

ಚಾಮರಾಜನಗರ: ಕರ್ನಾಟಕದ ಮಾರುಕಟ್ಟೆಗೆ ‘ಕೆಂಪು ಚಿನ್ನ’ ಖರೀದಿ ಮಾಡಲು ಬರುತ್ತಿರುವ ಕೇರಳದ ವ್ಯಾಪಾರಿಗಳಿಗೆ ಮಾಲು ಸಿಗುತ್ತಿಲ್ಲ.
ಬೆಲೆ ಗಗನಕ್ಕೇರಿರುವ ಟಮೋಟೋಗೆ ಭಾರಿ ಡಿಮ್ಯಾಂಡ್ ಸೃಷ್ಟಿಯಾಗಿದೆ. ತರಕಾರಿಗಾಗಿ ಕರ್ನಾಟಕದ ಮಾರುಕಟ್ಟೆಯನ್ನೇ ಆಶ್ರಯಿಸಿರುವ ಕೇರಳ ವ್ಯಾಪಾರಿಗಳು ಟಮೋಟೋ ಖರೀದಿಗಾಗಿ ಗಡಿಯಲ್ಲಿರುವ ಗುಂಡ್ಲುಪೇಟೆಗೆ ಬರುತ್ತಿದ್ದಾರೆ. ಆದರೆ ಇವರಿಗೆ ಪಟ್ಟಣದಲ್ಲಿರುವ ಎಪಿಎಂಸಿ, ತೆರಕಣಾಂಬಿಯಲ್ಲಿರುವ ತರಕಾರಿ ಹರಾಜು ಮಾರುಕಟ್ಟೆಯಲ್ಲಿ ನಿರೀಕ್ಷೆಯಷ್ಟು ಟಮೋಟೋ ಸಿಗುತ್ತಿಲ್ಲ.
ಎಪಿಎಂಸಿಯಲ್ಲಿರುವ 100 ಮಂಡಿಗಳಲ್ಲಿ ಒಂದೊಂದು ಮಂಡಿಗೂ ಅಂದಾಜು 500 ಕೆ.ಜಿಯಷ್ಟು ಟಮೋಟೋ ಬರುತ್ತಿದೆ. ಇಷ್ಟಿದ್ದರೂ ಕೇರಳ ವ್ಯಾಪಾರಿಗಳಿಗೆ ಸಾಕಾಗುತ್ತಿಲ್ಲ. ಮೈಸೂರಿನ ಮಾರುಕಟ್ಟೆಗೆ ಹೋಗುತ್ತಿದ್ದಾರೆ. ಮೊದಲೆಲ್ಲಾ ಹೀಗಿರಲಿಲ್ಲ. ಗುಂಡ್ಲುಪೇಟೆಯ ಮಾರುಕಟ್ಟೆಗಳು ಕೇರಳದ ವ್ಯಾಪಾರಿಗಳ ಪಾಲಿಗೆ ಅಕ್ಷಯ ಪಾತ್ರೆಯಂತಿದ್ದವು. ಕೇರಳಕ್ಕೆ ಹೋಲಿಸಿದರೆ ಇಲ್ಲಿ ತರಕಾರಿ ಬೆಲೆಯೂ ಕಡಿಮೆ ಇರುತ್ತಿತ್ತು. ಖರೀದಿ ಮಾಡಿವಷ್ಟೂ ತರಕಾರಿಗಳು ಇಲ್ಲಿ ಸಿಗುತ್ತಿತ್ತು. ಟಮೋಟೋ ಬೆಲೆಯೂ ಕಡಿಮೆ ಇರುತ್ತಿತ್ತು. ಇದನ್ನು ಕೇಳುವವರೇ ಇರುತ್ತಿರಲಿಲ್ಲ.
