ಚಾಮರಾಜನಗರ : ರಾಜ್ಯದಲ್ಲಿ ನಡೆದ ಶರಣ ಚಳವಳಿ ವಿಶ್ವದಲ್ಲೇ ವಿನೂತನವಾದ ಕ್ರಾಂತಿಕಾರಿ ಚಳವಳಿಯಾಗಿದೆ ಎಂದು ಸಾಹಿತಿ ಬಿ.ಎಸ್.ವಿನಯ್ ಹೇಳಿದರು.
ತಾಲೂಕಿನ ರೇಚಂಬಳ್ಳಿ ಸಿದ್ದಮಲ್ಲೇಶ್ವರ ಮಠದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ಬೆಳ್ಳಿಹಬ್ಬದ ಅಂಗವಾಗಿ ಆಯೋಜಿಸಿದ್ದ ಊರಿಂದೂರಿಗೆ ಶರಣ ಸಂದೇಶ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣ ಚಳವಳಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಹೊಸ ಬದಲಾವಣೆಗೆ ಮೂಲ ಪ್ರೇರಣೆಯಾಗಿತ್ತು. ಧರ್ಮ, ದೇವರು, ಪೂಜೆಯ ಬಗ್ಗೆ ಇದ್ದ ಎಲ್ಲ ಭ್ರಮೆಗಳನ್ನು ಹೋಗಲಾಡಿಸಿ ಸರಳವಾಗಿ ಧರ್ಮ ಅನುಸರಿಸುವ, ದೇವರನ್ನು ತಲುಪುವ ಮಾರ್ಗವನ್ನು ಶರಣರು ತೋರಿಸಿಕೊಟ್ಟರು. ಸಮಾಜದಲ್ಲಿದ್ದ ಮೂಢ ನಂಬಿಕೆಗಳನ್ನು ತಮ್ಮ ಆಚರಣೆ, ವಚನಗಳ ಮೂಲಕ ಹೋಗಲಾಡಿಸಲು ಪ್ರಯತ್ನಿಸಿದರು ಎಂದು ತಿಳಿಸಿದರು.
ಮರಿಯಾಲ ಮಠದ ಶ್ರೀಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನೌಕರರ ಹಿತ ಕಾಯುವ ಜತಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಶರಣರ ವಿಚಾರ ಧಾರೆಯನ್ನು ಜನಮಾನಸದಲ್ಲಿ ಬಿತ್ತುವ ಕೆಲಸ ಮಾಡುತ್ತಿದೆ. ಬೆಳ್ಳಿಹಬ್ಬದ ಆಚರಣೆಯ ನಿಮಿತ್ತ ಇಪ್ಪತ್ತೈದು ಗ್ರಾಮಗಳಲ್ಲಿ ಶರಣ ಸಂದೇಶ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ರೇಚಂಬಳ್ಳಿ ಶ್ರೀಮಠದ ಮಹದೇವಸ್ವಾಮಿ, ನೌಕರರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಗೌರಿಶಂಕರ್, ಉಪಾಧ್ಯಕ್ಷ ಕುಮಾರಸ್ವಾಮಿ, ಜಂಟಿ ಕ್ರಿಯಾ ಸಮಿತಿಯ ರಾಮಸಮುದ್ರ ಶಿವಕುಮಾರಸ್ವಾಮಿ, ಸಂಗಮ ಗೃಹ ನಿರ್ಮಾಣ ಸಂಘದ ಲಿಂಗರಾಜು, ವೀರಶೈವ ಲಿಂಗಾಯತ ನೌಕರರ ಸಂಘದ ಖಜಾಂಚಿ ಕೊತ್ತಲವಾಡಿ ಮಹದೇವಸ್ವಾಮಿ, ಸಂಘಟನಾ ಕಾರ್ಯದರ್ಶಿ ಕಾಗಲವಾಡಿ ಯೋಗೇಶ್, ಹೊಂಗನೂರು ಸಿದ್ದಲಿಂಗಸ್ವಾಮಿ, ಪ್ರಸನ್ನ, ಪ್ರಭಾಕರ್, ನಾಗರಾಜಪ್ಪ, ಉಮೇಶ್, ಹೊನ್ನಪ್ಪ ಇತರರು ಹಾಜರಿದ್ದರು.