ಕಾಡುಪ್ರಾಣಿಗೆ ಕೋಡ್‌ವರ್ಡ್ ಇಟ್ಟು ಸಾಗಾಣಿಕೆ ದಂಧೆ

067
Published on

ಕೊಳ್ಳೇಗಾಲ:ನಮ್ಮ ಬಳಿ ಸಿಗರೇಟ್, ಸ್ಟಾರ್, ಗ್ರೀಸ್, ಡಬಲ್ ಇಂಜಿನ್, ಬೆಡ್‌ಶೀಟ್ ಇದೆ. ನಿಮ್ಮ ಹತ್ತಿರ ಲಿಕ್ವಿಡ್ ಎಷ್ಟಿದೆ..?

ಇದು ಕೊಳ್ಳೇಗಾಲದ ಮಾರ್ಗದಲ್ಲಿ ಅಳಿವಿನಂಚಿನಲ್ಲಿರುವ ಕಾಡುಪ್ರಾಣಿಗಳು ಮತ್ತು ಇವುಗಳ ದೇಹದ ಭಾಗಗಳನ್ನು ಸಾಗಾಣಿಕೆ ಮಾಡುವಾಗ ಅರಣ್ಯ ಸಂಚಾರಿ ದಳಕ್ಕೆ ಸಿಕ್ಕಿಬಿದ್ದ ದಂಧೆಕೋರರ ಕೋಡ್‌ವರ್ಡ್‌ಗಳು.

ಈ ಜಾಲಕ್ಕೆ ಜಾಲತಾಣವೇ ವೇದಿಕೆ. ವಾಟ್ಸಾಪ್ ವ್ಯವಹಾರ ಕುದುರಿಸುವ ಸಂಪರ್ಕ ಸೇತುವೆ. ಕಳ್ಳದಂಧೆ ಯಾರಿಗೂ ತಿಳಿಯಬಾರದೆಂದು ಬೇರೆ ಪದ ಬಳಸುತ್ತಿದ್ದಾರೆ. ತಮ್ಮ ಬಳಿ ಆನೆ ದಂತ ಇದ್ದರೆ ಸಿಗರೇಟ್ ಇದೆ ಎಂದು ಮೆಸೇಜ್ ಮಾಡುತ್ತಾರೆ. ಡಬಲ್‌ಇಂಜಿನ್ ಅಂದರೆ ಎರಡು ಮಣ್ಣು ಮುಕ್ಕ ಹಾವು. ಸ್ಟಾರ್ ಅಂದರೆ ನಕ್ಷತ್ರ ಆಮೆ, ಬೆಡ್‌ಶೀಟ್ ಅಂದರೆ ಪ್ರಾಣಿಗಳ ಚರ್ಮ, ಗ್ರೀಸ್ ಅಂದರೆ ತಿಮಿಂಗಿಲದ ವಾಂತಿ(ಅಂಬರ್‌ಗ್ರೀಸ್). ಇನ್ನು ಮುಖ್ಯವಾದದ್ದು ಕಿಲ್ವಿಡ್. ಇದೇನು ಗೊತ್ತಾ ಹಣ.!

ಕೊಳ್ಳೇಗಾಲದಲ್ಲಿ ಅರಣ್ಯ ಸಂಚಾರಿದಳ ಪೊಲೀಸರು ಸಕ್ರಿಯವಾಗಿದ್ದಾರೆ. ಈ ದಂಧೆ ನಡೆಸಿ ಕೋಟಿಗಟ್ಟಲೆ ಹಣ ಮಾಡಲು ಕೊಳ್ಳೇಗಾಲ ಮಾರ್ಗಕ್ಕೆ ಕಾಲಿಟ್ಟವರ ಹೆಡೆಮುರಿ ಕಟ್ಟುತ್ತಿದ್ದಾರೆ.
ಆರೋಪಿಗಳ ವಿಚಾರಣೆ ವೇಳೆ ಒಳ್ಳೆಯದಕ್ಕೆ ಬಳಕೆಯಾಗಬೇಕಿದ್ದ ವಾಟ್ಸಾಪ್‌ಗಳಲ್ಲೇ ದಂಧೆಯ ಸಂದೇಶ ರವಾನೆಯಾಗುತ್ತಿರುವುದು, ಕಾಡುಪ್ರಾಣಿಗಳು ಮತ್ತು ದೇಹದ ಭಾಗಗಳ ಮಾರಾಟ ಮಾಡುವಾಗ ಯಾರಿಗೂ ಗೊತ್ತಾಗದಿರಲು ಕೋಡ್‌ವರ್ಡ್ ಬಳಸುತ್ತಿರುವ ಮಾಹಿತಿ ಸಿಕ್ಕಿದೆ.

