ಚಾಮರಾಜನಗರ : ತಾಲೂಕಿನ ಮಹಂತಾಳಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆಯೊಂದು ಭಾನುವಾರ ರಾತ್ರಿ ಸೆರೆಯಾಗಿದೆ.
ಮಹಂತಾಳಪುರ ಗ್ರಾಮದ ಕಲ್ಲು ಕ್ವಾರಿಯಲ್ಲಿ ಜೋಡಿ ಚಿರತೆಗಳು ಆಗಾಗ್ಗೆ ಕಾಣಿಸಿಕೊಳ್ಳುವ ಮೂಲಕ ಆತಂಕ ಉಂಟುಮಾಡಿತ್ತು. ಇದರಿಂದಾಗಿ ಮಹಂತಾಳಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಚಿರತೆ ನೀಡುತ್ತಿದ್ದ ಉಪಟಳದಿಂದ ಬೇಸತ್ತು ಹೋಗಿದ್ದರು. ಚಿರತೆಗಳು ಜಾನುವಾರುಗಳನ್ನು ಕೊಂದು ಹಾಕುತ್ತಿದ್ದ ಪರಿಣಾಮವಾಗಿ ಜನರು ಭಯಭೀತರಾಗಿದ್ದರು.
ಚಿರತೆಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನು ಇರಿಸಿದ್ದರು. ಭಾನುವಾರ ರಾತ್ರಿ ಬೋನಿಗೆ ಒಂದು ಚಿರತೆ ಸೆರೆಯಾಗಿದ್ದು, ಈ ಭಾಗದ ಜನರು ಮತ್ತೊಂದು ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.