

ಚಾಮರಾಜನಗರ: ನಾನು ಮೊದಲ ಬಾರಿಗೆ ಮಂತ್ರಿಯಾಗಲು ಬಿ.ರಾಚಯ್ಯ ಅವರು ಕಾರಣ. ನಾನು ಅಂದು ಮಂತ್ರಿಯಾಗದೆ ಇದ್ದಿದ್ದರೆ ಎರಡು ಬಾರಿ ಮುಖ್ಯಮಂತ್ರಿಯಾಗುತ್ತಿರಲಿಲ್ಲ. ಇದಕ್ಕೆ ಕೆಲವರಿಗೆ ಹೊಟ್ಟೆ ಉರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಆಲೂರು ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಬಿ.ರಾಚಯ್ಯ ಅವರ ಸ್ಮಾರಕವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಬಿ.ರಾಚಯ್ಯ ಕರ್ನಾಟಕ ಕಂಡ ಮುತ್ಸದ್ದಿ ರಾಜಕಾರಣಿ. ಪ್ರತಿಭಾವಂತರನ್ನು ಬೆಳೆಸುವುದು ಅವರ ಗುಣ. ನಾನು ಮತ್ತು ಡಾ.ಎಚ್.ಸಿ.ಮಹದೇವಪ್ಪ ಅವರ ಪ್ರಾಡಕ್ಟ್‌ಗಳು. ಇದನ್ನು ನಾನು ಹೆಮ್ಮೆಯಿಂದ ಹೇಳುತ್ತೇನೆ. ಅವರು ಹೇಳಿದಂತೆ ನಾನು ಪ್ರಾಮಾಣಿಕವಾಗಿ ನಡೆಯುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ನುಡಿದರು.
ಬಿ.ರಾಚಯ್ಯ ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಿದರು. ಹೆಚ್ಚು ಮಾತನಾಡುತ್ತಿರಲಿಲ್ಲ, ಅವರ ಪೆನ್ ಬಡವರ ಪರವಾಗಿ ಕೆಲಸ ಮಾಡುತ್ತಿತ್ತು. ನನಗೆ ಬಹಳ ಸಂತೋಷವಾಗುತ್ತಿರುವುದೇನೆಂದರೆ ಈ ಹಿಂದೆ ನಾನು ಸ್ಮಾರಕಕ್ಕೆ ಭೂಮಿಪೂಜೆ ಮಾಡಿದ್ದೆ. ಈಗ ನಾನೇ ಉದ್ಘಾಟಿಸುತ್ತಿರುವುದು. ಎಸ್.ಜಯಣ್ಣ ನನಗೆ ಆಪ್ತ. ಅವನಿಗೆ ಆರೋಗ್ಯ ಸರಿ ಇಲ್ಲದ ಕಾರಣ ವಿಧಾನಸಭಾ ಚುನಾವಣೆಯಲ್ಲಿ ಎ.ಆರ್.ಕೃಷ್ಣಮೂರ್ತಿಗೆ ಟಿಕೆಟ್ ಕೊಟ್ಟು ಬಿ.ರಾಚಯ್ಯ ಅವರ ಋಣ ತೀರಿಸಲು ಪ್ರಯತ್ನ ಮಾಡಿದ್ದೇವೆ ಎಂದರು.
