

ಚಾಮರಾಜನಗರ: ಕೊಲ್ಕತ್ತಾದ ಟ್ರೈನಿ ವೈದ್ಯೆ ಅತ್ಯಾಚಾರವನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಶನಿವಾರ ಕರೆನೀಡಿದ್ದ ವೈದ್ಯರ ಮುಷ್ಕರಕ್ಕೆ ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು ಹಾಗೂ ಯಳಂದೂರು ತಾಲೂಕಿನಲ್ಲಿ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗ ಹಾಗೂ ಕ್ಲಿನಿಕ್‌ಗಳು ಸಂಪೂರ್ಣ ಬಂದ್ ಆಗಿದ್ದವು. ತುರ್ತು ಸೇವೆಯನ್ನು ಹೊರತುಪಡಿಸಿ ಓಪಿಡಿ ಬಂದ್ ಆಗಿದ್ದರಿಂದ ನೆಗಡಿ, ಕೆಮ್ಮು, ತಲೆನೋವು, ಜ್ವರ ಹಾಗೂ ಇನ್ನಿತರೆ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ಪಡೆಯಲು ಬಂದ ರೋಗಿಗಳು ಸೂಕ್ತ ಚಿಕಿತ್ಸೆ ದೊರೆಯದೇ ಪರದಾಡುವಂತಾಯಿತು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ತುರ್ತು ಸೇವೆಯಲ್ಲಿ ಕರ್ತವ್ಯ ನಿರ್ವಹಿಸಿದರು. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸಲಾಗಿತ್ತು.
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ವಿದ್ಯಾರ್ಥಿಗಳು, ಬೋಧನಾ ಆಸ್ಪತ್ರೆಯ ಕಿರಿಯ ವೈದ್ಯರು ಹಾಗೂ ಸ್ಥಾನಿಕ ವೈದ್ಯರು ಜಿಲ್ಲಾಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿದರು. ತೋಳಿಗೆ ಕಪ್ಪುಪಟ್ಟಿ ಧರಿಸಿಕೊಂಡು ವಿವಿಧ ೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ.ಪವನ್, ಉಪಾಧ್ಯಕ್ಷೆ ಡಾ.ಸ್ನೇಹ, ಪ್ರಧಾನ ಕಾರ್ಯದರ್ಶಿ ಡಾ.ತರುಣ್, ಖಜಾಂಚಿ ಡಾ.ದಿವ್ಯಾ, ಡಾ.ಚೈತನ್ಯಾ, ಡಾ.ಚೇತನ್, ಡಾ.ಗೌತಮಿ, ಡಾ.ಸಂಜು, ಡಾ.ಕೀರ್ತಿ, ಡಾ.ವಿನುತಾ, ಡಾ.ಸೌಂದರ್ಯ, ಡಾ.ಅತುಲ್ ಪಾಂಡೆ, ಡಾ.ಸಿದ್ದರಾಮ್, ಡಾ.ವಿಘ್ನೇಶ್, ಡಾ.ದಿವ್ಯಾ, ಡಾ.ಜಾಫರ್ ಸಲ್ಮಾನ್ ಹಾಗೂ ಇತರರು ಭಾಗವಹಿಸಿದ್ದರು.