

ಕೊಳ್ಳೇಗಾಲ: ಗಡಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿ ಜಲಪಾತೋತ್ಸವದ ಎರಡನೇ ದಿನದ ದೀಪಾಲಂಕಾರದ ಸೊಬಗನ್ನು ಭಾನುವಾರ ಸಾವಿರಾರು ಪ್ರವಾಸಿಗರು ಕಣ್ತುಂಬಿಕೊಂಡರು.
ಚೆಲುವ ಚಾಮರಾಜನಗರ ಅಭಿಯಾನದಡಿಯಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಭರಚುಕ್ಕಿ ಜಲಪಾತೋತ್ಸವ-2024ಕ್ಕೆ ಅದ್ದೂರಿ ಚಾಲನೆ ದೊರೆಯಿತು. ವೇದಿಕೆಯಲ್ಲಿ ಡೊಳ್ಳು ಬಾರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು.
ಪ್ರವಾಸಿಗರಿಗೆ ರಸದೌತಣ ಉಣಬಡಿಸಲು ಜಿಲ್ಲಾಡಳಿತ ಭಾನುವಾರವೂ ಸಂಜೆ 7 ರಿಂದ 9 ಗಂಟೆಯವರೆಗೆ ದೀಪಾಲಂಕಾರವನ್ನು ಪ್ರದರ್ಶಿಸಲು ನಿಲುವು ತಾಳಿತ್ತು. ಅಂತೆಯೇ, ಎರಡನೇ ದಿನವೂ ಸಂಜೆ ಭರಚುಕ್ಕಿ ಅಂಗಳದಲ್ಲಿ ರಂಗಿನ ವಾತಾವರಣ ಸೃಷ್ಟಿಯಾಗಿತ್ತು. ತಮಿಳುನಾಡು, ತೆಲಂಗಾಣ, ಬಳ್ಳಾರಿ, ಬೆಂಗಳೂರು, ಮೈಸೂರು, ಹಾಸನ, ತುಮಕೂರು, ಕನಕಪುರ, ರಾಮನಗರ ಇನ್ನಿತರ ಸ್ಥಳಗಳಿಂದ ಸಾವಿರಾರು ಆಗಮಿಸಿ ಭರಚುಕ್ಕಿ ಜಲಪಾತ ರೌದ್ರ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡರು.
ಪ್ರವಾಸಿಗರ ಆಕರ್ಷಿಸಲು ಜಲಪಾತ, ಅಂಗಳದಲ್ಲಿರುವ ಮರಗಳಿಗೂ ಬಣ್ಣ ಬಣ್ಣದ ಲೈಟ್ ಅಳವಡಿಸಲಾಗಿತ್ತು. ದೀಪಾಲಂಕಾರ ಬಳಿ ನಿಂತು ಪ್ರವಾಸಿಗರು ಸೆಲ್ಫಿ, ಫೋಟೋ ಕ್ಲಿಕಿಸಿಕೊಂಡರು. ಜಲಪಾತದಲ್ಲಿ ಕರ್ನಾಟಕ, ಭಾರತ ಭೂಪಟವನ್ನು ಪ್ರದರ್ಶಿಸಲಾಗುತ್ತಿತ್ತು. ಈ ವೇಳೆ ಜನರು ದೇಶದ ಪರವಾದ ಜೈಕಾರ ಮೊಳಗಿಸಿದರು.
ಅವಧಿಗೂ ಮೊದಲೇ ಲೈಟ್ ಬಂದ್: ಜಿಲ್ಲಾಡಳಿತ ಭಾನುವಾರವೂ ಸಂಜೆ 7ರಿಂದ 9 ಗಂಟೆಯವರೆಗೆ ದೀಪಾಲಂಕಾರ ವೀಕ್ಷಣೆಗೆ ಅವಕಾಶ ನೀಡುವುದಾಗಿ ಹೇಳಿತ್ತಾದರೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಆ ಸಮಯವನ್ನು ರಾತ್ರಿ 8 ಗಂಟೆಯವರೆಗೆ ಕೊನೆಗೊಳಿಸಿತು. ದೀಪಾಲಂಕಾರ ಒಂದು ಗಂಟೆ ಕಡಿತವಾದ್ದರಿಂದ ದೂರದ ಊರುಗಳಿಂದ ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳು ಆಗಮಿಸಿದ್ದ ಸಾವಿರಾರು ಪ್ರವಾಸಿಗರಿಗೆ ನಿರಾಸೆ ಉಂಟಾಯಿತು.
