ಚಾಮರಾಜನಗರ: ಮೌಲ್ಯಾಧಾರಿತ ರಾಜಕಾರಣವನ್ನು ಬೆಂಬಲಿಸಿ ಆ.9ರಂದು ಮೈಸೂರಿನಲ್ಲಿ ಜನಾಂದೋಲನ ನಡೆಯಲಿದೆ ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ದಕ್ಷತೆ, ಪ್ರಾಮಾಣಿಕತೆಗೆ ಹೆಸರಾದವರು. ಜನಪರ ಕಾರ್ಯ, ದೀನದಲಿತರ ನಾಯಕನ ವಿರುದ್ಧ ಬಿಜೆಪಿ, ಜೆಡಿಎಸ್‌ನವರು ಇಲ್ಲಸಲ್ಲದ ಆರೋಪ ಮಾಡಿ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಉತ್ತರ ನೀಡಬೇಕೆಂದು ಪಕ್ಷದ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನಾಂದೋಲನ ರೂಪಿಸಿದ್ದಾರೆ. ಆ.9ರ ಜನಾಂದೋಲನದಲ್ಲಿ ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ, ಹಾಸನ ಜಿಲ್ಲೆಗಳ ಕಾರ್ಯಕರ್ತರು ಭಾಗವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯಪಾಲರು ಸೂಕ್ಷ್ಮವಿಚಾರವನ್ನು ತಿಳಿದುಕೊಂಡು ಮುಂದುವರೆಯಬೇಕಿತ್ತು. ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ನಾಯಕತ್ವದ ಹಗ್ಗ-ಜಗ್ಗಾಟ ನಡೆಯುತ್ತಿದೆ. ಯತ್ನಾಳ್ ಭಾಗವಹಿಸಿಲ್ಲ. ಗುಂಪುಗಾರಿಕೆ ಎದ್ದು ಕಾಣುತ್ತಿದೆ ಎಂದರು.
ತಾಲೂಕಿನ ಆಲೂರು ಗ್ರಾಮದಲ್ಲಿ ತಂದೆಯವರಾದ, ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಸ್ಮಾರಕ ಉದ್ಘಾಟನೆ ಆ.10ರಂದು ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮಾರಕ ಉದ್ಘಾಟನೆ ಮಾಡುವರು. ಉಪಕಾರ ಸ್ಮರಣೆ ರಾಜಕಾರಣ ಉಳಿಯಲು ಸಿದ್ದರಾಮಯ್ಯ ಕಾರಣ. ಅವರು ಸಿಎಂ ಆಗಿದ್ದ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಈಗ ಸಿಎಂ ಆಗಿರುವಾಗ ಉದ್ಘಾಟನೆ ಮಾಡುತ್ತಿದ್ದಾರೆ. ಅಂದಾಜು 5 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣವಾಗಿದೆ ಎಂದು ಮಾಹಿತಿ ನೀಡಿದರು.
ಕಾಡಾ ಅಧ್ಯಕ್ಷ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಬಿಜೆಪಿ-ಜೆಡಿಎಸ್ ಇಲ್ಲಸಲ್ಲದ ಆರೋಪ ಮಾಡಿ ಪಾದಯಾತ್ರೆ ಮಾಡುತ್ತಿವೆ. ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿಯಾಗಿ ಯಾವುದೇ ಕಪ್ಪುಚುಕ್ಕಿ ಇಲ್ಲದದೆ 5 ವರ್ಷಗಳ ಕಾಲ ಆಡಳಿತ ನೀಡಿದ್ದರು. ಈಗ ಸಿಎಂ ಆಗಿ ಕೊಟ್ಟ ಮಾತಿನಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರು. ಇದನ್ನು ಸಹಿಸದೆ ಹಗರಣದ ಆರೋಪ ಮಾಡಲಾಗುತ್ತಿದೆ ಎಂದು ದೂರಿದರು.
ಮುಡಾ ಸೈಟ್ ಅನ್ನು ಬಿಟ್ಟಿಯಾಗಿ ಕೊಟ್ಟಿಲ್ಲ. 50:50 ಅನುಪಾತದಂತೆ ಸರ್ಕಾರದ ನಿಯಮಾವಳಿಯಂತೆ ಸೈಟ್ ನೀಡಲಾಗಿದೆ. ಇಂತಹ ಕಡೆಯೇ ನಿವೇಶನ ನೀಡಿ ಎಂದು ಅವರೂ ಕೇಳಿಕೊಂಡಿರಲಿಲ್ಲ. ಆಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರೇ ವಿನಃ ಸಿದ್ದರಾಮಯ್ಯ ಸಿಎಂ ಆಗಿರಲಿಲ್ಲ. ಈ ಪಾದಯಾತ್ರೆ ಮಾಡುತ್ತಿರುವವರು ಒಂದಲ್ಲಾ ಒಂದು ವಿಚಾರದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ರಾಜ್ಯಪಾಲರು ಕೈಗೊಂಬೆ ರೀತಿ ವರ್ತನೆ ಮಾಡುತ್ತಿದ್ದಾರೆ. ಆ.9ಂದ ಜನಾಂದೋಲನದಲ್ಲಿ 20 ಸಾವಿರ ಜನರು ಭಾಗವಹಿಸುವರು ಎಂದರು.
ಗೋಷ್ಠಿಯಲ್ಲಿ ಯಳಂದೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೊಂಗನೂರು ಚಂದ್ರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸದಾಶಿವಮೂರ್ತಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್(ಮುನ್ನ), ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಮಾಜಿ ಅಧ್ಯಕ್ಷ ಎಸ್‌ಪಿಕೆ ಉಮೇಶ್, ಕಾಂಗ್ರೆಸ್ ಮುಖಂಡರಾದ ಚಿಕ್ಕಮಹದೇವ್, ಗೌಡಹಳ್ಳಿ ರಾಜೇಶ್ ಇದ್ದರು.