ವನ್ಯಜೀವಿ, ಅರಣ್ಯ ಪ್ರದೇಶವಿರುವ ಕೊಳ್ಳೇಗಾಲ ಬೆಂಗಳೂರು, ತಮಿಳುನಾಡು, ಗುಂಡ್ಲುಪೇಟೆ ಮೂಲಕ ಕೇರಳಗೂ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ಇಲ್ಲಿ ಕಾಡುಪ್ರಾಣಿಗಳ ಕಳ್ಳಬೇಟೆ, ಸಾಗಾಣಿಕೆ ಉಸಿರಾಡುತ್ತಿದೆ. ಕಳೆದ 7 ತಿಂಗಳಲ್ಲಿ ಕಾಡುಪ್ರಾಣಿಗಳು ಮತ್ತು ಚರ್ಮ, ಉಗುರು ಸಾಗಾಣೆಕೆ ಮಾಡಿದ್ದ 14 ಪ್ರಕರಣಗಳು ಬಯಲಿಗೆ ಬಂದಿವೆ.

ವಿದೇಶದವರೆಗೂ ಇದೆ ಲಿಂಕ್:
ಕೊಳ್ಳೇಗಾಲ ಮಾರ್ಗದಲ್ಲಿ ಸಾಗಾಣಿಕೆಯಾಗುತ್ತಿರುವ ಮಾಲು ವಿದೇಶ ತಲುಪುತ್ತಿದೆ. ಪ್ರಮುಖವಾಗಿ ತಿಮಿಂಗಿಲದ ವಾಂತಿ(ಅಂಬರ್‌ಗ್ರೀಸ್) ಕೊಳ್ಳೇಗಾಲದ ಮಾರ್ಗವಾಗಿ ತಮಿಳುನಾಡು, ಕೇರಳ ಮೂಲಕ ವಿದೇಶಕ್ಕೆ ತಲುಪುತ್ತಿರುವ ಮಾಹಿತಿ ಅರಣ್ಯ ಸಂಚಾರ ದಳಕ್ಕೆ ಸಿಕ್ಕಿದೆ. ಕಳೆದ 5 ತಿಂಗಳಲ್ಲಿ ಅಂಬರ್ ಗ್ರೀಸ್ ಸಾಗಿಸುತ್ತಿದ್ದ ಎರಡು ಪ್ರಕರಣಗಳು ವರದಿಯಾಗಿವೆ.
ಇದಿಷ್ಟೇ ಅಲ್ಲದೇ, ಗೂಬೆ, ನಕ್ಷತ್ರ ಆಮೆಗಳು, ಕಾಡುಪಾಪಗಳು, ಹುಲಿಗಳ 40 ಉಗುರು, 2 ದವಡೆ ಹಲ್ಲುಗಳು, ಮಣ್ಣುಮುಕ್ಕ ಹಾವು, ಜಿಂಕೆಯ ಕೊಂಬು, ಚರ್ಮ, ತಲೆ ಬುರಡೆ ಸಾಗಾಣಿಕೆ ವೇಳೆ ಸಿಕ್ಕಿವೆ. ಜೂ.28 ರಂದು ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ 284 ಕೆಜಿ ತೂಕದ 14 ರಕ್ತ ಚಂದನ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಮೂವರನ್ನು ಮಾಲು ಸಮೇತ ಹಿಡಿಯಲಾಗಿತ್ತು. ಕೇರಳ, ಮೈಸೂರು, ರಾಯಚೂರು, ಚಿಕ್ಕಮಂಗಳೂರು, ಮಂಡ್ಯ, ಬೆಂಗಳೂರು ಮೂಲದವರು, ಸ್ಥಳೀಯರು ಸೆರೆ ಸಿಕ್ಕಿದ್ದಾರೆ. ಎಲ್ಲೋ ಕುಳಿತು ಇದನ್ನೆಲ್ಲಾ ನಡೆಸುತ್ತಿರುವ ಕಾಣದ ಕೈಗಳಿಗೆ ಕೋಳ ಬೀಳಬೇಕಿದೆ.

