ಕಾಡಂಚಿನ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಿ

08rajesh2
Published on

ಚಾಮರಾಜನಗರ:ಹನೂರು ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಹಲವು ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಗುರುವಾರ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೋಟಿಂಗ್ ಅಧ್ಯಕ್ಷ ರತ್ನವೇಲು ಆಲಂಬಾಡಿ ಮಾತನಾಡಿ, ಹನೂರು ತಾಲೂಕಿನ ಆಲಂಬಾಡಿ, ಮಾರಿಕೊಟ್ಟಾಯಿ, ಜಂಬೂಕಪಟ್ಟಿ, ಅಪ್ಪಂಪಟ್ಟಿ, ತೇಂಗಾಕೊಂಬು ಹಾಗೂ ಪೂಂಗೋಂಬು ಗ್ರಾಮಗಳಲ್ಲಿ ಸುಮಾರು 450 ಮನೆಗಳಿದ್ದು, ಇದರಲ್ಲಿ 100 ಕುಟುಂಬಗಳು ಪರಿಶಿಷ್ಟ ಪಂಗಡ ಹಾಗೂ 35 ಕುಟುಂಬಗಳು ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರಾಗಿವೆ. ಸುಮಾರು 70-80 ವರ್ಷಗಳಿಂದ ಇವರು ಇದೇ ಪ್ರದೇಶದಲ್ಲಿ ನೆಲೆಸಿದ್ದು ವ್ಯವಸಾಯವನ್ನು ಜೀವನೋಪಾಯಕ್ಕಾಗಿ ಅವಲಂಬಿಸಿರುತ್ತೇವೆ ಎಂದರು.

ನಮ್ಮ ಹಿರಿಯರು ಅನಕ್ಷರಸ್ಥರಾಗಿದ್ದ ಕಾರಣದಿಂದಾಗಿ ಗ್ರಾಮಕ್ಕೆ ಸಂಬಂಧಪಟ್ಟಂತೆ ಯಾವುದೇ ದಾಖಲೆಗಳನ್ನು ಮಾಡಿಸಿಕೊಂಡಿರುವುದಿಲ್ಲ. ಆದ್ದರಿಂದ ಅರಣ್ಯ ಪ್ರದೇಶ ಒತ್ತುವರಿ ಪ್ರಕರಣ ನಮ್ಮ ಮೇಲೆ ದಾಖಲಾಗಿರುತ್ತದೆ. ಅರಣ್ಯ ಕಾಯ್ದೆಗಳಿಂದ ನಮಗೆ ಸಿಗಬೇಕಾಗ ಮೂಲಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಕರ್ಯಗಳು ಸಿಗದೆ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದೇವೆ.
ಗೋಪಿನಾಥಂ ವಲಯ ಅರಣ್ಯಾಧಿಕಾರಿಗಳು ನಮ್ಮ ಗ್ರಾಮದ ಜಮೀನುಗಳನ್ನು ತೆರವುಗೊಳಿಸಲು ನೋಟಿಸ್ ನೀಡುತ್ತಿದ್ದು, ಕೆಲವೇ ದಿನಗಳಲ್ಲಿ ಜಮೀನು ಹಾಗೂ ಮನೆಗಳನ್ನು ಬಿಟ್ಟುಕೊಡಲು ತಿಳಿಸಿರುತ್ತಾರೆ. ನಮ್ಮನ್ನು ಇತರೆ ಪಾರಂಪರಿಕ ಅರಣ್ಯವಾಸಿಗಳೆಂದು ಪರಿಗಣಿಸಿ ವಾಸಿಸಲು ಹಕ್ಕುಪತ್ರ ನೀಡಲು ಹಾಗೂ ಮೂಲಸೌಕರ್ಯ ಒದಗಿಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪೆರುಮಾಳ್, ಪಳನಿಸ್ವಾಮಿ, ಮಾದಯ್ಯ, ತಂಗವೇಲು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net