ರಾಚಯ್ಯ ಅವರು ಯಾರನ್ನೂ ದ್ವೇಷ ಮಾಡುತ್ತಿರಲಿಲ್ಲ. 5 ದಶಕಗಳ ಕಾಲ ಸುದೀರ್ಘ ರಾಜಕಾರಣ ಮಾಡಿದರು. ಬಿ.ರಾಚಯ್ಯ ನಮಗೆ ಮಾತ್ರ ಸ್ಫೂರ್ತಿಯಲ್ಲ, ಯುವ ರಾಜಕಾರಣಿಗಳಿಗೂ ಆದರ್ಶರಾಗಿದ್ದರು.ಎ.ಆರ್.ಕೃಷ್ಣಮೂರ್ತಿ ಬಿ.ರಾಚಯ್ಯ ಅವರ ದಾರಿಯಲ್ಲಿ ನಡೆಯಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಬೇಕಾದಷ್ಟು ಜನ ರಾಜಕಾರಣಿಗಳು ಬಂದು ಹೋಗಿದ್ದಾರೆ. ಆದರೆ ಬಿ.ರಾಚಯ್ಯ ಅವರ ಸ್ಮಾರಕ ನಿರ್ಮಾಣ ಮಾಡಲು ಕಾರಣವಿದೆ. ನನ್ನನ್ನು ಮತ್ತು ಸಿದ್ದರಾಮಯ್ಯ ಅವರಂತಹ ವ್ಯಕ್ತಿಗಳನ್ನು ಬೆಳೆಸಿದವರು ಎಂದು ಸ್ಮರಿಸಿದರು. ಬಿ.ರಾಚಯ್ಯ ಎಲ್ಲರ ರೀತಿಯ ರಾಜಕಾರಣಿಗಳಲ್ಲ. ಅಸಮಾನತೆ, ಅಸ್ಪೃಶ್ಯತೆಯ ನೋವನ್ನು ಅನುಭವಿಸಿದವರು. ಕಾನೂನಿನ ಚೌಕಟ್ಟಿನ ಒಳಗೆ ತಂದು ಬಡವರಿಗೆ ನೆರವು ನೀಡಬೇಕೆಂದು ಹೇಳಿಕೊಟ್ಟವರು. ಇದೇ ಮಾದರಿಯಲ್ಲಿ ಸಿಎಂ ಸಿದ್ದರಾಮಯ್ಯ ಜನಪರ ಆಡಳಿತ ನೀಡಿ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ. ನಾನು ಮತ್ತು ಸಿದ್ದರಾಮಯ್ಯ ರಾಚಯ್ಯ ಅವರ ಗರಡಿಯಲ್ಲಿ ಬೆಳೆದವರು ಎಂದರು.
ಇದೇ ವೇಳೆ ಸಹಜ ಬೇಸಾಯ ಸುಸ್ಥಿರ ಬದುಕಿಗೆ ಅಡಿಪಾಯ ಲೋಗೋವನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಎಂಎಸ್‌ಐಎಲ್ ಅಧ್ಯಕ್ಷರೂ ಆದ ಶಾಸಕ ಸಿ.ಪುಟ್ಟರಂಗಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಂಸದ ಸುನೀಲ್‌ಬೋಸ್, ಶಾಸಕರಾದ ಎಚ್.ಎಂ.ಗಣೇಶ್‌ಪ್ರಸಾದ್, ಅನಿಲ್ ಚಿಕ್ಕಮಾದು, ಎಂಎಲ್‌ಸಿಗಳಾದ ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ದುಂಡಮ್ಮ, ಪಂಚಾಯಿತಿ ಮಾಜಿ ಸದಸ್ಯ ಎ.ಆರ್.ಬಾಲರಾಜು, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಎಂಎಲ್ಸಿ ವೇಣುಗೋಪಾಲ್ ಇದ್ದರು.