ಆದರೆ ಈಗ ಟಮೋಟೋ ಬೆಲೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ. ಎಷ್ಟು ಸಿಗುತ್ತದೆಯೋ ಅಷ್ಟು ಟಮೋಟೋವನ್ನು ಕೆ.ಜಿಗೆ 80 ರೂ.ಗಳಂತೆ ಖರೀದಿ ಮಾಡುತ್ತಿರುವ ವ್ಯಾಪಾರಿಗಳು ಕೇರಳದಲ್ಲಿ 100ರಿಂದ 120 ರೂ.ಗೆ ಮಾರಾಟ ಮಾಡುತ್ತಿದ್ದಾರೆ.
ಗುಂಡ್ಲುಪೇಟೆಯಲ್ಲಿ ಈ ವರ್ಷ ಸುಮಾರು 280 ಎಕರೆಯಲ್ಲಿ ಟಮೋಟೋ ಬೆಳೆ ಬೆಳೆದಿದ್ದಾರೆ. ಕಳೆದ ವರ್ಷ ಇದಕ್ಕಿಂತಲೂ ಹೆಚ್ಚು ಪ್ರದೇಶದಲ್ಲಿ ಬೆಳೆ ಬೆಳೆಯಲಾಗಿತ್ತು. ಆದರೆ ಈ ಸಲ ಹವಾಮಾನ ಬದಲಾವಣೆ, ರೋಗ ಬಾಧೆಯಿಂದ ಟಮೋಟೋ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೇ ಟಮೋಟೋ ಬೆಲೆ ಕಡಿಮೆ ಇದ್ದ ಕಾರಣಕ್ಕೆ ರೈತರು ಬೇರೆ ಬೆಳೆಗಳತ್ತ ಆಸಕ್ತಿ ತೋರಿದರು. ಇದರ ಪರಿಣಾಮ ಟಮೋಟೋ ಹೆಚ್ಚಾಗಿ ಬೆಳೆಯುತ್ತಿದ್ದ ಗುಂಡ್ಲುಪೇಟೆಯಲ್ಲಿ ‘ಕೆಂಪು ಚಿನ್ನ’ ಕಡಿಮೆಯಾಗಿದೆ.
ಟಮೋಟೋಗೆ ನಾಯಿ ಬೊಗಳುವ ಸದ್ದೇ ರಕ್ಷೆ:
ಕಾಡುಹಂದಿ ಕಾಟವಿರುವ ಗ್ರಾಮಗಳ ಸುತ್ತಮುತ್ತಲಿನ ಜಮೀನುಗಳಲ್ಲಿ ಟಮೋಟೋ ಬೆಳೆದಿರುವ ರೈತರಿಗೆ ಬೆಳೆ ರಕ್ಷಣೆಯ ಸವಾಲು ಎದುರಾಗಿದ್ದು, ಗುಂಡ್ಲುಪೇಟೆಯ ರೈತನೊಬ್ಬನ ಟಮೋಟೋ ಬೆಳೆಯನ್ನು ನಾಯಿ ಬೊಗಳುವ ಸದ್ದು, ಮನುಷ್ಯನ ಜೋರಾದ ಕೂಗಾಟ ರಕ್ಷಣೆ ಮಾಡುತ್ತಿದೆ.
