ಚಿಕಿತ್ಸೆ ಸಿಗದೇ ರೋಗಿಗಳ ಪರದಾಟ

17rajesh6
Published on

ಚಾಮರಾಜನಗರ: ಕೊಲ್ಕತ್ತಾದ ಟ್ರೈನಿ ವೈದ್ಯೆ ಅತ್ಯಾಚಾರವನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಶನಿವಾರ ಕರೆನೀಡಿದ್ದ ವೈದ್ಯರ ಮುಷ್ಕರದಿಂದ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳು ಬಂದ್ ಆಗಿದ್ದರ ಪರಿಣಾಮವಾಗಿ ಸಾಮಾನ್ಯ ರೋಗಿಗಳು ಚಿಕಿತ್ಸೆ ಪಡೆಯಲು ಪರದಾಡುವಂತಾಯಿತು.

ನಗರದ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಿಗೆ ಚಿಕಿತ್ಸೆ ಪಡೆಯಲು ಬಂದವರು, ಕ್ಲಿನಿಕ್‌ಗಳ ಮುಂಭಾಗ ಅಂಟಿಸಿದ್ದ ಕರಪತ್ರಗಳನ್ನು ನೋಡಿ ಮನೆಗಳಿಗೆ ತೆರಳಿದರು. ಇತ್ತ ಸಿಮ್ಸ್ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಹೊರರೋಗಿ ವಿಭಾಗ ಬಂದ್ ಮಾಡಿದ್ದರಿಂದ ಕೆಲಕಾಲ ದೂರದ ಊರುಗಳಿಂದ ಚಿಕಿತ್ಸೆ ಪಡೆಯಲು ಬಂದಿದ್ದ ರೋಗಿಗಳು ಸಮಸ್ಯೆ ಅನುಭವಿಸಿದರು.

ಸಾಕಷ್ಟು ಮಹಿಳೆಯರು ಮಕ್ಕಳಿಗೆ ಚಿಕಿತ್ಸೆಕೊಡಿಸಲು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೇವಲ ತುರ್ತು ವಿಭಾಗದಲ್ಲಿ ಮಾತ್ರ ಚಿಕಿತ್ಸೆ ನೀಡುತ್ತಿದ್ದ ಪರಿಣಾಮ, ತುರ್ತು ಚಿಕಿತ್ಸಾ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ನೆರೆದಿದ್ದರು. ಸಿಮ್ಸ್ ಆಸ್ಪತ್ರೆಯಲ್ಲಿ ಒಳರೋಗಿ ವಿಭಾಗದ ಚಿಕಿತ್ಸೆ, ವಿವಿಧ ಶಸ ಚಿಕಿತ್ಸೆಗಳು, ಹೆರಿಗೆ, ಡಯಾಲಿಸಿಸ್ ಹಾಗೂ ಇನ್ನಿತರೆ ತುರ್ತು ಸೇವೆಗಳನ್ನು ಕಲ್ಪಿಸಿ ರೋಗಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಯಿತು. ಅದಾಗ್ಯೂ ಸಾಮಾನ್ಯ ಜನರಿಗೆ ಮುಷ್ಕರದ ಬಿಸಿ ತಟ್ಟಿತು.

ಸರ್ಕಾರಿ ವೈದ್ಯರು ತೋಳಿಗೆ ಕಪ್ಪುಪಟ್ಟಿ ಧರಿಸಿಕೊಂಡು ಚಿಕಿತ್ಸೆ ನೀಡಿದ್ದಾರೆ. ರಜೆಯಲ್ಲಿರುವ ಎಲ್ಲಾ ವೈದ್ಯರನ್ನು ಕರ್ತವ್ಯಕ್ಕೆ ನೇಮಿಸುವ ಮೂಲಕ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಓಪಿಡಿ ಹೊರತುಪಡಿಸಿ ತುರ್ತು ಚಿಕಿತ್ಸೆ ನೀಡಲು ಸಮಸ್ಯೆಯಾಗದಂತೆ ಸೂಕ್ತ ಕ್ರಮವಹಿಸಲಾಗಿದೆ.-ಡಾ.ಮಂಜುನಾಥ್, ಡೀನ್ ಮತ್ತು ನಿರ್ದೇಶಕ, ಸಿಮ್ಸ್ ಆಸ್ಪತ್ರೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net