ಪ್ರವಾಸಿಗರಿಗೆ ಹಾವಿನ ಶಾಕ್: ರಂಗು ರಂಗಿನ ಬಣ್ಣದ ಹೋಕಳಿಯಲ್ಲಿ ಮಿಂದೇಳುತ್ತಿದ್ದ ಕಾವೇರಿ ಬೆಡಗನ್ನು ರೆಪೆ ಬಡಿಯದೆ ಆಸ್ವಾದಿಸುತ್ತಿದ್ದ ಪ್ರವಾಸಿಗರ ನಡುವೆ ಹಾವೊಂದು ಹರಿದು ಬಂದಿತ್ತು. ನೋಡಿದೊಬ್ಬರು ಹಾವು, ಹಾವು ಎಂದು ಹೌಹಾರಿದರು. ಗುಂಪುಗೂಡಿದ್ದ ಜನರು ಚೆಲ್ಲಪಿಲ್ಲಿಯಾದರು. ಕೆಲ ಕ್ಷಣ ಎಲ್ಲರಲ್ಲೂ ಆತಂಕ ಸೃಷ್ಟಿಯಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಪ್ರವಾಸಿ ಮಿತ್ರರಾದ ಹುಚ್ಚಪ್ಪ, ನಂಜುಂಡಸ್ವಾಮಿ ಇತರರು ಜನರನ್ನು ಹಾವಿನ ಬಳಿ ತೆರಳದಂತೆ ನೋಡಿಕೊಂಡರು. ಆ ನಂತರ ಹಾವನ್ನು ಸುರಕ್ಷಿತವಾಗಿ ಪೊದೆಯತ್ತ ಹರಿದು ಹೋಗುವಂತೆ ಅವಕಾಶ ಮಾಡಿಕೊಟ್ಟರು.
ಹಲವು ವರ್ಷಗಳ ಹಿಂದೆ ಜಲಪಾತೋತ್ಸವಕ್ಕೆ ಆಗಮಿಸಿದ್ದೆ. ಈ ಭಾರಿ ಇತ್ತ ಬಂದಾಗ ಜಲಪಾತೋತ್ಸವ ಪತ್ನಿ, ಮಗ, ಸೊಸೆ, ಮೊಮ್ಮಕ್ಕಳ ಜತೆಗೆ ಆಗಮಿಸಿ ಜಲಧಾರೆಯ ಸಿರಿ ನೋಡಿದ್ದು ಖುಷಿ ತಂದಿತು. ಇಂತಹ ಪ್ರಕೃತಿ ಸೊಬಗು ಈ ನೆಲದಲ್ಲಿರುವುದು ನಮ್ಮ ರಾಜ್ಯದ ಹಿರಿಮೆಯಾಗಿದೆ. ಸರ್ಕಾರ ಅಂದವಾದ ಸ್ಥಳವನ್ನು ಅಭಿವೃದ್ಧಿಗೊಳಿಸಬೇಕು. ಅಗತ್ಯ ಮೂಲ ಸೌಕರ್ಯ ನೀಡಬೇಕು, ಆಗ ಪ್ರವಾಸಿಗರ ಸಂಖ್ಯೆ ದುಪಟ್ಟಾಗುವುದರಲ್ಲಿ ಸಂಶಯವಿಲ್ಲ.
ಚೆನ್ನಯ್ಯ, ಬನಶಂಕರಿ, ಬೆಂಗಳೂರು