ಯುವಸಮುದಾಯ ಸೇವಾಗುಣ ಮೈಗೂಡಿಸಿಕೊಳ್ಳಿ

069
Published on

ಚಾಮರಾಜನಗರ: ಸಣ್ಣ ಕೆಲಸಗಳನ್ನೂ ಶ್ರಮ ಮತ್ತು ಶಿಸ್ತಿನಿಂದ ಆರಂಭಿಸಿದಾಗ, ದೊಡ್ಡ ಕಾರ್ಯಕ್ಕೆ ಪ್ರೇರಣೆ ಮತ್ತು ಸ್ಪೂರ್ತಿಯನ್ನು ನೀಡುತ್ತದೆ ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಎಂ. ಆರ್.ಗಂಗಾಧರ್ ತಿಳಿಸಿದರು.

ನಗರದ ಸೇವಾ ಭಾರತಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಯೂತ್ ಾರ್ ಸೇವಾ ಸಂಸ್ಥೆಯ ಸೇವಾ ಸಂಭ್ರಮ-2023 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಯುವಕರು ಸೇವಾಗುಣವನ್ನು ಬೆಳೆಸಿಕೊಂಡಾಗ ಯಾವುದೇ ರೀತಿಯ ಅಡ್ಡದಾರಿಗಳನ್ನು ಹಿಡಿಯಲು ಸಾಧ್ಯವಾಗುವುದಿಲ್ಲ. ಮನಸ್ಸನ್ನು ಪರಿಪೂರ್ಣತೆಗೆ ತೆಗೆದುಕೊಂಡು ಹೋಗುತ್ತದೆ.
ದೇಶದ ಶಕ್ತಿ ಯುವಶಕ್ತಿಯಾಗಿದ್ದು ಯುವಕರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ರಾಷ್ಟ್ರವನ್ನು ಬದಲಾವಣೆ ತರಬಹುದು. ದೇಶ ಚಿಂತನೆಯ ಮತ್ತು ಸೇವಾಗುಣವನ್ನು ಬೆಳೆಸುತ್ತಿರುವ ಯೂಥ್ ಫಾರ್ ಸೇವಾ ಸಂಸ್ಥೆ ರಾಷ್ಟ್ರದ ಪ್ರಮುಖ ಸಂಸ್ಥೆಯಾಗಿ ಬೆಳೆಯುತ್ತಿದೆ. ಈ ಸಂಸ್ಥೆಯಲ್ಲಿ ಸೇವೆ ಮಾಡುವ ದೊಡ್ಡ ಭಾಗ್ಯ ನಿಮಗೆ ಸಿಕ್ಕಿದೆ ಎಂದರು.

ಚಾಮರಾಜನಗರ ಜಿಲ್ಲೆ ಪ್ರಕೃತಿ, ಪರಿಸರ, ವಾತಾವರಣ ಉನ್ನತವಾಗಿದ್ದು ಶಿಕ್ಷಣ ಕಲಿಯುವ ಎಲ್ಲ ವಾತಾವರಣವೂ ತಮಗೆ ಲಭಿಸಿದೆ. ವಿವಿದ ರೀತಿಯ ಕೌಶಲ್ಯದ ಶಿಕ್ಷಣದ ಜೊತೆಗೆ ಸೇವಾ ಮನಸ್ಸಿನಿಂದ ಎಲ್ಲಾ ಕಾರ್ಯಗಳನ್ನು ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಯಶಸ್ಸು ಸಾಧಿಸಿ ಎಂದು ತಿಳಿಸಿದರು.

ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ಮಾತನಾಡಿ, ತ್ಯಾಗ ಮತ್ತು ಸೇವಾ ಮನೋಭಾವನೆಯನ್ನು ಯೂತ್ ಾರ್ ಸೇವಾ ಸಂಸ್ಥೆ ಯುವಕರಲ್ಲಿ ತುಂಬುತ್ತಿದೆ. ಯುವಕರು ಸಮಯ ಸದ್ಭಳಕೆಯಿಂದ ಸೇವಾ ಕಾರ್ಯದಲ್ಲಿ ತೊಡಗಿದಾಗ ಆತ್ಮ ತೃಪ್ತಿ ,ಆತ್ಮ ಸಂತೋಷ ಉಂಟಾಗಿ ನವ ಚೈತನ್ಯ, ಸ್ಪೂರ್ತಿ, ಪ್ರೇರಣೆ ಉಂಟಾಗಿ ಶ್ರೇಷ್ಠ ಕಾರ್ಯಗಳನ್ನು ನೆರವೇರಿಸಲು ಶಕ್ತಿ ಉಂಟಾಗುತ್ತದೆ ಎಂದು ಹೇಳಿದರು.

ಸೇವೆಯಿಂದ ವ್ಯಕ್ತಿಯ ಆಧ್ಯಾತ್ಮಿಕ ಶಕ್ತಿ ಉನ್ನತಿಯಾಗಿ, ವ್ಯಕ್ತಿಯ ಬೆಳವಣಿಗೆಯಾಗಿ ಸಮಾಜಕ್ಕೂ ಒಳಿತಾಗುತ್ತದೆ. ಯುವಕರಿಗೆ ಸ್ವಾಮಿ ವಿವೇಕಾನಂದರು ಸದಾ ಸ್ಪೂರ್ತಿ. ಅರ್ಪಣಾ ಮನೋಭಾವ ಹಾಗೂ ಸೇವಾ ತತ್ವರತೆ ದೇಶಕ್ಕೆ ಮತ್ತು ದೇಶದ ಜನರಿಗೆ ನೆರವಾಗುತ್ತದೆ. ಸೇವೆ ಎಂಬುದು ದಾನ ಮಾಡುವುದು, ಭೌತಿಕ ಮತ್ತು ದೈಹಿಕ ನೆರವಾಗುವುದು ಎಂಬ ಅರ್ಥವಲ್ಲ. ಜೀವನನ್ನು ದೇವರೆಂದು ತಿಳಿಯುವುದೇ ಸೇವೆ ಎಂದು ತಿಳಿಸಿದರು.

ಯೂತ್ ಫಾರ್ ಸೇವಾ ಸಂಸ್ಥೆಯ 225ಕ್ಕೂ ಹೆಚ್ಚು ಯುವಕರಿಗೆ ಸೇವಾ ಅಂಕುರ ಮತ್ತು ಸೇವಾ ಸಾರಥಿ ಪುರಸ್ಕಾರ ನೀಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ವೆಂಕಟ ನಾಗಪ್ಪ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಯುತ್ ಫಾರ್ ಸೇವಾ ಸಂಸ್ಥೆಯ ದಕ್ಷಿಣ ಪ್ರಾಂತ್ಯ ಸಂಯೋಜಕ ರಾಘವೇಂದ್ರ, ಸಂಯೋಜಕ ವಿಷ್ಣು ಮಾತನಾಡಿದರು.

ರಾಕೇಶ್ ಭಟ್, ಸುಪ್ರೀತ್ ಭಾರದ್ವಾಜ್, ತೇಜನಾಯಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net