ಪಶ್ಚಾತಾಪಕ್ಕಾಗಿ ಉಪವಾಸ ಮಾಡಿದ್ದರು
ಬಿ.ರಾಚಯ್ಯ ಅವರು ಕೃಷಿ ಸಚಿವರಾಗಿದ್ದ ಸಂದರ್ಭದಲ್ಲಿ ನನ್ನಂತಹ ಕಿರಿಯ ರಾಜಕಾರಣಿಯ ಟೀಕೆಯನ್ನು ಸ್ವೀಕಾರ ಮಾಡಿ ಪಶ್ಚಾತಾಪಕ್ಕಾಗಿ ಒಂದು ದಿನ ಉಪವಾಸ ಮಾಡಿದ್ದರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಬಿ.ರಾಚಯ್ಯ ಅವರೊಂದಿಗೆ ನನಗೆ ಸಂಬಂಧ ಮತ್ತು ಸಂಪರ್ಕವಿರಲಿಲ್ಲ. ನಾನು 34ನೇ ವಯಸ್ಸಿನಲ್ಲಿ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿ ಬಂದಿದ್ದೆ. ವಿರೋಧ ಪಕ್ಷದಲ್ಲಿದ್ದುಕೊಂಡು ಆಡಳಿತ ಪಕ್ಷದ ತಪ್ಪುಗಳನ್ನು ಖಂಡಿಸುತ್ತಿದ್ದೆ. ನನ್ನ ಕ್ಷೇತ್ರದಲ್ಲಿ ಹತ್ತಿ ಬೆಳೆ ನಾಶವಾಗಿದ್ದಕ್ಕೆ ಕೃಷಿ ಸಚಿವರಾಗಿದ್ದ ಬಿ.ರಾಚಯ್ಯ ಅವರನ್ನು ಟೀಕೆ ಮಾಡಿದೆ. ರೈತರಿಗಾಗಿರುವ ನಷ್ಟಕ್ಕೆ ಪಶ್ಚಾತಾಪ ಪಡಿ. ಒಂದು ದಿನವಾದರೂ ಉಪವಾಸ ಮಾಡಿ ಎಂದು ಬಿಟ್ಟಿದ್ದೆ. ಆಗ ತಾಳ್ಮೆ ಕಳೆದುಕೊಳ್ಳದ ಬಿ.ರಾಚಯ್ಯ ಹತ್ತಿ ಬೆಳೆ ನಷ್ಟದ ಕುರಿತು ನನಗೆ ವಿವರಣೆ ನೀಡಿದ್ದರು. ಬಳಿಕ ನನಗೆ ತಿಳಿದಿದ್ದೇನೆಂದರೆ ಬಿ.ರಾಚಯ್ಯ ಅವರು ಪಶ್ಚಾತಾಪಕ್ಕಾಗಿ ಉಪವಾಸ ಮಾಡಿ ಎಂದಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡು ಒಂದು ದಿನ ಪೂರ್ತಿ ಊಟ ಮಾಡಿರಲಿಲ್ಲ ಎಂದು ಹಳೆಯ ಘಟನೆಯನ್ನು ನೆನೆದರು.
ನನಗೆ ಮರುಜನ್ಮ ನೀಡಿದ್ದೇ ಸಿದ್ದರಾಮಯ್ಯ
ಶ್ರೀರಾಮನಿಗೆ 14 ವರ್ಷ ವನವಾಸವಾದರೆ ನನಗೆ 19 ವರ್ಷ ವನವಾಸ. 1 ಮತದ ಸೋಲಿನಿಂದ ವನವಾಸ ಅನುಭವಿಸುತ್ತಿದ್ದ ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮರುಜನ್ಮ ನೀಡಿದರು ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ನಮ್ಮ ತಂದೆ ಬಿ.ರಾಚಯ್ಯ ಅವರು ಸಿದ್ದರಾಮಯ್ಯ ಅವರಿಗೆ ಮಂತ್ರಿಯಾಗುತ್ತೀಯ ಎಂದಿದ್ದರು. ಉಪಕಾರ ಸ್ಮರಣೆ ಎಂದರೆ ಇದೇ ಇರಬೇಕು. ಅವರು ನನಗೆ ರಾಜಕೀಯ ಮರುಜನ್ಮ ನೀಡಿದರು. ಈ ಭವನ ಕೇವಲ ಸ್ಮಾರಕವಾಗಿ ಉಳಿಯಬಾರದು. ಅಧ್ಯಯನ ಕೇಂದ್ರವಾಗಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕೇಳಿಕೊಂಡರು.ಸ್ಮಾರಕ ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋಡೆಗಳಲ್ಲಿ ಅಳವಡಿಸಿರುವ ಬಿ.ರಾಚಯ್ಯ ಅವರ ರಾಜಕೀಯ ಹಾದಿಯ ವಿವಿಧ ಫೋಟೋಗಳನ್ನು ವೀಕ್ಷಿಸಿದರು. ಫೋಟೋಗಳ ಕುರಿತು ಶಾಸಕ ಎ.ಆರ್.ಕೃಷ್ಣಮೂರ್ತಿ ವಿವರಣೆ ನೀಡಿದರು. ಬಳಿಕ ಸಿದ್ದರಾಮಯ್ಯ ಅವರೊಂದಿಗೆ ಎ.ಆರ್.ಕೃಷ್ಣಮೂರ್ತಿ ಅವರ ಕುಟುಂಬಸ್ಥರು ಗ್ರೂಪ್ ಫೋಟೋ ತೆಗೆಸಿಕೊಂಡರು.