ಕುಮಚಹಳ್ಳಿ ಗ್ರಾಮದ ರೈತ ಮಧು 2 ಎಕರೆ ಜಮೀನಿನಲ್ಲಿ ಟಮೋಟೋ ಬೆಳೆದಿದ್ದಾರೆ. ಬೆಳೆಯೂ ಕೂಯ್ಲಿಗೆ ಬಂದಿದ್ದು, ಈ ಗ್ರಾಮದಲ್ಲಿ ಕಾಡುಹಂದಿಗಳ ಉಪಟಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದರ ಏರಿಕೆ ಕಂಡಿರುವ ಟಮೋಟೋವನ್ನು ಉಳಿಸಿಕೊಳ್ಳಲು ಲೌಡ್ ಸ್ಪೀಕರ್ ಖರೀದಿ ಮಾಡಿದ್ದಾರೆ. ಇದರಲ್ಲಿ ನಾಯಿ ಬೊಗಳುವ ಸದ್ದು ಮತ್ತು ತಾನೇ ಜೋರಾಗಿ ಕೂಗಾಡುವುದನ್ನು ರೆಕಾರ್ಡ್ ಮಾಡಿದ್ದಾರೆ. ಈ ಕುರಿತು ವಿಜಯವಾಣಿಯೊಂದಿಗೆ ರೈತ ಮಧು ಮಾತನಾಡಿ, ರಾತ್ರಿ ವೇಳೆ ಜಮೀನು ಕಾಯುವಾಗಿ ಲೌಡ್ ಸ್ಪೀಕರ್ ಆನ್ ಮಾಡಿ ನಾಯಿ ಬೊಗಳುವ ಸದ್ದು ಕೇಳಿಸುತ್ತಿದ್ದೇನೆ. ಇದರಿಂದ ಕಾಡುಹಂದಿಗಳು ಜಮೀನಿನ ಕಡೆಗೆ ಬರುತ್ತಿಲ್ಲ. ಪ್ರಾಣಿಗಳ ಕಾಟದಿಂದ ಬೆಳೆ ಹಾನಿ ತಪ್ಪಿಸಲು ಲೌಡ್ ಸ್ಪೀಕರ್ ಉಪಯೋಗಿಸುತ್ತಿದ್ದೇನೆ. ಆದರೆ ಕಳ್ಳರಿಂದ ಟಮೋಟೋ ರಕ್ಷಣೆ ಮಾಡಲು ಸ್ವತಃ ನಾನೇ ರಾತ್ರಿ ವೇಳೆ ಜಮೀನು ಕಾಯುತ್ತಿದ್ದೇನೆ ಎಂದಿದ್ದಾರೆ.
ತಮಿಳುನಾಡಿಗೆ ಕಡಿಮೆ:
ತಮಿಳುನಾಡು ವ್ಯಾಪಾರಿಗಳು ಸಮೀಪದಲ್ಲೇ ಇರುವ ಗುಂಡ್ಲುಪೇಟೆಯಲ್ಲಿ ತರಕಾರಿ ಖರೀದಿ ಮಾಡುತ್ತಿದ್ದಾರೆ. ಪ್ರಸ್ತುತ ಟಮೋಟೋ ಕೇರಳದ ವ್ಯಾಪಾರಿಗಳಿಗೇ ಸಾಲುತ್ತಿಲ್ಲ. ಹಾಗಾಗಿ ತಮಿಳುನಾಡಿನ ವ್ಯಾಪಾರಿಗಳಿಗೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿನ ವ್ಯಾಪಾರಿಗಳು ಹೇಳಿದ್ದಾರೆ.
ಮಾರುಕಟ್ಟೆಗೆ ನಿರೀಕ್ಷೆಯಷ್ಟು ಟಮೋಟೋ ಬರುತ್ತಿಲ್ಲ. ಕೇರಳದ ವ್ಯಾಪಾರಿಗಳಿಗೆ ಟಮೋಟೋ ಸಾಕಾಗುತ್ತಿಲ್ಲ. ಇನ್ನು ತಮಿಳುನಾಡಿಗೆ ಮಾರಾಟ ಮಾಡೋದೆಲ್ಲಿ?. ಟಮೋಟೋ ಬೆಳೆ ಕಡಿಮೆಯಾಗಲು ಮಳೆ ಕೊರತೆ, ಬೆಲೆ ಕಡಿಮೆ ಮಾತ್ರವಲ್ಲದೆ, ನೀರು ಹಾಯಿಸಲು ವಿದ್ಯುತ್ ಸಮಸ್ಯೆಯೂ ಕಾರಣ.-ಮಾಡ್ರಳ್ಳಿ ಮಹದೇವಪ್ಪ, ಗುಂಡ್ಲುಪೇಟೆ ಎಪಿಎಂಸಿ ನಿರ್ದೇಶಕ ಮತ್ತು ವ್ಯಾಪಾರಿ