ಗಡಿನಾಡ ಜನಪದ ಕೋಗಿಲೆಗಳು

07rajesh12
Published on

ಚಾಮರಾಜನಗರ: ತಾಯಿ ಹಾಡುತ್ತಿದ್ದ ಸೋಬಾನೆ ಪದಗಳನ್ನು ಕೇಳುತ್ತಾ ಬೆಳೆದ ಹುಡುಗನೊಬ್ಬ, ಜಾನಪದ ಹಾಡುಗಾರನಾಗಿ, ಜಾನಪದ ಉಳಿವಿಗೆ ಸಂಸ್ಥೆಯೊಂದನ್ನು ಕಟ್ಟಿಕೊಂಡು ಕಳೆದ ಮೂವತ್ತೂ ವರ್ಷಗಳಿಂದಲೂ ನಿರಂತರ ಕಲಾಸೇವೆ ಮಾಡಿಕೊಂಡು ಬರುತ್ತಿದ್ದಾರೆ.

ತಾಲೂಕಿನ ಹರದನಹಳ್ಳಿ ಗ್ರಾಮದ ಲೇ.ಜವರನಾಯಕ್ ಮತ್ತು ಸುಬ್ಬುಲಕ್ಷ್ಮಮ್ಮ ದಂಪತಿಗಳ ಪುತ್ರನಾದ ಜ.ಸುರೇಶ್‌ನಾಗ್ ಹರದನಹಳ್ಳಿ ಅವರು 1999 ರಲ್ಲಿ ಗಡಿನಾಡ ಜನಪದ ಕೋಗೀಲೆಗಳು ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಕಲಾಕೈಂಕರ್ಯದಲ್ಲಿ ತೊಡಗಿಕೊಂಡಿದ್ದಾರೆ. ತಾಯಿ ಹಾಡುತ್ತಿದ್ದ ಸೋಬಾನೆ ಪದಗಳು ಹಾಗೂ ರಂಗಭೂಮಿ ಕಲಾವಿದ ಘಟಂ ಕೃಷ್ಣ ಮತ್ತು ಹ.ಸೂ.ರಾಜಶೇಖರ್ ಅವರ ಸ್ಪೂರ್ತಿಯಿಂದ ಜನಪದ ಹಾಡುಗಾರಿಕೆಯನ್ನೇ ಜೀವಾಳವಾಗಿಸಿಕೊಂಡರು. ಮೊದಲಿಗೆ 1980 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲು ಜನಪದ ಗಾಯನ ಮಾಡಿದ್ದರು. ಬಳಿಕ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ನಡೆಯುತ್ತಿದ್ದ ಮಕ್ಕಳ ಮೇಳ ಕಾರ್ಯಕ್ರಮ ಹಾಗೂ ಇನ್ನಿತರೆ ನೂರಾರು ಕಾರ್ಯಕ್ರಮಗಳಲ್ಲಿ ಜಾನಪದ ಹಾಡುಗಳನ್ನು ಹಾಡುವ ಮೂಲಕ ಸಾಕಷ್ಟು ಹೆಸರು ಮಾಡಿದರು.