ರೈತ ಗೀತೆಗೆ ಅನ್ನದಾತರ ಗೌರವ
ವೇದಿಕೆ ಕಾರ್ಯಕ್ರಮದಲ್ಲಿ ನಾಡಗೀತೆ ಬಳಿಕ ರೈತ ಗೀತೆ ಹಾಡಲಾಯಿತು. ಈ ವೇಳೆ ವೇದಿಕೆ ಮುಂಭಾಗದಲ್ಲೇ ಇದ್ದ ರೈತರು ಎದ್ದು ನಿಂತು ಹಸಿರು ಶಾಲುಗಳನ್ನು ಮೇಲಕ್ಕೆತ್ತಿ ಬೀಸುತ್ತಾ ನಮನ ಸಲ್ಲಿಸಿದರು.
ತಲೆ ಮೇಲೆ ಕುರ್ಚಿ: ಸಮಾರಂಭಕ್ಕೆ ಮಳೆ ಅಡ್ಡಿಯುಂಟು ಮಾಡಿತು. ವೇದಿಕೆ ಕಾರ್ಯಕ್ರಮದಲ್ಲಿ ಹಾಕಿದ್ದ ಶಾಮಿಯಾನದ ಕೆಳಗೆ ಕುಳಿತಿದ್ದವರು ಮಳೆಯಿಂದ ನೆನೆಯುವುದನ್ನು ತಪ್ಪಿಸಿಕೊಳ್ಳಲು ತಲೆ ಮೇಲೆ ಕುರ್ಚಿ ಹಿಡಿದು ನಿಂತರು.
ಸನ್ಮಾನ: ಇದೇ ವೇಳೆ ಸಿಎಂ ಸಿದ್ದರಾಮಯ್ಯ ದಿ.ಬಿ.ರಾಚಯ್ಯ ಅವರ ಪತ್ನಿ ಗೌರಮ್ಮ ರಾಚಯ್ಯ ಅವರನ್ನು ಗೌರವಿಸಿದರು. ಬಿ.ರಾಚಯ್ಯ ಅವರ ಜೀವನ ಮತ್ತು ರಾಜನೀತಿ ಪುಸ್ತಕದ ಲೇಖಕ ಡಾ.ಎಂ.ನಂಜಯ್ಯ ಹೊಂಗನೂರು, ಅನುವಾದಕರಾದ ಡಾ.ಸಿ.ನಾಗಣ್ಣ ಮತ್ತು ಬಿ.ವಿ.ಶ್ರೀಧರ, ಸ್ಮಾರಕ ವಿನ್ಯಾಸಕ ಕಿಶೋರ್‌ಚಂದ್ರ ಅವರನ್ನು ಸನ್ಮಾನಿಸಲಾಯಿತು.
