ಜಿಲ್ಲೆಯ ಎರಡು ಕಾರ್ಯಕ್ರಮಗಳಲ್ಲಿ ಸಿಎಂ ಭಾಗಿ

08rajesh1
Published on

ಚಾಮರಾಜನಗರ: ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಸ್ಮಾರಕ ಭವನ ಉದ್ಘಾಟನೆ ಹಾಗೂ ಕೊಳ್ಳೇಗಾಲದ ಭರಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮಾಹಿತಿ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲೂಕಿನ ಆಲೂರು ಗ್ರಾಮದ ಬಿ.ರಾಚಯ್ಯ ಚಿರಶಾಂತಿ ಧಾಮದಲ್ಲಿ ಆ.10 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಸ್ಮಾರಕ ಉದ್ಘಾಟನೆಯನ್ನು ಸಿಎಂ ಸಿದ್ದರಾಮಯ್ಯ ನೆರವೇರಿಸುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜ್ಯೋತಿ ಬೆಳಗಿಸುವರು. ಪಶುಸಂಗೋಪನೆ, ರೇಷ್ಮೆ ಮತ್ತು ಜಿಲ್ಲಾ ಉಸ್ತವಾರಿ ಸಚಿವ ಕೆ.ವೆಂಕಟೇಶ್ ಪುಷ್ಪಾರ್ಚನೆ ನೆರವೇರಿಸುವರು. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಬಿ.ರಾಚಯ್ಯ ಕುರಿತಾದ ಲೈಪ್ ಅಂಡ್ ಪಾಲಿಟಿಕ್ಸ್ ಕೃತಿಯನ್ನು ಬಿಡುಗಡೆ ಮಾಡುವರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಉಪಸ್ಥಿತರಿರುವರು. ಎಂಎಸ್‌ಐಎಲ್ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿ.ರಾಚಯ್ಯ ಅವರ ಪತ್ನಿ ಗೌರಮ್ಮ ಬಿ.ರಾಚಯ್ಯ ಅವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ. ಸ್ಮಾರಕದ ವಿನ್ಯಾಸಕ ಕಿಶೋರ್‌ಚಂದ್ರ, ಬಿ.ರಾಚಯ್ಯ ಜೀವನ ಮತ್ತು ರಾಜನೀತಿ ಪುಸ್ತಕದ ಲೇಖಕ ಡಾ.ಎಂ.ನಂಜಯ್ಯ ಹೊಂಗನೂರು, ಅನುವಾದಕ ಡಾ.ಸಿ.ನಾಗಣ್ಣ ಹಾಗೂ ಬಿ.ವಿ.ಶ್ರೀಧರ್ ಅವರನ್ನು ಸನ್ಮಾನಿಸಲಾಗುವುದು. ರೈತರಿಗೆ ಸಹಜ ಬೇಸಾಯ ಪದ್ಧತಿ ಅಳವಡಿಕೆ ಉತ್ತೇಜಿಸುವ ನಿಟ್ಟಿನಲ್ಲಿ ಸಹಜ ಬೇಸಾಯ ಪದ್ಧತಿ ಲೋಗೋ ಅನಾವರಣಗೊಳಿಸಲಾಗುವುದು. ಇದೇ ವೇಳೆ ಬಿ.ರಾಚಯ್ಯ ಜೀವನ ಸಾಧನೆ ಕುರಿತು ಅಪರೂಪದ ಛಾಯಾಚಿತ್ರ ಪ್ರದರ್ಶನ ಇರಲಿದೆ ಎಂದರು. ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಮೋನಾ ರೋತ್ ಹಾಜರಿದ್ದರು.

ಜಲಪಾತೋತ್ಸವಕ್ಕೆ ಚಾಲನೆ:
ಕೊಳ್ಳೇಗಾಲ ತಾಲೂಕಿನ ಭರಚುಕ್ಕಿಯಲ್ಲಿ ನಡೆಯಲಿರುವ 2 ದಿನಗಳ ಭರಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಆ.10 ಸಂಜೆ 5 ಗಂಟೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ವಿದ್ಯುತ್ ದೀಪಾಲಂಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಹಲವು ಸಚಿವರು, ಶಾಸಕರು, ಲೋಕಸಭಾ ಸದಸ್ಯರು ಹಾಗೂ ಇನ್ನಿತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಭರಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 50 ಲಕ್ಷ ರೂ. ಅನುದಾನ ನೀಡಿದೆ. ಕಾರ್ಯಕ್ರಮದಲ್ಲಿ ಸುಮಾರು 4 ಸಾವಿರ ಆಸನ ವ್ಯವಸ್ಥೆ ಮಾಡಲಿದ್ದು, ಎರಡು ದಿನಗಳ ಕಾಲ ಆಕರ್ಷಕ ದೀಪಾಲಂಕಾರವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮಗಳಿಗೆ ಸೂಕ್ತ ಭದ್ರತೆ:
ಸಿಎಂ ಸಿದ್ದರಾಮಯ್ಯ ಭಾಗವಹಿಸಲಿರುವ ಎರಡು ಕಾರ್ಯಕ್ರಮಗಳಿಗೂ ಸೂಕ್ತ ಭದ್ರತೆ ಹಾಗೂ ಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ತಿಳಿಸಿದರು. ಬಿ.ರಾಚಯ್ಯ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದ ಸಮೀಪದಲ್ಲೇ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಂದು ದೊಡ್ಡರಾಯಪೇಟೆ ಮತ್ತು ಕಾಗಲವಾಡಿ ಗ್ರಾಮಗಳಿಂದ ಕಾರ್ಯಕ್ರಮಕ್ಕೆ ಹೋಗುವವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ನಗರಕ್ಕೆ ಸಂಚರಿಸುವವರು ಚಂದಕವಾಡಿ ಮಾರ್ಗವಾಗಿ ಸಾಗಬೇಕಿದೆ. ಭರಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಶಿವನಸಮುದ್ರ ದರ್ಗಾದ ಬಳಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಉಚಿತ ಸಾರಿಗೆಬಸ್ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಸ್ಥಳಕ್ಕೆ ವಿಐಪಿಗಳ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net