ವಾಮಾಚಾರಕ್ಕೂ ಬಳಕೆ:
ಮಾಟ-ಮಂತ್ರಕ್ಕೆ ಹೆಸರಾಗಿದ್ದ ಕೊಳ್ಳೇಗಾಲದಲ್ಲಿ ಕಾಡುಪ್ರಾಣಿಗಳನ್ನು ಬಳಕೆ ಮಾಡಿಕೊಂಡು ವಾಮಾಚಾರ ಮಾಡುವ ಕೃತ್ಯಗಳೂ ನಡೆಯುತ್ತಿವೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಳಿವಿನಂಚಿನಲ್ಲಿರುವ 2 ಕಾಡುಪಾಪ ಮತ್ತು ಗೂಬೆಯನ್ನು ಸಾಗಾಣಿಕೆ ಮಾಡುತ್ತಿದ್ದವರು ಸೆರೆ ಸಿಕ್ಕಿ ಈ ವಿಷಯವನ್ನು ಬಾಯಿ ಬಿಟ್ಟಿದ್ದರು.

ಕಳೆದ 7 ತಿಂಗಳಲ್ಲಿ ಅಕ್ರಮ ಕಳ್ಳಸಾಗಣಿಗೆ ಸಂಬಂದ ವಿವಿಧ ರೀತಿಯ 14 ಪ್ರಕರಣಗಳಾಗಿದೆ. ನಕ್ಷತ್ರ ಆಮೆ, ಗೂಬೆ, ಕಾಡು ಪಾಪ ವಾಮಾಚರಕ್ಕೆ ಬಳಕೆ ಆಗುತ್ತದೆ. ಕಾಡು ಪ್ರಾಣಿ-ಪಕ್ಷಿಗಳು ಸಾಗಾಣೆ, ಸ್ಮಗ್ಲಿಂಗ್ ಪ್ರಕರಣ ಬಗ್ಗೆ ನಿಗಾವಹಿಸಿದ್ದೇವೆ. ಆಂಬರ್ ಗ್ರೀಸ್ ಕೇರಳ, ಚೈನೈ ಕಡೆಗಳಿಂದ ವಿದೇಶ ಸೇರುತ್ತಿದೆ ಎಂಬ ಮಾಹಿತಿ ಇದೆ. ಅಕ್ರಮವಾಗಿ ಹಣ ಸಂಪಾದನೆ ಸ್ಥಳೀಯರು ಇದಕ್ಕೆ ಸಾಥ್ ನೀಡುತ್ತಾರೆ. ಬೇರೆ ಬೇರೆ ಆಯಾಮಗಳಲ್ಲಿ ಕಾರ್ಯಾಚರಣೆ ಮಾಡಿ ದಂಧೆಕೋರರನ್ನು ಹಿಡಿಯುತ್ತಿದ್ದೇವೆ.-ವಿಜಯರಾಜ್, ಪಿಎಸ್‌ಐ, ಅರಣ್ಯ ಸಂಚಾರಿ ಪೊಲೀಸ್, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net