ತಾವು ಬೆಳೆಯುವ ಜತೆಗೆ ಜಾನಪದ ಕಲೆಗಳ ವಿವಿಧ ಪ್ರಕಾರಗಳಾದಂತಹ ಜನಪದ ಗೀತೆ, ಸೋಬಾನೆ ಕಲಾವಿದರು, ತಂಬೂರಿ ಕಲಾವಿದರು, ಬೀಸೂ ಕಂಸಾಳೆ ಕಲಾವಿದರು, ಹುಲಿ ವೇಷ ಹಾಗೂ ಇನ್ನಿತರೆ ಕಲಾ ಪ್ರಕಾರಗಳ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರತಿವರ್ಷ ಸಂಸ್ಥೆಯ ವತಿಯಿಂದ ಗೌರವ ಸನ್ಮಾನವನ್ನು ಮಾಡುತ್ತಾ ಬರಲಾಗಿದೆ. ಈ ಕಲಾವಿದರಿಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಅವಕಾಶ ಮಾಡಿಕೊಡುತ್ತಿದ್ದಾರೆ. ಜಾನಪದ ಗೀತೆ ಗಾಯನದ ಜತೆಗೆ ರಂಗಭೂಮಿಯಲ್ಲೂ ಛಾಪುಮೂಡಿಸಿರುವ ಸುರೇಶ್‌ನಾಗ್ ಅವರು ಚಲನಚಿತ್ರಗಳಲ್ಲೂ ಅಭಿನಯಿಸುವ ಮೂಲಕ ಹೆಸರು ಮಾಡಿದ್ದಾರೆ. ಇವರ ಜನಪದ ಸೇವೆಗಳನ್ನು ಗುರುತಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ಹಲವೆಡೆ ಕಾರ್ಯಕ್ರಮ:
ಜನಪದ ಗಾಯನವನ್ನೇ ಉಸಿರಾಗಿಸಿಕೊಂಡಿರುವ ಕಲಾವಿದ ಜ.ಸುರೇಶ್‌ನಾಗ್ ಅವರು ಕಳೆದ 30 ವರ್ಷಗಳಿಂದ ಜಾನಪದ ಗಾಯನದಲ್ಲಿ ನಿರತರಾಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಾನಪದ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. 2017 ರಲ್ಲಿ ಅಸ್ಸಾಂ, ಮಣಿಪುರ ರಾಜ್ಯಗಳಲ್ಲಿ ಜಾನಪದ ಝೇಂಕಾರ ಎಂಬ ಹೊರನಾಡು ಕನ್ನಡಿಗರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಗಡಿನಾಡ ಜನಪದ ಕೋಗಿಲೆಗಳು ಸಂಸ್ಥೆಗೂ ಮುನ್ನಾ 1992 ರಲ್ಲಿ ಕನ್ನಡ ಮಿತ್ರ ಬಳಗ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಕನ್ನಡ ರಾಜ್ಯೋತ್ಸವ ಮತ್ತು ಕನ್ನಡದಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಿಕೊಂಡು ಬಂದಿದ್ದಾರೆ. ಸಕ್ರೀಯವಾಗಿ 30 ವರ್ಷಗಳ ಕಾಲ ಕನ್ನಡಪರ ಹೋರಾಟಗಾರ ವಾಟಾಳ್‌ನಾಗರಾಜ್ ಅವರ ತೆಗೆ ನಾಡು-ನುಡಿ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಹ.ಸೂ.ರಾಜಶೇಖರ್ ಅವರ ಜೀವನ ಚರಿತ್ರೆಯನ್ನು ಆಧರಿಸಿ ಸಾಕ್ಷ್ಯಚಿತ್ರವನ್ನೂ ನಿರ್ದೇಶನ ಮಾಡಿದ್ದಾರೆ.

