ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಿರಿಯ ವೈದ್ಯರಿಂದ ಪ್ರತಿಭಟನೆ

12rajesh7
Published on

ಚಾಮರಾಜನಗರ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಕಿರಿಯ ವೈದ್ಯರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಹೊರ ವಲಯದಲ್ಲಿರುವ ಚಾಮರಾಜನಗರ ವೈದ್ಯಕೀಯ ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಾಟನಾಕಾರರು ೋಷಣೆ ಕೂಗಿ, ಭಿತ್ತಿ ಪತ್ರಗಳನ್ನು ಹಿಡಿದು ಕೆಲಕಾಲ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ.ಪವನ್ ಮಾತನಾಡಿ, ಹಲವು ವರ್ಷಗಳಿಂದ ಸಿಮ್ಸ್‌ನಲ್ಲಿ ಕಿರಿಯ ವೈದ್ಯರಾಗಿ ಹಾಗೂ ನಿವಾಸಿ ವೈದ್ಯರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ವೈದ್ಯರಿಗೆ ಸಕಾಲಕ್ಕೆ ಸರಿಯಾಗಿ ವೇತನವನ್ನು ನೀಡುತ್ತಿಲ್ಲ ಹಾಗೂ ವೇತನವನ್ನು ಹೆಚ್ಚಳ ಮಾಡುತ್ತಿಲ್ಲ. ಇದರಿಂದಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಕಿರಿಯ ವೈದ್ಯರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.

ಕರ್ನಾಟಕ ನಿವಾಸಿ ವೈದ್ಯರ ಸಂಘದ ಪರವಾಗಿ ವೈದ್ಯರ ಸಮುದಾಯದ ಪರವಾಗಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಲಿಕಿತ ರೂಪದಲ್ಲಿ ಮನವಿ ಸಲ್ಲಿಸಲಾಗಿದೆ. ಇದೀಗ ಶಾಂತಿಯುತ ಪ್ರತಿಭಟನೆಯ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ. ಈ ಮೂಲಕ ನಮ್ಮ ಆರ್ಥಿಕ ಬಿಕ್ಕಟ್ಟು ಹಾಗೂ ಹಲವು ಸಮಸ್ಯೆಗಳು ಸರ್ಕಾರಕ್ಕೆ ಮನವರಿಕೆ ಮಾಡಿದ್ದೇವೆ ಎಂದು ಹೇಳಿದರು. ಕಿರಿಯ ವೈದ್ಯರು ಪ್ರತಿಭಟಿಸುತ್ತಿರುವ ಈ ಅವಧಿಯಲ್ಲಿ ಸಿಮ್ಸ್ ಆಡಳಿತ ಮಂಡಳಿ ತಮ್ಮ ಸಂಪೂರ್ಣ ಬೆಂಬಲವನ್ನು ನೀಡಬೇಕು. ತೀರಾ ಅಗತ್ಯ ಸಂದರ್ಭದಲ್ಲಿ ವೈದ್ಯಕೀಯ ಸೇವೆಯನ್ನು ನೀಡುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಡಾ.ಸ್ನೇಹ, ಡಾ. ನಂದಕೀಶೋರ್, ಡಾ. ತರುಣ್, ಡಾ.ದೀಪಾಮಿಶ್ರ, ಡಾ.ಚೇತನ್, ಡಾ.ಗೌತಮ್, ಡಾ.ಸಂಜು ಹಾಗೂ ಇನ್ನಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net