿಗಳು ಪಶ್ಚಿಮ ಬಂಗಾಳ ಸರ್ಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಇಂತಹ ಕೃತ್ಯಗಳು ಮರುಕಳಿಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕಾಯ್ದೆಯನ್ನು ಜಾರಿಗೊಳಿಸಬೇಕು. ಅತ್ಯಾಚಾರಿಗಳನ್ನು ಎನ್‌ಕೌಂಟರ್ ಮಾಡಬೇಕು. ರಾಜ್ಯದಲ್ಲಿರುವ ವೈದ್ಯರಿಗೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ ಹಾಗೂ ಭಯಮುಕ್ತ ವಾತಾವರಣವನ್ನು ನಿರ್ಮಾಣ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಹಿರಿಯ ಹೋರಾಟಗಾರ ಶಾ.ಮುರಳಿ, ನಿಜಧ್ವನಿ ಗೋವಿಂದರಾಜು, ಪಣ್ಯದಹುಂಡಿರಾಜು, ಚಾ.ವೆಂ.ರಾಜಗೋಪಾಲ್, ನಂಜುಂಡಶೆಟ್ಟಿ, ಚಾ.ರಾ.ಕುಮಾರ್. ಮಹೇಶ್‌ಗೌಡ, ರವಿಚಂದ್ರಪ್ರಸಾದ್, ಬಸವಣ್ಣ. ವರದನಾಯಕ, ರವಿ. ಸಿದ್ದರಾಜು, ಚಾ.ಸಿ.ಸಿದ್ದರಾಜು, ಆಟೋ ಲಿಂಗರಾಜು, ತಾಂಡವಮೂರ್ತಿ ಹಾಗೂ ಇತರರು ಭಾಗವಹಿಸಿದ್ದರು.