

ಚಾಮರಾಜನಗರ: ಸ್ವಾತಂತ್ರೋತ್ಸವ ದಿನವಾದ ಆ.15 ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ರೈತರ ಟ್ರ್ಯಾಕ್ಟರ್ ರ‌್ಯಾಲಿಗೆ ಅವಕಾಶ ನೀಡದೇ, ರೈತರ ಬಂಧನ ಮಾಡಿದ ಪೊಲೀಸ್ ಕ್ರಮದ ವಿರುದ್ಧ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ರಾಜ್ಯ ಕಬ್ಬುಬೆಳೆಗಾರರ ಸಂಘದ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಪೊಲೀಸ್ ಮಹಾನಿರ್ದೇಶಕರಿಗೆ ಆ.15 ರಂದು ಟ್ರ್ಯಾಕ್ಟರ್ ರ‌್ಯಾಲಿ ನಡೆಸಲು ಪತ್ರ ಬರೆದಿದ್ದರು. ಅಂದು ರಾಜ್ಯ 23 ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದೆ. ಆದರೆ ಜಿಲ್ಲೆಯಲ್ಲಿ ಪೊಲೀಸರು ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಈ ವೇಳೆ ಡಿವೈಎಸ್‌ಪಿ ಲಕ್ಷ್ಮಯ್ಯ ಅವರು ಪೊಲೀಸ್ ವರಿಷ್ಠಾಧಿಕಾರಿ ಬಳಿಗೆ ಪ್ರತಿಭಟನಾನಿರತರನ್ನು ಕರೆದೊಯ್ದರು ಹೋದರು. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ರೈತರ ಬಂಧನ ಮಾಡುವುದು, ರೈತರ ಪ್ರತಿಭಟನೆಯನ್ನು ಹತ್ತಿಕ್ಕುವುದು ಸರಿಯಾದ ಕ್ರಮವಲ್ಲ ಎಂದು ಎಸ್ಪಿ ಬಳಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಎಸ್ಪಿ ಡಾ.ಕವಿತಾ ಮಾತನಾಡಿ, ಸ್ವಾತಂತ್ರ ದಿನಾಚರಣೆ ಅಂಗವಾಗಿ ಸ್ವಲ್ಪ ತೊಂದರೆಯಾಗಿದೆ. ಮುಂದೆ ಈ ರೀತಿ ರೈತರ ಹೋರಾಟಗಾರರಿಗೆ ಪೊಲೀಸ್ ಇಲಾಖೆಯಿಂದ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಬ್ಬುಬೆಳೆಗಾರರ ಸಂಘದ ಮೈಸೂರು ವಿಭಾಗದ ಪ್ರಧಾನ ಕಾರ್ಯದರ್ಶಿ, ನಾಗರಾಜ್, ಚಾಮರಾಜನಗರ ವಿಭಾಗದ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ, ಉಪಾಧ್ಯಕ್ಷ ಮೂಡಲಪುರ ಪಟೇಲ್ ಶಿವಮೂರ್ತಿ, ಮೂಕಳ್ಳಿ ಮಹದೇವಸ್ವಾಮಿ, ತಾಲೂಕ ಅಧ್ಯಕ್ಷ ನಂಜಪುರ ಸತೀಶ್, ಉಪಾಧ್ಯಕ್ಷ ಹೆಗ್ಗೋಠಾರ ಶಿವಸ್ವಾಮಿ, ಮೂಕಳ್ಳಿ ಶಿವಕುಮಾರ್, ರಾಜು ಮಾಂಬಳ್ಳಿ, ನೀಲಕಂಠಪ್ಪ, ಸಿದ್ದರಾಮ, ಉಡಿಗಾಲ ಗುರು ಪ್ರಸಾದ್ ಹಾಗೂ ಇತರರು ಭಾಗವಹಿಸಿದ್ದರು.