ವಾರ್ಡ್‌ಗಳ ದಿಢೀರ್ ಅಭಿವೃದ್ಧಿ

Published on

ಚಾಮರಾಜನಗರ: ರಸ್ತೆಗಳು ಹಾಳಾಗಿದೆ, ಚರಂಡಿಗಳಲ್ಲಿ ಹೂಳು ತುಂಬಿದೆ, ಎಲ್ಲೆಂದರಲ್ಲಿ ಕಸ ಬಿದ್ದಿದೆ ಎಂದು ಸಾರ್ವಜನಿಕರು ಮಾಡುತ್ತಿದ್ದ ಸಾಲು ಸಾಲು ಮನವಿಗೆ ಎಚ್ಚೆತ್ತುಕೊಳ್ಳದ ನಗರಸಭೆ, ಈಗ ಮುಖ್ಯಮಂತ್ರಿ ಆಗಮನಕ್ಕೆ ರಸ್ತೆಗೆ ತೇಪೆಹಾಕಿ, ಚರಂಡಿಗಳನ್ನು ಸ್ವಚ್ಛಗೊಳಿಸಲು ಮುಂದಾಗಿದೆ.

ನಗರದ 10 ಮತ್ತು 26ನೇ ವಾರ್ಡ್ ನಿವಾಸಿಗಳು ರಸ್ತೆ ಅಭಿವೃದ್ಧಿ, ಕಸ ವಿಲೇವಾರಿ, ಕುಡಿಯುವ ನೀರು ಸರಬರಾಜು ಹಾಗೂ ಇನ್ನಿತರ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇತ್ತೀಚೆಗೆ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ವಾರ್ಡ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ನಗರಸಭೆ ಅಧಿಕಾರಿಗಳಿಗೆ ಹಲವು ಸೂಚನೆ ಸಲಹೆಗಳನ್ನು ನೀಡಿದ್ದರು. ಹಾಗಿದ್ದರೂ 10 ಮತ್ತು 26ನೇ ವಾರ್ಡ್‌ಗಳಲ್ಲಿ ರಸ್ತೆ ದುರಸ್ತಿ, ಚರಂಡಿಗಳನ್ನು ಸ್ವಚ್ಛಗೊಳಿಸುವುದು ಹಾಗೂ ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡುವುದಕ್ಕೆ ನಗರಸಭೆ ಅಧಿಕಾರಿಗಳು ಮುಂದಾಗಿರಲಿಲ್ಲ. ನಗರಸಭೆಯ ಆರೋಗ್ಯ ನಿರೀಕ್ಷಕರು ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರಲಿಲ್ಲ. ಈ ಕುರಿತು ವಾರ್ಡ್‌ಗಳ ನಿವಾಸಿಗಳು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಆದರೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.10ರಂದು ನಗರಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ನಗರದ ಯಾವ ಭಾಗದಲ್ಲೂ ಕಾಣದ ಬದಲಾವಣೆ 10 ಮತ್ತು 26ನೇ ವಾರ್ಡ್‌ಗಳಲ್ಲಿ ಆಗುತ್ತಿದೆ. ತರಾತುರಿಯಲ್ಲಿ ರಸ್ತೆಗೆ ತೇಪೆ ಹಾಕುವ ಕೆಲಸ, ಚರಂಡಿಗಳನ್ನು ಸ್ವಚ್ಛಗೊಳಿಸುವುದು, ರಸ್ತೆ ಬದಿಯಲ್ಲಿರುವ ಮರದ ಕೊಂಬೆಗಳನ್ನು ತೆರವು ಹಾಗೂ ಕಸ ವಿಲೇವಾರಿ ಮಾಡುವುದು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ 10 ಮತ್ತು 26ನೇ ವಾರ್ಡ್ ನಿವಾಸಿಗಳ ನಗರಸಭೆ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ವಾರ್ಡ್‌ಗಳ ರಸ್ತೆ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಲೇ ಬರಬೇಕಾಯಿತೇ ಎಂದು ವ್ಯಂಗ್ಯವಾಡಿದ್ದಾರೆ.

ಶಾಸಕರ ಮನೆವರೆಗೆ ಡಾಂಬರ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಆ.10ರಂದು ಚಾಮರಾಜನಗರಕ್ಕೆ ಆಗಮಿಸುತ್ತಿದ್ದು, ನಗರದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದ ಸಮೀಪದಲ್ಲಿರುವ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿ.ರಾಚಯ್ಯ ಜೋಡಿ ರಸ್ತೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನ ಮಾರ್ಗವಾಗಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಮನೆಯವರೆಗೆ ಮಾತ್ರ ರಸ್ತೆಗೆ ಡಾಂಬರ್ ಹಾಕಲಾಗುತ್ತಿದೆ. ಈ ರಸ್ತೆಯ ಬದಿ ಹಾಗೂ ಚರಂಡಿಗಳನ್ನು ಮಾತ್ರ ಸ್ವಚ್ಛಗೊಳಿಸಲಾಗುತ್ತಿದೆ. ನಗರಸಭೆ ಅಧಿಕಾರಿಗಳ ಈ ಕಾರ್ಯ ಕೈಗೊಂಡಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಗೆ ಸಿಎಂ ಭೇಟಿ ನೀಡುತ್ತಾರೆ ಅಂದಾಗ ಅವರು ಬರುವ ರಸ್ತೆ ಅಭಿವೃದ್ಧಿಪಡಿಸುವುದು ಸ್ಥಳೀಯ ಆಡಳಿತದ ಕರ್ತವ್ಯವಾಗಿದೆ. 10 ಮತ್ತು 26ನೇ ವಾರ್ಡ್ ಎಲ್ಲ ರಸ್ತೆಗಳ ಅಭಿವೃದ್ಧಿಗೂ ನಗರಸಭೆ ಮುಂದಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳುತ್ತೇವೆ.ರಾಮದಾಸ್, ಪೌರಾಯುಕ್ತ, ನಗರಸಭೆ, ಚಾಮರಾಜನಗರ ಸುಮಾರು 2-3 ವರ್ಷಗಳಿಂದಲೂ 10 ಮತ್ತು 26ನೇ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ಮತ್ತು ಸೂಕ್ತ ಕಸವಿಲೇವಾರಿ ಮಾಡುವಂತೆ ನಗರಸಭೆಗೆ ಒತ್ತಾಯ ಮಾಡುತ್ತ ಬರಲಾಗಿದೆ. ಆದರೆ ಮುಖ್ಯಮಂತ್ರಿಗಳು ಬರುತ್ತಾರೆಂದು ಶಾಸಕರ ಮನೆವರೆಗೆ ರಸ್ತೆಗೆ ಡಾಂಬರು ಹಾಕಲಾಗುತ್ತಿದೆ. ರಸ್ತೆ, ಚರಂಡಿ ಅಭಿವೃದ್ಧಿಗೆ ಸಿಎಂ ಬರಬೇಕಾಯಿತು.ಶ್ರೀನಿವಾಸ್, 26ನೇ ವಾರ್ಡ್ ನಿವಾಸಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net