ರಂಗಭೂಮಿಯಲ್ಲೂ ಛಾಪು:
ಸುರೇಶ್‌ನಾಗ್ ಅವರ ತಂದೆ ಸ್ಕೂಲ್ ಮಾಸ್ಟರ್ ಜವರನಾಯಕ್ ಅವರು 1979 ರಲ್ಲಿ ಸಂಪೂರ್ಣ ರಾಮಾಯಣ ನಾಟಕದಲ್ಲಿ ದಶರಥ ಪಾತ್ರದಲ್ಲಿ ಅಭಿನಯಿಸಿದ್ದರು. ಈ ವೇಳೆ ಸುರೇಶ್ ಜಾಂಬುವಂತ ಪಾತ್ರಕ್ಕೆ ಮೊದಲು ಬಣ್ಣ ಹಚ್ಚಿದ್ದರು. ಆ ಮೂಲಕ ರಂಗಭೂಮಿಯ ನಂಟನ್ನು ಬೆಳೆಸಿಕೊಂಡರು. ಪೌರಾಣಿಕ ನಾಟಕಗಳಾದ ದಕ್ಷಯಜ್ಞ ನಾಟಕದಲ್ಲಿ ಚಂದ್ರಮನ ಪಾತ್ರ, ಕುರುಕ್ಷೇತ್ರದಲ್ಲಿ ದುಶ್ಯಾಸನ, ದಾನಶೂರ ಕರ್ಣ ನಾಟಕದಲ್ಲಿ ಕೃಷ್ಣನಾಗಿ, ಶಿವಕುಮಾರ ಅಥವಾ ವಲ್ಲಿ ಪರಿಣಯ ನಾಟಕದಲ್ಲಿ ಮುರುಗನಾಗಿ ಹಾಗೂ ಇನ್ನಿತರೆ ಪೌರಾಣಿಕ ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತ್ಯಾಗಿ ಎಂಬ ಸಾಮಾಜಿಕ ನಾಟಕವನ್ನು ನಿರ್ದೇಶನ ಮಾಡಿದ್ದು, ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ನಾಟಕ ಸತತ 100 ಪ್ರದರ್ಶನಗಳನ್ನು ಕಂಡಿತ್ತು ಎಂಬುದು ವಿಶೇಷವಾಗಿದೆ. ಇದಲ್ಲದೇ 1996 ರಲ್ಲಿ ಹೃದಯದ ಬಾಗಿಲು ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದರು. ಅದಲ್ಲದೇ ಚಾಮರಾಜನಗರ ಹರದನಹಳ್ಳಿಯವರೇ ಆದ ಹ.ಸೂ.ರಾಜಶೇಖರ್ ನಿರ್ದೇಶನದ ಕರ್ಫ್ಯೂ ಚಲನಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದರು. ನಿಶ್ಚಿತಾರ್ಥ, ಪಾಪಿಗಳ ಲೋಕದಲ್ಲಿ, ಮಿಸ್ಟರ್ ಎಕ್ಸ್, ವಿಶ್ವಾಮಿತ್ರ ಚಿತ್ರಗಳಲ್ಲಿ ಪೊಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಹಲವು ಪ್ರಶಸ್ತಿ, ಪುರಸ್ಕಾರ:
ಕರ್ನಾಟಕ ಪ್ರೆಸ್‌ಕ್ಲಬ್ ವತಿಯಿಂದ ಕನ್ನಡ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ, ರಾಜ್ಯ ಯುವ ಸಂಘಗಳ ಒಕ್ಕೂಟದ ವತಿಯಿಂದ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ ಲಭಿಸಿದೆ. ಇದಲ್ಲದೇ ಜಿಲ್ಲಾ ಸಂಘಟನೆಗಳಿಂದ ಗಡಿನಾಡ ರತ್ನ, ಜಾನಪದ ಕೋಗಿಲೆ, ನಮ್ಮೂರ ರತ್ನ ಎಂಬ ಸಾಲು ಸಾಲು ಪ್ರಶಸ್ತಿಗಳು ದೊರೆತಿವೆ. ಇವರ ಜನಪದ ಸೇವೆಯನ್ನು ಗುರುತಿಸಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಜನಪದ ಡಾ.ಬಾಲಾಜಿ ಅವರು ಸುರೇಶ್‌ನಾಗ್ ಅವರನ್ನು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಜಾನಪದ ಪರಿಷತ್ ಸಂಸ್ಥೆಯಿಂದ ಜಿಲ್ಲೆಯ ನಾಲ್ಕು ಜನರಪದ ಕಲಾವಿದರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ನಮ್ಮ ಹಿಂದಿನ ತಲೆಮಾರಿನವರು ಕಟ್ಟಿದ ಜನಪದವನ್ನು ಇಂದಿಗೂ ಉಳಿಸಿಕೊಂಡು ಹೋಗಲಾಗುತ್ತಿದೆ. ಇದರಲ್ಲಿ ಯಾರು ಮೇಲು-ಕೀಳು ಎಂದು ಗುರುತಿಸಲು ಸಾಧ್ಯವಿಲ್ಲ. ಪ್ರಸ್ತುತ ಆಧುನಿಕ ಸಂದರ್ಭದಲ್ಲಿ ಜನಪದ ಕಲಾವಿದರು ಹಾಗೂ ಜನಪದವನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಮುಂದಾಗಬೇಕು.
-ಜ.ಸುರೇಶ್‌ನಾಗ್, ಜನಪದ ಕಲಾವಿದ, ಹರದನಹಳ್ಳಿ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net