

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಭರಚುಕ್ಕಿಯಲ್ಲಿ ಆ.10 ರಂದು ಆಯೋಜನೆ ಮಾಡಿರುವ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರನ್ನು ಪರಿಗಣಿಸಿ ಎಂದು ಕಲಾವಿದರು ಬುಧವಾರ ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಮುಂಭಾಗ ಜಮಾಯಿಸಿದ ಕಲಾವಿದರು ಭರಚುಕ್ಕಿ ಜಲಪಾತೋತ್ಸವದಲ್ಲಿ ಸ್ಥಳೀಯ ಕಲಾವಿದರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕನ್ನಡ ಜನಪದ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ್ ನಾಗ್ ಮಾತನಾಡಿ, ಕೊಳ್ಳೇಗಾಲ ತಾಲೂಕು ಭರಚುಕ್ಕಿ ಜಲಪಾತೋತ್ಸವ ಬಗ್ಗೆ ಕಲಾವಿದರಿಗೆ ಮಾಹಿತಿ ದೊರಕಿಲ್ಲ. ಈ ಕುರಿತು ಸಂಘ-ಸಂಸ್ಥೆಗಳ ಸಭೆ ಕರೆದಿಲ್ಲ. ಕೇವಲ ಎರಡು ದಿವಸದಲ್ಲಿ ಉತ್ಸವ ಮಾಡುತ್ತಿದ್ದಾರೆ. ಮಳೆ ಹಾಗೂ ನೆರೆಹಾವಳಿಯಲ್ಲಿ ಎಷ್ಟೋ ಜನರಿಗೆ ತೊಂದರೆ ಆಗಿದೆ. ಈ ನಿಟ್ಟಿನಲ್ಲಿ ಒಂದು ದಿನಕ್ಕೆ ಕಾರ್ಯಕ್ರಮವನ್ನು ಸೀಮಿತಗೊಳಿಸಬೇಕು. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಆಕಾಶವಾಣಿ ಕಲಾವಿದೆ ಹೊನ್ನಮ್ಮ, ಕಲಾವಿದರಾದ ದೇವಮ್ಮ, ಪುಟ್ಟನಂಜಮ್ಮ, ಶಿವಣ್ಣ, ರಾಜಣ್ಣ, ರಂಗಸ್ವಾಮಿ, ಜಿ.ಬಂಗಾರು, ಗೌರಿಶಂಕರ, ಸಿದ್ದನಾಯಕ, ಕನ್ನಡ ಗಾನಕೋಗಿಲೆ ಮಹೇಶ್ ಹಾಗೂ ಇನ್ನಿತರೆ ಕಲಾವಿದರು ಹಾಜರಿದ್ದರು.