

ಚಾಮರಾಜನಗರ: ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅಭಿಪ್ರಾಯಪಟ್ಟರು.
ನಗರದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮತ್ತು ಆಸರೆ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವ್ಯಕ್ತಿತ್ವ ಬೆಳವಣಿಗೆ ಮತ್ತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸೂಕ್ತ ಕಾನೂನಿನ ಜ್ಞಾನ ಇದ್ದರೆ ಯೋಗ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಎಲ್ಲರೂ ಪರಿಪೂರ್ಣವಾದ ಕಾನೂನಿನ ಅರಿವು ಹೊಂದಲು ಸಾಧ್ಯವಿಲ್ಲ. ಆದರೂ ದಿನನಿತ್ಯದ ಅವಶ್ಯಕತೆಗಾಗಿ ಕೆಲವು ಕಾನೂನು ವಿಷಯಗಳನ್ನು ತಿಳಿಯಬೇಕಾಗಿರುವುದು ಅವಶ್ಯಕ. ಕಾನೂನಿನ ವಿರುದ್ಧ ಮಾಡುವ ಚಟುವಟಿಕೆಗೆ ಕ್ಷಮೆ ಇರುವುದಿಲ್ಲ. ಕಾನೂನು ನಿಮ್ಮ ರಕ್ಷಣೆಗಾಗಿ ಇರುವುದರಿಂದ ಕಾನೂನಿಗೆ ಯಾರೂ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ದಾನೇಶ್ವರಿ ಮಾತನಾಡಿ, ಪ್ರಸ್ತುತ ಯುವ ಜನಾಂಗ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಶಿಕ್ಷಣ ಉದ್ಯೋಗ ನೀಡುತ್ತದೆ. ನಮಗಾಗಿ, ಸಮಾಜಕ್ಕಾಗಿ ದುಡಿಯುವ ಮೂಲಕ ಸಮಾಜಸೇವೆ ಮಾಡುವ ಛಲವಿದ್ದರೆ ಮಾತ್ರ ಸಮಾಜದಲ್ಲಿ ಸುಸಂಸ್ಕೃತ ವಾತಾವರಣ ಕಾಣಬಹುದು. ದೇಶದ ನಾಗರಿಕರಾದ ಪ್ರತಿಯೊಬ್ಬರೂ ದೇಶದ ಅಭಿವೃದ್ಧಿ ಬಗ್ಗೆ ನಮ್ಮದೇ ಆದಂತಹ ಜವಾಬ್ದಾರಿ ಇರುತ್ತದೆ. ಅದನ್ನು ನಿರ್ವಹಿಸಿದರೆ ಉತ್ತಮ ಸತ್ಪ್ರಜೆ ಎಂಬ ಹೆಗ್ಗಳಿಕೆಗೆ ವಿದ್ಯಾರ್ಥಿಗಳು ಪಾತ್ರರಾಗುತ್ತಾರೆ ಎಂದರು.
ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್ ಮಾತನಾಡಿದರು. ವಿದ್ಯಾರ್ಥಿ ನಿಲಯಪಾಲಕ ಬಸವಣ್ಣ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಪೊಲೀಸ್ ಇಲಾಖೆಯ ಎಸ್‌ಜೆಪಿಯು ಯೂನಿಟ್‌ನ ಪ್ರಸನ್ನಮೂರ್ತಿ, ಯುವ ಸ್ಪಂದನ ಕೇಂದ್ರದ ಯುವ ಪ್ರವರ್ತಕ ಗುರುರಾಜ್, ಬಿ.ಕೆ.ಆರಾಧ್ಯ ಇದ್ದರು.