

ಚಾಮರಾಜನಗರ: ರಾಜ್ಯ ಸರ್ಕಾರ ಎಸ್ಸಿಎಸ್ಪಿ/ಟಿಎಸ್ಪಿ ಮೀಸಲು ಅನುದಾನದ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸುವುದನ್ನು ಖಂಡಿಸಿ ಬಹುಜನ ಸಮಾಜ ಪಕ್ಷದ ಚಂದಕವಾಡಿ ಹೋಬಳಿ ಘಟಕದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ ಚಂದಕವಾಡಿ ಹೋಬಳಿ ಕೇಂದ್ರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಬಿ.ಆರ್.ಹಿಲ್ಸ್ ರಸ್ತೆಯ ಮೂಲಕ ನಾಡಕಚೇರಿಗೆ ತೆರಳಿ ಉಪ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಎಸ್ಸಿ/ಎಸ್ಟಿಗಳ ಅಭಿವೃದ್ಧಿಗೆಂದು ಜಾರಿಗೆ ತಂದ ಎಸ್ಸಿಎಸ್ಪಿ ಮತ್ತು ಟಿಎಸ್ಪಿಯ ಹಣವನ್ನು 2023-24 ಮತ್ತು 2024-25ನೇ ಸಾಲಿನ 2 ವರ್ಷಗಳಲ್ಲಿ ರೂ. 25 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಎಸ್ಸಿ,ಎಸ್ಟಿಗಳ ಕುತ್ತಿಗೆ ಕುಯ್ಯುವ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಈವರೆಗೂ 70 ಸಾವಿರ ಕೋಟಿ ರೂ. ದುರ್ಬಳಕೆಯಾಗಿದೆ ಎನ್ನಲಾಗಿದೆ. ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಜಾರಿಯಾದಾಗಿನಿಂದ ಇದೂವರೆಗೆ 2 ಲಕ್ಷ ಕೋಟಿಗಳನ್ನು ಈ ಯೋಜನೆಗೆ ಒದಗಿಸಲಾಗಿದೆ. ಇಷ್ಟು ಹಣದಿಂದ ಕರ್ನಾಟಕದ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣದಿಂದ ಬಿಇ, ಎಂ.ಬಿ.ಬಿ.ಎಸ್,ಪಿ.ಎಚ್‌ಡಿ ವರೆಗೆ ಉಚಿತ ಶಿಕ್ಷಣ ನೀಡಬಹುದಿತ್ತು. ಲಕ್ಷಾಂತರ ಎಸ್ಸಿ,ಎಸ್ಟಿ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಒದಗಿಸಬಹುದಿತ್ತು ಎಂದರು.
ಆದರೆ ಭಾವನಾತ್ಮಕವಾಗಿ ಎಸ್ಸಿ,ಎಸ್ಟಿ, ಓಬಿಸಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಕೆರಳಿಸಿ, ಈ ವರ್ಗದ ಶೇ. 90 ರಷ್ಟು ಓಟುಗಳನ್ನು ಪಡೆದುಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಎಸ್ಸಿ, ಎಸ್ಟಿಗಳನ್ನು ಮುಖ್ಯಮಂತ್ರಿ ಮಾಡುವುದಿರಲಿ, ಉಪಮುಖ್ಯಮಂತ್ರಿಯನ್ನು ಮಾಡಲಿಲ್ಲ.ಸಂವಿಧಾನ ಉಳಿಸುತ್ತೇವೆಂದು ಕಾಂಗ್ರೆಸ್ ನಮಗೆ ಸಂವಿಧಾನಾತ್ಮಕವಾಗಿ ನೀಡಿರುವ ಎಲ್ಲಾ ಹಕ್ಕುಗಳನ್ನು ಮತ್ತು ಯೋಜನೆಗಳನ್ನು ಪ್ರತ್ಯಕ್ಷ, ಪರೋಕ್ಷವಾಗಿ ರದ್ದುಮಾಡಿತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಿಎಸ್ಪಿ ತಾಲೂಕು ಅಧ್ಯಕ್ಷ ಚಂದ್ರಕಾಂತ್, ಹೋಬಳಿ ಘಟಕದ ಅಧ್ಯಕ್ಷ ಸಂತೋಷ್, ಜಿಲ್ಲಾ ಸಂಯೋಜಕ ಅಮಚವಾಡಿ ಪ್ರಕಾಶ್, ರಾಜಶೇಖರ್, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ರಾಜೇಂದ್ರ, ಕಾರ್ಯದರ್ಶಿ ಎಸ್.ಪಿ.ಮಹೇಶ್, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಶಂಕರ್, ಖಜಾಂಚಿ ಕೃಷ್ಣಮೂರ್ತಿ, ಬಿವಿಎಫ್ ರವಿಮೌರ್ಯ, ಗ್ರಾ.ಪಂ.ಸದಸ್ಯ ಬಾಲರಾಜು, ಟೌನ್ ಅಧ್ಯಕ್ಷ ಗಾಳೀಪುರ ರಂಗಸ್ವಾಮಿ ಇತರರು ಭಾಗವಹಿಸಿದ್ದರು.