ಮಹದೇವಪ್ಪ ಪ್ರಸಂಗ
ನಾವು ಚುನಾವಣೆ ಪ್ರಚಾರದಲ್ಲಿ ಇದ್ದಾಗ ಅದ್ಯಾವುದೋ ಹಳ್ಳಿಯಲ್ಲಿ ಮಹದೇವಪ್ಪ ಕಾಣಿಸಿಕೊಂಡು ಬಿಟ್ಟ. ಆಗ ಎಂಬಿಬಿಎಸ್ ೇಲ್ ಆಗಿದ್ದ. ಬಿ.ರಾಚಯ್ಯ ಅವರು ಮಹದೇವಪ್ಪಗೆ ಭಾಷಣ ಮಾಡಲು ಅವಕಾಶ ಕೊಟ್ಟಿದ್ದರು. ಚುನಾವಣೆಯಲ್ಲಿ ಟಿಕೆಟ್ ಅನ್ನೂ ಕೊಟ್ಟರು. ಮಹದೇವಪ್ಪ ಗೆದ್ದೇ ಬಿಟ್ಟ ಎಂದು ಸಿಎಂ ಸಿದ್ದರಾಮಯ್ಯ ಹೇಳಿದಾಗ ಹಾಸ್ಯ ಉಕ್ಕಿತು.
ವೇದಿಕೆಯಲ್ಲೇ ಕುಳಿತಿದ್ದ ಸಂಸದ ಸುನೀಲ್‌ಬೋಸ್ ಕೂಡ ತನ್ನ ತಂದೆಯ ರಾಜಕೀಯ ಆರಂಭದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳುವುದನ್ನು ಕೇಳಿ ನಕ್ಕರು.
ಅಸ್ವಸ್ಥರಾದ ಗೌರಮ್ಮ ರಾಚಯ್ಯ
ವಯೋಸಹಜ ಆರೋಗ್ಯ ಸಮಸ್ಯೆಯಿಂದ ವ್ಹೀಲ್‌ಚೇರ್ ಹಿಡಿದಿರುವ ಬಿ.ರಾಚಯ್ಯ ಅವರ ಪತ್ನಿ ಗೌರಮ್ಮ ವೇದಿಕೆ ಮೇಲೆ ಕುಳಿತಿದ್ದಾಗ ಕೆಲಕಾಲ ಅಸ್ವಸ್ಥರಾದರು. ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯ ಪಕ್ಕದಲ್ಲೇ ಕುಳಿತಿದ್ದ ಅವರು ಸಚಿವ ಡಾ.ಎಚ್.ಸಿ.ಮಹದೇವಪ್ಪ ಭಾಷಣದ ವೇಳೆ ಅಸ್ವಸ್ಥರಾದಂತೆ ಕಂಡರು. ತಕ್ಷಣ ವೇದಿಕೆಯಲ್ಲಿದ್ದ ಡಾ.ತಿಮ್ಮಯ್ಯ ಮತ್ತು ಶುಶ್ರೂಷಕಿ ಗೌರಮ್ಮ ಅವರನ್ನು ಆರೈಕೆ ಮಾಡಿದರು. ಬಳಿಕ ವೇದಿಕೆಯಿಂದ ಕರೆದುಕೊಂಡು ಹೋದರು.
ಬಿ.ರಾಚಯ್ಯ ಅವರು ಬಡವರ ಪರವಾಗಿ ವಿಶೇಷ ಕಾಳಜಿ ಹೊಂದಿದ್ದರು. ನಿರ್ಗತಿಕರಿಗೆ ಜಮೀನು ಕೊಟ್ಟಿದ್ದರು. ಅವರೆಲ್ಲರೂ ಈಗ ತಮಗಾಗುತ್ತಿರುವ ತೊಂದರೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಈ ಸಮಸ್ಯೆಗಳನ್ನು ಜಿಲ್ಲಾಡಳಿತ ಬಗೆಹರಿಸಲಿದೆ.ಕೆ.ವೆಂಕಟೇಶ್, ಜಿಲ್ಲಾ ಉಸ್ತುವಾರಿ ಸಚಿವ